ADVERTISEMENT

ಹಿಪೇಶಿಯಾ ಎನ್ನುವ ಜೀವನದಿ

ಮಾಲತಿ ಪಟ್ಟಣಶೆಟ್ಟಿ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ಚಿತ್ರಕೃಪೆ: ವಿಕಿಕಾಮನ್ಸ್‌
ಚಿತ್ರಕೃಪೆ: ವಿಕಿಕಾಮನ್ಸ್‌   

ಸಾಹಿತ್ಯ, ವೈಚಾರಿಕ ಸಾಧನೆಗಳನ್ನು ಇತಿಹಾಸದುದ್ದಕ್ಕೂ ಪುರುಷಕೇಂದ್ರಿತವಾಗಿಯೇ ಚಿತ್ರಿಸಿರುವುದಕ್ಕೆ ಹಾಗೂ ಹೆಣ್ಣನ್ನು ಸೌಂದರ್ಯ-ಭಾವುಕತೆಯ ಚೌಕಟ್ಟಿನಲ್ಲಿ ಕೂರಿಸಿರುವುದಕ್ಕೆ ಸಾವಿರಾರು ಉದಾಹರಣೆಗಳನ್ನು ನೀಡಬಹುದು. ಈ ಉದಾಹರಣೆಗಳ ಮೂಲಕ ಪ್ರತಿ ಚರಿತ್ರೆಯೊಂದನ್ನು ರೂಪಿಸಲು ಸಾಧ್ಯವಿದೆ. ಇಂಥ ಪ್ರತಿ ಚರಿತ್ರೆಯ ಅಪ್ರತಿಮ ನಾಯಕಿಯರಲ್ಲೊಬ್ಬಳು ಹಿಪೇಶಿಯಾ (350-60; 415).

ಕ್ರಿ.ಶ. ನಾಲ್ಕನೇ ಶತಮಾನದ ಹಿಪೇಶಿಯಾ ತನ್ನ ಕಾಲದ ಅತ್ಯಂತ ಪ್ರಖರ ಬುದ್ಧಿವಂತ ಗಣಿತಜ್ಞೆ, ತತ್ವಜ್ಞಾನಿ, ಖಗೋಳ ಶಾಸ್ತ್ರಜ್ಞೆ ಎನ್ನುವ ಪ್ರಸಿದ್ಧಿಗೆ ಒಳಗಾಗಿದ್ದಳು. ಗ್ರೀಕ್‍-ಈಜಿಪ್ಟ್‍ಗಳಲ್ಲಿ ತನ್ನ ವಿಚಾರಧಾರೆಯ ಮೂಲಕ ಪ್ರಸಿದ್ಧಳಾಗಿದ್ದಳು. ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ಆಕೆ, ತನ್ನ ಸ್ವತಂತ್ರ ಹಾಗೂ ಕ್ರಾಂತಿಕಾರಕ ವಿಚಾರಗಳ ಮೂಲಕ ಆ ಕಾಲದ ಪುರುಷ ವರ್ಗವು ತಲೆದೂಗುವಂತೆ ಮಾಡಿದ್ದಳು.

ಹಿಪೇಶಿಯಾ ಪ್ರಕೃತಿಯ ಆರಾಧಕಳಾಗಿದ್ದಳು. ಅವಳಿದ್ದುದು ಪ್ರಕ್ಷುಬ್ಧತೆಯಿಂದ ಕೂಡಿದ ಕಾಲಘಟ್ಟದಲ್ಲಿ. ಧಾರ್ಮಿಕ ವ್ಯಸನದ ಕಾರಣದಿಂದಾಗಿ ಆಗಲೂ ಘರ್ಷಣೆಗಳು ನಡೆಯುತ್ತಿದ್ದವು. ಹಲವು ಧರ್ಮಿಯರು ತಮ್ಮ ಧರ್ಮವೇ ಉತ್ತಮವಾದುದು, ಬೇರೆಯವರದು ಕನಿಷ್ಠ ಎಂಬ ಭಾವನೆ ತಳೆದುದರಿಂದ ಜನರ ನಡುವೆ ಗೋಡೆಗಳಿದ್ದವು. ವೈಚಾರಿಕ, ಕ್ರಾಂತಿಕಾರಕ ವಿಚಾರಗಳನ್ನು ಪ್ರತಿಪಾದಿಸುವವರ ಕೊಲೆಗಳೂ ನಡೆಯುತ್ತಿದ್ದವು. ಹಿಪೇಶಿಯಾ ಕೂಡ ಧರ್ಮಾಂಧರಿಂದ ಅವಮಾನಿತಳಾದಳು, ಅವರ ದಾಳಿಯಿಂದ ಸಾವಿಗೀಡಾದಳು.

