ADVERTISEMENT

ಹಬ್ಬಕ್ಕೆ ಉಂಡೆ, ಉಸುಳಿ, ಕಡುಬು

ನಮ್ಮೂರ ಅಡುಗೆ

ಛಾಯಾ ಪಿ.ಎಂ.
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST

ನಾಗರ ಪಂಚಮಿಯಿಂದ ಹಬ್ಬಗಳ ಸಾಲು ಆರಂಭವಾಗುತ್ತದೆ. ‘ನಾಗರ ಪಂಚಮಿ ನಾಡಿಗೆ ದೊಡ್ಡದು’ ಎಂದು ಹಾಡುತ್ತ, ಜೋಕಾಲಿ ಜೀಕುತ್ತಾರೆ. ಎಲ್ಲ ಹಬ್ಬಗಳ ವೈಶಿಷ್ಟ್ಯ ಒಂದು ಪಾಲಾದರೆ ನಾಗರ ಪಂಚಮಿಯದೇ ಒಂದು ಪಾಲು. ಈ ಹಬ್ಬಕ್ಕೆ ತವರು ಮನೆಯವರು ಬಂದು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ‘ಪಂಚಮಿ ಹಬ್ಬ ಬಂತು ಸವಿಯಾಕ..., ಅಣ್ಣ ಬರಲಿಲ್ಲ ಇನ್ನೂ ಕರಿಲಾಕ...’ ಎಂದು ಪ್ರತಿಯೊಬ್ಬ ಹೆಣ್ಣೂ ಹಂಬಲಿಸುತ್ತಾಳೆ.

ನೆನ್ನೆ ಮೊನ್ನೆ ಆಚರಿಸಿದ ಈ ಹಬ್ಬದಲ್ಲಿ ನಾಗಪ್ಪನಿಗೆ ಹಾಲು ಎರೆಯುತ್ತಾರೆ. ಮೊದಲ ದಿನ ಕಲ್ಲಿನ ನಾಗಪ್ಪನಿಗೆ ಬೆಲ್ಲದ ಹಾಲು, ಎರಡನೇ ದಿನ ಮಣ್ಣಿನ ನಾಗಪ್ಪನಿಗೆ ಬಿಳಿ ಹಾಲು ಎರೆದು, ಅರಿಶಿಣ-ಕುಂಕುಮ, ಅರಳು, ಕವಳಿಕಾಯಿ, ಹುಣಸಿಕಾಯಿ, ನೆನೆಸಿದ ಕಡ್ಲಿ, ಉಪ್ಪು, ಹೂವು, ಕೇದಿಗೆ, ಕರಿಕೆ, ಉತ್ರಾಣಿ, ಏರಿಸುವರು. ಚೌತಿ ದಿನ ಉಪವಾಸವಾದ್ದರಿಂದ ಎಲ್ಲರ ಮನೆಯಲ್ಲೂ ಚಿಗಳಿ ಉಂಡೆ, ತಂಬಿಟ್ಟು, ಪುರಿ ಉಂಡೆ, ಶೇಂಗಾ ಉಂಡೆ, ಹಾಗೂ ಬಗೆ–ಬಗೆಯ ಉಸುಳಿಗಳನ್ನು ತಯಾರಿಸಿ ನಾಗಪ್ಪನಿಗೆ ನೈವೇದ್ಯ ಮಾಡಿ, ಅದನ್ನೇ ಫಲಾಹಾರವಾಗಿ ಸ್ವೀಕರಿಸುತ್ತಾರೆ. ಪಂಚಮಿ ದಿನ ಚಟ್ನಿ, ತೊವ್ವೆ, ಪಾಯಸ, ರಾಯತ, ಭಾತ್... ಮುಂತಾದ ಹಬ್ಬದಡಿಗೆ ಮಾಡುತ್ತಾರೆ.

ಅಡುಗೆಯಲ್ಲಿ ಅಂದು ಕುಚ್ಚಿದ ಕಡುಬು ಮಾಡುವುದು ವಿಶೇಷ. ಸಂಜೆ ಎಲ್ಲರೂ ಹೊಸ ಬಟ್ಟೆ ಧರಿಸಿ ಜೋಕಾಲಿ ಜೀಕುವುದರಲ್ಲಿ ಮೈ ಮರೆತರು. ಒಂದು ವಾರದವರೆಗೂ ತಮ್ಮ ಆಪ್ತ ಬಂಧು- ಮಿತ್ರರ ಮನೆಗಳಿಗೆ ಹೋಗಿ ಉಂಡೆ, ಅವಲಕ್ಕಿ ಚೂಡ, ಅರಳು, ಕೊಬ್ಬರಿ ಬಟ್ಟಲು, ಖಣಗಳನ್ನು ಕೊಟ್ಟು ಬರುವದು ವಾಡಿಕೆ. ಅಪಾರ ಪ್ರೀತಿ ತುಂಬಿಕೊಂಡು ಹೋಗುವ ಈ ತಿಂಡಿಗಳನ್ನೆಲ್ಲರಿಗೂ ಹಂಚಲಾಗುವುದಿಲ್ಲವೆಂದೇ ಬರೆದು ಕಳುಹಿಸಿದ್ದೇವೆ. ನಿಮ್ಮ ಅನುಕೂಲಕ್ಕೆ ನೀವೇ ತಯಾರಿಸಿಕೊಂಡು ಶ್ರಾವಣ ಆಚರಿಸಿ.

ತಂಬಿಟ್ಟು
ಬೇಕಾಗುವ ಸಾಮಗ್ರಿಗಳು: ಅಕ್ಕಿ 1ಕೆ.ಜಿ, ಬೆಲ್ಲ 2 ಅಚ್ಚು, ಕೊಬ್ಬರಿ 1/4 ಕೆ.ಜಿ, ಗಸಗಸೆ-100 ಗ್ರಾಂ, ಬಿಳಿ ಎಳ್ಳು 100 ಗ್ರಾಂ.
ವಿಧಾನ: ಅಕ್ಕಿಯನ್ನು ನೀರಿನಲ್ಲಿ ತೊಳೆದು ಬಟ್ಟೆಯ ಮೇಲೆ ಹರಡಿ. ಆರಿದ ನಂತರ ಹಿಟ್ಟು ಮಾಡಿಟ್ಟುಕೊಳ್ಳಿ. ಪಾತ್ರೆಯಲ್ಲಿ ಬೆಲ್ಲ ಹಾಕಿ ನೀರು ಬೆರಸಿ ಒಲೆಯ ಮೇಲಿಡಿ. ಬೆಲ್ಲ ಕರಗಿ ಅಂಟು ಪಾಕ ಆಗುವವರೆಗೂ ಒಲೆಯ ಮೇಲೆ ಇರಲಿ. ನಂತರ ಉರಿ ಸಣ್ಣಗೆ ಮಾಡಿ, ಅಕ್ಕಿ ಹಿಟ್ಟು, ಕೊಬ್ಬರಿ ತುರಿ, ಗಸಗಸೆ, ಎಳ್ಳು ಸೇರಿಸಿ ಚೆನ್ನಾಗಿ ಗೊಟಾಯಿಸಿ ಪಾತ್ರೆಯನ್ನು ಕೆಳಗಿಳಿಸಿ. ಎರಡೂ ಕೈಗಳಿಗೆ ತುಪ್ಪ ಸವರಿಕೊಂಡು ಸಣ್ಣ-ಸಣ್ಣ ತಂಬಿಟ್ಟಿನ ಉಂಡೆಗಳನ್ನು ಕಟ್ಟಿ.

