ADVERTISEMENT

ಹಾವು ಕಂಡು ಹೌಹಾರಿದ್ದು!

ಪೂರ್ಣಿಮಾ ಮೂರ್ತಿ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಅಂದು ಶ್ರಾವಣದ ಮಂಗಳಗೌರಿಯ ಶುಭದಿನವಾಗಿತ್ತು. ಸೊಬಗಿನ ಸಂಜೆಯಾಗಿತ್ತು. ವರಕವಿ ಬೇಂದ್ರೆ ಅವರ ‘ದನ ಕರೆದ ಹಾಲಿನಾ ಧೂಳಿ ಸಂಜೆಯಾ’ ಎಂಬ ಕವನದ ಸಾಲಿನಂತೆ. ನಾನು ಆ ಸಮಯದಲ್ಲಿ ಅರಿಶಿನ -ಕುಂಕುಮಕ್ಕೆ ಗೆಳತಿಯರನ್ನು ಆಹ್ವಾನಿಸಲು ಹೊರಟಿದ್ದೆ. ಹಾದಿಯ ನಡುವೆ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ, ಅರೆ ಬಾಡಿದ್ದ ಮರದ ಎಲೆಗಳು ಸುರುಳಿ, ಸುರುಳಿಯಾಗಿ ಸುತ್ತುಕೊಂಡು ವೃತ್ತಾಕಾರವನ್ನು ರಚಿಸಿದ್ದವು. ಆ ಬೆಡಗನ್ನು ಆಸ್ವಾದಿಸುತ್ತಿರುವಾಗ.

ನಿಧಾನವಾಗಿ ಮರದ ಕೊಂಬೆ ಅಲುಗಾಡಲಾರಂಭಿಸಿತು. ದೊಪ್ಪನೇ ಏನೋ ಬಿದ್ದಂತಾಯಿತು. ನೋಡಿದರೆ ಹಾವು... ನಾನು ಮಾರುದ್ದ ನೆಗೆದೆ. ಶಾಲಾ ದಿನಗಳಲ್ಲಿ ಹೈಜಂಪ್ ಸ್ಪರ್ಧೆಯಲ್ಲೂ ಹಾಗೆ ಹಾರಿರಲಿಲ್ಲ. ಸಮಯಕ್ಕೆ  ನನ್ನ ಪತಿ ಹಾಗೂ ಅವರ ಗೆಳೆಯರು ಪಿ.ಟಿ. ಪೂರೈಸಿ ಬರುತ್ತಿದ್ದರು. ನಾನು ಅವರಿಗೆ, ‘ಸಾಂಪ್, ಸಾಂಪ್’ ಎಂದು ಕೂಗಿ ಕರೆದೆ,  ಅನತಿ  ದೂರದಲ್ಲಿಯೇ ಬರುತ್ತಿದ್ದ ಅವರಿಗೆ ವಿಷಯ ತಿಳಿಸಿದೆ. ಅವರೆಲ್ಲರೂ ಹತ್ತಿರಕ್ಕೆ ಬಂದು, ಅಲ್ಲಿಯೇ ಬಿದ್ದಿದ್ದ ಕೊಂಬೆಯಿಂದ ಸ್ವಲ್ಪವೂ ವಿವೇಚಿಸದೆ ಅದನ್ನು ಬಡಿದು ಹಾಕಿದರು.

ಈ ಘಟನೆ ನಡೆದದ್ದು ಅರುಣಾಚಲ ಪ್ರದೇಶದ (N.E.F.A.) ಸ್ಥಳ ವೊಂದರಲ್ಲಿ.  ನಾವಿದ್ದ ಕ್ಯಾಂಪಸ್ಸಿನಲ್ಲಿ ನಮ್ಮದೂ ಸೇರಿ ಸುಮಾರು ಹತ್ತು ಸಂಸಾರಗಳಿದ್ದವು. ಅಲ್ಲಿನ ವಿಷಪೂರಿತ ಹಾವುಗಳೊಡನೆ ನಾವು ಸಂಘಜೀವಿಗಳಾಗಿದ್ದೆವು ಎಂದೇ ಹೇಳಬಹುದು. ನಾವಿದ್ದ ಮನೆಯ ಬೇಲಿಯಾಚೆಗಿನ ಕೆರೆಯತ್ತ ದೃಷ್ಟಿ ಹಾಯಿಸಿದ್ದಲ್ಲಿ  ಪ್ರತಿದಿನ ಕರಾರುವಾಕ್ಕಾಗಿ ಎಂಬಂತೆ ಬಹು ಉದ್ದದ ಕಪ್ಪುಹಾವುಗಳು ದಾಹ ತಣಿಸಿಕೊಳ್ಳುತ್ತಿದ್ದವು.