ADVERTISEMENT

ಹಿಪೇಶಿಯಾ ಮೂಲತಃ ಗ್ರೀಕ್ ದೇಶದವಳು. ಅವಳ ತಂದೆ ಥಿಯಾನ್ ಆ ಕಾಲದ ಹೆಸರಾಂತ ತತ್ವಜ್ಞಾನಿ. ಇವರು ಕೂಡ ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದಲ್ಲಿದ್ದರು. ಥಿಯಾನ್‍ರ ಏಕೈಕ ಪುತ್ರಿ ಹಿಪೇಶಿಯಾ. ಮಗಳನ್ನು ಸ್ವತಂತ್ರ ಮನೋಧರ್ಮದ ವ್ಯಕ್ತಿಯಾಗಿ ಬೆಳೆಸಬೇಕೆನ್ನುವುದು ಅಪ್ಪನ ಹಂಬಲವಾಗಿತ್ತು. ಮಗಳನ್ನು ಶ್ರೇಷ್ಠ ತತ್ವಜ್ಞಾನಿಯನ್ನಾಗಿ ಮಾಡಬೇಕೆಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು.

ಎಲ್ಲ ದೃಷ್ಟಿಯಿಂದಲೂ ಹಿಪೇಶಿಯಾ ಅಪ್ರತಿಮ ಮಹಿಳೆಯಾಗಿದ್ದಳು. ಅಧ್ಯಯನವೇ ಗುರು ಮತ್ತು ಗುರಿ ಆದ್ದರಿಂದ ಆಕೆ ಮದುವೆ ಮಾಡಿಕೊಳ್ಳಲಿಲ್ಲ. ಅಲೆಕ್ಸಾಂಡ್ರಿಯಾದ ಜಗತ್ಪ್ರಸಿದ್ಧ ವಾಚನಾಲಯದಲ್ಲಿದ್ದ ಸುಮಾರು 50 ಸಾವಿರ ಪುಸ್ತಕಗಳೇ ಆಕೆಯ ಸಂಗಾತಿಯಾಗಿದ್ದವು. ಅಧ್ಯಯನಶೀಲತೆಯೇ ಆಕೆಯ ಬದುಕಾಗಿತ್ತು.

ಅಥೆನ್ಸ್‍ನಲ್ಲಿ ಅಧ್ಯಯನ ಮಾಡಿದ ಹಿಪೇಶಿಯಾಳಿಗೆ ಸಹಜವಾಗಿಯೇ ಪ್ಲೇಟೋ, ಅರಿಸ್ಟಾಟಲ್‌ ಅವರಂಥ ತತ್ವಜ್ಞಾನಿ ದಿಗ್ಗಜರ ತತ್ವಪ್ರಣಾಲಿಕೆಗಳ ಬಗೆಗೆ ಅಪಾರ ಆಸಕ್ತಿ ಮೂಡಿತ್ತು. ಅಲೆಕ್ಸಾಂಡ್ರಿಯಾದಲ್ಲಿ ಆಕೆ ನಿಯೋಪ್ಲಾಟೊನಿಕ್ ಸ್ಕೂಲ್‍ನ ಮುಖ್ಯಸ್ಥಳಾಗಿ, ಗ್ರೀಕ್ ದೇಶದ ಹಿರಿಯರ ತತ್ವಗಳ ಪ್ರತಿಪಾದನೆಯನ್ನು ವಿಸ್ತರಿಸಿದಳು. ಆಕೆ ತನ್ನ ತತ್ವಗಳಲ್ಲಿ ಸತ್ಯಕ್ಕೆ, ವಾಸ್ತವಿಕತೆಗೆ, ನೈಜತೆಗೆ ಪ್ರಾಮುಖ್ಯತೆ ನೀಡಿದ್ದಾಳೆ.