ಕುಚ್ಚಿದ ಕಡುಬು
ಬೇಕಾಗುವ ಸಾಮಗ್ರಿಗಳು:
ತೋಗರಿ ಬೇಳೆ 1ಪಾವು, ಬೆಲ್ಲ 1ಪಾವು, ಕಾಯಿತುರಿ 1 ಬಟ್ಟಲು. ಮೈದಾ ಹಿಟ್ಟು 1 ಪಾವು, ಅಗತ್ಯವಿದ್ದಷ್ಟು ಎಣ್ಣೆ ಮತ್ತು ತುಪ್ಪ.
ವಿಧಾನ: ಮೈದಾ ಹಿಟ್ಟನ್ನು ಜರಡಿ ಹಿಡಿದು, ಅದಕ್ಕೆ 1ಚಮಚ ತುಪ್ಪ ಹಾಕಿ, ಬೇಕಾದಷ್ಟು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ನೆನೆಯಲು ಬಿಡಿ. ತೋಗರಿಬೇಳೆ ಬೇಯಿಸಿ ಹೆಚ್ಚಿನ ನೀರನ್ನು ಬಸಿಯಿರಿ. ಕಾಯಿತುರಿ ಹುರಿದುಕೊಂಡು, ಅದಕ್ಕೆ ಬೆಲ್ಲ, ಬೆಂದ ಬೇಳೆ ಹಾಕಿ ಹೂರಣದ ಹದಕ್ಕೆ ಬರುವವರೆಗೂ ಒಲೆಯ ಮೇಲಿಡಿ. ಇದು ಆರಿದ ನಂತರ ರುಬ್ಬಿಕೊಳ್ಳಿ. ಈಗ ಕಲಸಿದ ಹಿಟ್ಟನ್ನು ನಾದಿಕೊಂಡು, ತೆಳ್ಳಗೆ ಪೂರಿ ಅಳತೆಯಂತೆ ಲಟ್ಟಿಸಿಕೊಂಡು, ಅದರ ಮಧ್ಯೆ ತುಸು ಹೂರಣವಿಟ್ಟು ಕಡಬಿನ ಆಕಾರಕ್ಕೆ ಮಡಚಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಒಲೆಯ ಮೇಲಿಡಿ. ನೀರು ಕುದಿಯುವಾಗ ತಯಾರಿಸಿಟ್ಟುಕೊಂಡ ಕಡಬುಗಳನ್ನು ನೀರಿನಲ್ಲಿ ಬಿಡಿ. 5 ನಿಮಿಷ ಬೆಂದ ನಂತರ ತೆಗೆದು ತಟ್ಟೆಯಲ್ಲಿಡಿ. ಘಮಘಮಿಸುವ ತುಪ್ಪ ಹಾಕಿಕೊಂಡು ಸವಿಯಿರಿ.

ADVERTISEMENT

ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿಗಳು:
ಶೇಂಗಾ 1/2 ಕೆ.ಜಿ, ಬೆಲ್ಲ 2 ಅಚ್ಚು (ಪುಡಿ ಮಾಡಿದ್ದು), ಒಣ ಕೊಬ್ಬರಿ 1/2 ಗಿಟಕು (ತುರಿದದ್ದು)
ವಿಧಾನ: ಬಾಣಲೆಯಲ್ಲಿ ಶೇಂಗಾ ಹಾಕಿ ಚೆನ್ನಾಗಿ ಹುರಿದು ಮರವೊಂದಕ್ಕೆ ಬಗ್ಗಿಸಿಕೊಂಡು ಬೀಜದ ಹೊಟ್ಟು ತೆಗೆಯಿರಿ. ನಂತರ ಮಿಕ್ಸಿಯಲ್ಲಿ ತರಿತರಿಯಗಿ ಪುಡಿ ಮಡಿಕೊಂಡು, ಅದಕ್ಕೆ ಬೆಲ್ಲ ಹಾಕಿ ಇನ್ನೊಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ, ಅದಕ್ಕೆ ಕೊಬ್ಬರಿತುರಿ ಸೇರಿಸಿ ಉಂಡೆಗಳನ್ನು ಕಟ್ಟಿಡಿ.