ಸುಮಾರು ಒಂದು ತಿಂಗಳ ಮೇಲೂ, ಅನುದಿನವೂ ಸುರಿಯುತ್ತಿದ್ದ ಜಿಟಿ, ಜಿಟಿ ಮಳೆ ಸರಿದ ನಂತರ ಅಡಗಿದ್ದ  ಹಾವುಗಳು ಪ್ರತ್ಯಕ್ಷ ವಾಗುತ್ತಿದ್ದವು. ಅಲ್ಲದೆ  ಸೀಬೆ ಮರಗಳಲ್ಲಿ ಕಂಪಿಗೂ, ಹಾಗೂ ಅವುಗಳ ರಸಸ್ವಾದವನ್ನು ಸವಿಯಲು ಬೀಡು ಬಿಟ್ಟಿದ್ದವು. ತಮ್ಮದೇ ತಾಣವೆಂಬಂತೆ. ನಾವಿದ್ದ ಮನೆಯ ಸ್ಥಳ ಹಿಂದೆ ಅಲ್ಲಿ ಆಳ್ವಿಕೆ ಮಾಡಿದ್ದ ರಾಜರ ತೋಟವಾಗಿತ್ತಂತೆ. ಮನೆಯ ಹಿಂದೆ ಕಬ್ಬಿನ ತೋಟವೂ ಇತ್ತು. ಹಾವುಗಳ ಆವಾಸಸ್ಥಾನವಾಗಿತ್ತು. ಅವುಗಳ ಮೊಟ್ಟೆಗಳು ದ್ರಾಕ್ಷಿಯ ಗೊಂಚಲಿನಂತೆ ಸುತ್ತ ಮುತ್ತಲೂ ಕಾಣಿಸಿಕೊಳ್ಳುತ್ತಿದ್ದವು. ಘಟನೆಯ ವಿಷಯಾಂತರವಾದರೂ, ಅಲ್ಲಿನ ಸರ್ಪಗಳ ಬಗ್ಗೆ ತಿಳಿಸಲೇಬೇಕಾಯಿತು.

ಲೇಖನದ ಪ್ರಾರಂಭದತ್ತ ಹೊರಳಿದ್ದಲ್ಲಿ, ಹಬ್ಬ, ಹರಿದಿನಗಳಲ್ಲಿ, ಅಲ್ಲಿನ ಗೆಳತಿಯರನ್ನು ಅರಿಶಿನ -ಕುಂಕುಮಕ್ಕೆ ಆಹ್ವಾನಿಸುತ್ತಿದ್ದ ದಿನಗಳಲ್ಲಿ, ಮಂಗಳಗೌರಿಯ ವ್ರತದಂದು, ವಿಷಪೂರಿತ ಸರ್ಪವನ್ನು ನಾನು ಕಂಡದ್ದು ಹಾಗೂ ನನ್ನ ಪತಿ, ಅವರ ಗೆಳೆಯರಿಗೆ, ಅನಿವಾರ್ಯವಾಗಿ ತಿಳಿಸಲೇಬೇಕಾದ ಪ್ರಸಂಗ ಬಂದದ್ದು, ಆ ಸರ್ಪ ಬಲಿಯಾದದ್ದು ವಿಪರ್ಯಾಸ. ಅನೇಕ ವಸಂತಗಳು ಉರುಳುತ್ತಾ ಬಂದರೂ, ಕಾಲಘಟ್ಟದಲ್ಲಿ ಆ ನೆನಪು ಹುತ್ತದಂತೆ ಬೆಳೆಯುತ್ತಾ ಶ್ರಾವಣ ಮಾಸದ ನಾಗರ ಪಂಚಮಿ ಹಾಗೂ ಮಂಗಳಗೌರಿ ವ್ರತದ ಸಂರ್ಭಗಳಲ್ಲಿ ಧುತ್ತೆಂದು ನನ್ನನ್ನು ಕಾಡುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT