ADVERTISEMENT

ಹಗುರಾಯಿತು ಮನಸು...

ನಳಿನಿ ಟಿ.ಭೀಮಪ್ಪ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಎಂಜಿನಿಯರ್ ಆಗಿದ್ದ ಅಪ್ಪನಿಗೆ ಕುಟುಂಬದಲ್ಲಿ ಒಬ್ಬರಾದರೂ ಮೆಡಿಕಲ್ ಓದಬೇಕೆಂಬ ಆಸೆ ತುಂಬಾ ಇತ್ತು.  ಅವರ ತಮ್ಮ ಹಾಗೂ ತಂಗಿಯರಿಗೆ ಶಿಕ್ಷಣಕ್ಕೆ ತುಂಬಾ ಉತ್ತೇಜನ ನೀಡಿದರು.  ಆದರೆ ಎಲ್ಲರೂ ಶಿಕ್ಷಣದಲ್ಲಿ ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿದಾಗ ಅಪ್ಪನಿಗೆ ನಿರಾಸೆಯಾದರೂ ಅವರ ಆಯ್ಕೆಗಳಿಗೆ ಗೌರವ ಕೊಟ್ಟರು. ಹಾಗಾಗಿ ಹಿರಿಯ ಮಗಳಾದ ನನಗೆ ಬಾಲ್ಯದಿಂದಲೂ ನೀನು ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕು ಎಂಬ ಕನಸನ್ನು ಬಿತ್ತುತ್ತಾ ಬಂದರು. 

ಆದ್ದರಿಂದ ವೈದ್ಯಶಿಕ್ಷಣವೇ ನನ್ನ ಆಯ್ಕೆಯಾಗಿತ್ತು. ಹಾಗಾಗಿ 1988ನೇ ಇಸವಿಯಲ್ಲಿ  ಎಸ್‌ಎಸ್‌ಎಲ್‌ಸಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಹುಬ್ಬಳ್ಳಿಯ ಪಿ.ಸಿ. ಜಾಬೀನ್ ಕಾಲೇಜಿನಲ್ಲಿ ಪಿಯುಸಿ ಸೀಟು ಸಿಕ್ಕಾಗ ವೈದ್ಯ ಶಿಕ್ಷಣಕ್ಕೆ ಯಾವ ಅಡೆತಡೆಯೂ ಇಲ್ಲವೆಂದು ಹಿಗ್ಗಿ ಮನಸ್ಸಿಟ್ಟು ಓದತೊಡಗಿದೆ.

ಆದರೆ ಅದೇ ವರ್ಷ ಅಪ್ಪನಿಗೆ ಚಿತ್ರದುರ್ಗದಲ್ಲಿ ಕೆಲಸ ಸಿಕ್ಕಿ ಹೊರಟಾಗ ನನಗೆ ತುಂಬಾ ನಿರಾಸೆಯಾಗಿತ್ತು. ನನ್ನನ್ನು ಹಾಸ್ಟೆಲ್‌ನಲ್ಲಿ ಬಿಡುವುದಕ್ಕೆ ಅಮ್ಮ ತಯಾರಿರಲಿಲ್ಲ.  ಹಾಗಾಗಿ ಚಿತ್ರದುರ್ಗದಲ್ಲಿ ಶಿಕ್ಷಣ ಮುಂದುವರೆಸಬೇಕಾಯಿತು.  ಪಿಯುಸಿ ಬೋರ್ಡ್ ಹಾಗೂ ಸಿಇಟಿ ಚೆನ್ನಾಗೇ ಮಾಡಿದ್ದರೂ ಕೆಲವು ಅಂಕಗಳಿಂದ ಮೆಡಿಕಲ್ ಸೀಟು ತಪ್ಪಿ   ಕುಗ್ಗಿ ಹೋಗಿದ್ದೆ.  ಆದರೆ ಅಪ್ಪ ಭರವಸೆ ಕಳೆದುಕೊಂಡಿರಲಿಲ್ಲ.  ಪೇಮೆಂಟ್ ಸೀಟ್‌ಗೆ ಸಾಲ ಮಾಡಿ ದುಡ್ಡು ಹೊಂಚಿ ನನ್ನನ್ನು ಮೆಡಿಕಲ್‌ಗೆ ಸೇರಿಸಲು ತಯಾರಾದಾಗ ಸ್ವರ್ಗಕ್ಕೆ ಮೂರೇ ಗೇಣು.

ಮರುದಿನ ಅಮ್ಮ ಮನೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಿ ಹೇಳಿದರು.  ಅಪ್ಪ ತನ್ನ ತಂಗಿ ತಮ್ಮಂದಿರ ಶಿಕ್ಷಣ ಹಾಗೂ ಮದುವೆಗೆ ಮಾಡಿದ ಸಾಲವೇ ಬೆಟ್ಟದಷ್ಟಿತ್ತು.  ಅದರ ಜೊತೆಗೆ ನನ್ನ ಶಿಕ್ಷಣದ ಸಾಲವೂ ಸೇರಿದರೆ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಡುವ ಸಂಭವವಿತ್ತು. ಇಷ್ಟೆಲ್ಲಾ ಹಣಕಾಸಿನ ತೊಂದರೆಯ ನಡುವೆಯೂ ಅಪ್ಪ ವೈದ್ಯಳಾಗುವ ನನ್ನ ಆಯ್ಕೆಯನ್ನು ಬೆಂಬಲಿಸಿ ನನಸು ಮಾಡಲು ತಯಾರಾಗಿದ್ದು ಹೆಮ್ಮೆಯೆನಿಸಿತ್ತು. 

ಆ ಕಾಲದಲ್ಲಿ ಆ ಪೇಮೆಂಟ್ ಸೀಟಿನ ಮೊತ್ತಕ್ಕೆ ಒಂದು ಅದ್ದೂರಿ ಮದುವೆಯನ್ನು ಮಾಡಿ ಮುಗಿಸಬಹುದಿತ್ತು.  ಹೀಗಾಗಿ ನನ್ನ ವೈದ್ಯಶಿಕ್ಷಣದ ಆಯ್ಕೆಯನ್ನು ಅದುಮಿಟ್ಟು ನಾನೇ ಹಠ ಮಾಡಿ ವಿಜ್ಙಾನ ಪದವಿಗೆ ದಾಖಲಾಗಲು ಆದ್ಯತೆ ನೀಡಿದ್ದೆ.  ಅಪ್ಪನ ಹಣಕಾಸಿನ ತೊಂದರೆಯನ್ನು ನನ್ನಿಂದ ಕಡಿಮೆ ಮಾಡಲಾಗದಿದ್ದರೂ ಹೆಚ್ಚು ಮಾಡಲಿಲ್ಲವಲ್ಲ ಎಂಬ ತೃಪ್ತಿ ಈಗಲೂ ಮನಸ್ಸನ್ನು ಹಗುರಾಗಿಸುತ್ತದೆ.  ವೈದ್ಯಳಾಗದಿದ್ದರೇನಂತೆ ಅಪ್ಪನಿಗೆ ಮೆಚ್ಚಿನ ಮಗಳಾಗಿದ್ದೇನಲ್ಲಾ ಅದೇ ಹೆಮ್ಮೆ ನನಗೆ.

ಅಪ್ಪನ ಕನಸು ನನ್ನಿಂದ ನನಸಾಗದಿದ್ದರೂ ಆ ಕನಸನ್ನು ಈಗ ಮೊಮ್ಮಕ್ಕಳಲ್ಲಿ ಸಾಕಾರಗೊಳ್ಳುವುದನ್ನು ತಾತನಾಗಿ ಕಾಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.