ಆಲೂ - ಕ್ಯಾಪ್ಸಿಕಮ್ ಭಾತ್
ಬೇಕಾಗುವ ಸಾಮಗ್ರಿಗಳು:
2 ಪಾವು ಅಕ್ಕಿ, 3 ಆಲೂ, 4 ಕ್ಯಾಪ್ಸಿಕಮ್, ಕರಿಬೇವು ಮತ್ತು ರುಚಿಗೆ ಉಪ್ಪು. ಭಾತ್ ಪುಡಿ ತಯಾರಿಸಲು 10 ಒಣಮೆಣಸಿನಕಾಯಿ, 50 ಗ್ರಾಂ ಉದ್ದಿನಬೇಳೆ ಮತ್ತು ಕಡಲೇಬೇಳೆ, 100 ಗ್ರಾಂ ಕೊತ್ತಬಂರಿ ಬೀಜ, ಸ್ವಲ್ಪ ಚಕ್ಕೆ ಹಾಗೂ ಮೊಗ್ಗು, 10 ಗ್ರಾಂ ಮೆಂತ್ಯೆ - ಜೀರಿಗೆ, 3 ಚಮಚ ಎಣ್ಣೆ.
ವಿಧಾನ: ಅಕ್ಕಿಯನ್ನು ತೊಳೆದು ಉದುರಾಗಿ ಅನ್ನ ಮಾಡಿಟ್ಟುಕೊಳ್ಳಬೇಕು. ಮಸಾಲೆ ಪದಾರ್ಥಗಳನ್ನು ಎಣ್ಣೆ ಹಾಕಿ ಹದವಾಗಿ ಹುರುದಿಟ್ಟುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಅರ್ಧ ಬಟ್ಟಲು ಎಣ್ಣೆ ಹಾಕಿ ಆಲೂ ಹಾಗೂ ಕ್ಯಾಪ್ಸಿಕಮ್ ಹೋಳುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಇದಕ್ಕೆ ಭಾತ್ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿರಿ. ಅನ್ನವನ್ನು ಒಂದು ಪಾತ್ರೆಗೆ ಹಾಕಿ. ತಯರಿಸಿಟ್ಟುಕೊಂಡ ಆಲೂ ಕ್ಯಾಪ್ಸಿಕಮ್ ಮಸಾಲೆ ಮಿಶ್ರಣವನ್ನ ಅನ್ನಕೆ ಹಾಕಿ ಕಲಸಿ.

ಪುರಿ ಉಂಡೆ
ಬೇಕಾಗುವ ಸಾಮಗ್ರಿಗಳು:
ಪುರಿ 1/2 ಸೇರು, ಬೆಲ್ಲದಪುಡಿ 1ಪಾವು, ಕೊಬ್ಬರಿ 1/2 ಗಿಟಕು (ತುರಿದದ್ದು).
ವಿಧಾನ: ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ, ಒಂದು ಲೋಟ ನೀರು ಹಾಕಿ ಒಲೆಯ ಮೇಲಿಟ್ಟು ಉಂಡೆ ಪಾಕ ಮಾಡಿಕೊಂಡು, ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಪುರಿ, ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕಲಸಿ. ಕೈಗೆ ತುಪ್ಪ ಸವರಿಕೊಂಡು ಬಿಸಿಯಾಗಿರುವಾಗಲೇ ಉಂಡೆಗಳನ್ನು ಕಟ್ಟಿಡಿ.
 

ಕವಳೀಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು
:1 ಕಪ್ ಕವಳೀಕಾಯಿ, 10 ಹಸಿಮೆಣಸಿನಕಾಯಿ, 2 ಚಮಚ ಪುಠಾಣಿ, ಕಾಲು ಕಪ್ ಹಸಿ ಕೊಬ್ಬರಿತುರಿ, 1ಟೀ ಸ್ಪೂನ್ ಜೀರಿಗೆ, ರುಚಿಗೆ ಉಪ್ಪು.
ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕವಳೀಕಾಯಿ, ಜೀರಿಗೆ, ಮೆಣಸಿನಕಾಯಿ  ತಾಳಿಸಿಕೊಳ್ಳಬೇಕು. ಇದಕ್ಕೆ ಉಳಿದೆಲ್ಲ ಪದಾರ್ಥಗಳನ್ನು ಹಾಕಿ ರುಬ್ಬಿಕೊಳ್ಳಬೇಕು. ಮೇಲೆ ಇಂಗಿನ ಒಗ್ಗರಣೆ ಕೊಡಬೇಕು.

ಚಿಗಳಿ ಉಂಡೆ
ಬೇಕಾಗುವ ಸಾಮಗ್ರಿಗಳು:
ಬಿಳಿ ಎಳ್ಳು 1ಬಟ್ಟಲು, ಪುಡಿ ಮಾಡಿದ ಬೆಲ್ಲ 1 ಬಟ್ಟಲು, ಸ್ವಲ್ಪ ಏಲಕ್ಕಿ ಪುಡಿ.
ವಿಧಾನ: ಎಳ್ಳನ್ನು ಹದವಾಗಿ ಹುರಿದುಕೊಂಡು, ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿಮಾಡಿಕೊಂಡು, ಅದಕ್ಕೆ ಬೆಲ್ಲ, ಏಲಕ್ಕಿಪುಡಿ ಹಾಕಿ, ಇನ್ನೊಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ, ಉಂಡೆಗಳನ್ನು ಕಟ್ಟಬೇಕು.

ಕಡಲೆ ಉಸುಳಿ
ಬೇಕಾಗುವ ಸಾಮಗ್ರಿಗಳು:
ನೆನೆಸಿದ ಕಾಬೂಲ್ ಕಡಲೆ 1ಬಟ್ಟಲು, ಸೌತೆಕಾಯಿ 1, ಗಜ್ಜರಿ 1, ಹಸಿ ಮೆಣಸಿನಕಾಯಿ 4, ಹಸಿ ಕೊಬ್ಬರಿ ತುರಿ 1/2 ಬಟ್ಟಲು, ಉಪ್ಪು ರುಚಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು.
ವಿಧಾನ: ನೆನೆಸಿದ ಕಡಲೆಯನ್ನು ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ. ಬಾಣಲೆಗೆ 2ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಂಡು, ಜಜ್ಜಿದ ಹಸಿ ಮೆಣಸಿನಕಾಯಿ ಪೇಸ್ಟ್, ತುರಿದ ಸೌತೆಕಾಯಿ, ಗಜ್ಜರಿ ಹಾಕಿ ಚನ್ನಾಗಿ ಕಲಸಿ. ಇದಕ್ಕೆ ಬೆಂದ ಕಡಲೆ ಮತ್ತು ಕೊಬ್ಬರಿ ತುರಿ, ಉಪ್ಪು ಹಾಕಿ ಕಲಸಿ ಕೆಳಗಿಳಿಸಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

ಹಯಗ್ರೀವ
ಬೇಕಾಗುವ ಸಾಮಗ್ರಿಗಳು
: ಕಡ್ಲೆಬೇಳೆ 1ಕಪ್, ಬೆಲ್ಲ 1ಕಪ್, ತೆಂಗಿನತುರಿ 1ಕಪ್, ತುಪ್ಪ 2ದೊಡ್ಡ ಚಮಚ, ಗೊಡಂಬಿ, ಏಲಕ್ಕಿ, ದ್ರಾಕ್ಷಿ.
ವಿಧಾನ: ಕಡ್ಲೆಬೇಳೆಯನ್ನು ಬೇಯಿಸಿ ನೀರನ್ನು ಬಸಿದು, ಬೆಲ್ಲ, ಕಾಯಿತುರಿ ಹಾಕಿ ಚನ್ನಾಗಿ ಕಲಸಿ. ಬೆಲ್ಲ ಕರಗಿ ಪಾಕವಾಗುತ್ತ ಬಂದು ಗಟ್ಟಿಯಾದಾಗ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಕಿ ಚನ್ನಾಗಿ ಕಲಸಿ, ಹಲ್ವದ ಹದಕ್ಕೆ ಬಂದಾಗ ತುಪ್ಪ ಹಾಕಿ ಕೆಳಗಿಳಿಸಿ. ಹಯಗ್ರೀವ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.