“ನೀತಿಕಥೆಗಳನ್ನು ನೀತಿಕಥೆಗಳಾಗಿ, ಕಾಲ್ಪನಿಕ ಕತೆಗಳನ್ನು ಕಾಲ್ಪನಿಕ ಕತೆಗಳಾಗಿಯೇ ಕಲಿಸಬೇಕು. ಮೂಢ ನಂಬಿಕೆಗಳನ್ನು ಸತ್ಯವೆಂದು ಕಲಿಸುವುದು ಘೋರ ಅಪರಾಧವಾಗುತ್ತದೆ. ಮಗುವಿನ ಮುಗ್ಧ ಮನಸ್ಸು ಸರಿ-ತಪ್ಪನ್ನು ತಿಳಿಯದೆ ಕಲಿಸಿದ್ದನ್ನು ಸ್ವೀಕರಿಸುತ್ತದೆ. ತಪ್ಪು ಕಲಿಕೆಯಿಂದ ದುರಂತಗಳಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ವೈಚಾರಿಕತೆಯ ಹಕ್ಕನ್ನು ಕಾಯ್ದುಕೊಳ್ಳಬೇಕು.

ವಿಚಾರ ಮಾಡದೇ ಇರುವುದಕ್ಕಿಂತ ತಪ್ಪು ವಿಚಾರ ಮಾಡುವುದು ಮೇಲು. ಬದುಕಿನಲ್ಲಿ ಮುಂದೆ ಸಾಗಿದಂತೆ ನಮಗೆ ಸತ್ಯದ ತಿಳಿವಳಿಕೆ ಮೂಡುತ್ತದೆ...” ಹಿಪೇಶಿಯಾ ಚಿಂತನೆ ಹೀಗೆ ಸಾಗುತ್ತದೆ. ಧರ್ಮಗಳು ಜನಮನದ ಮೇಲೆ ಹೇರುವ ತಪ್ಪು ತಿಳಿವಳಿಕೆಗಳನ್ನು ಹಿಪೇಶಿಯಾ ನೇರವಾಗಿ ಪ್ರತಿಭಟಿಸಿದ್ದಳು.

ಗಣಿತ, ತತ್ವಜ್ಞಾನ ಮತ್ತು ಖಗೋಳ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ ಪ್ರಥಮ ಮಹಿಳೆ ಆಕೆ. ಆಕೆಯ ವಿಚಾರಗಳನ್ನು ಅರಗಿಸಿಕೊಳ್ಳಲಾಗದ ಧರ್ಮಾಂಧರು ಹಿಪೇಶಿಯಾಳನ್ನು ಮಾಟಗಾತಿ ಎಂದು ಕರೆದರು. ಚರ್ಚಿಗೆ ಎಳೆದೊಯ್ದು ಅವಮಾನಿಸಿದರು. ವಿವಸ್ತ್ರಗೊಳಿಸಿ ಕ್ರೂರವಾಗಿ ಕೊಂದರು. ಆಕೆಯ ಮರಣದ ನಂತರ ನಡೆದುಹೋದ ದುರಂತದ ಅರಿವು ಜನರಿಗಾಯಿತು.

ಹಿಪೇಶಿಯಾಳ ಸ್ವತಂತ್ರ ಬರಹಗಳು ಈಗ ಲಭ್ಯವಿಲ್ಲ. ತಂದೆಯ ಸಹಯೋಗದಲ್ಲಿ ಆಕೆ ಕೆಲವು ಪುಸ್ತಕಗಳನ್ನು ಬರೆದಿದ್ದಾಳೆ ಎನ್ನಲಾಗುತ್ತಿದೆ. ಹಿಪೇಶಿಯಾಳ ಬದುಕಿನ ಕುರಿತ ಹಲವು ಸಂಗತಿಗಳು ಕೂಡ ಅಲಭ್ಯವಾಗಿಯೇ ಉಳಿದಿವೆ.

ಹಿಪೇಶಿಯಾ ಬದುಕಿನ ಕಾಲದ ಸಂಗತಿಗಳು ಹಾಗೂ ಆಕೆ ಎದುರಿಸಿದ ಸಂಘರ್ಷದ ಚಹರೆಗಳು ಮರುಕಳಿಸುವಂತೆ ಕಾಣಿಸುತ್ತಿರುವ ಸಂದರ್ಭವಿದು. ಇಂಥ ಸಂದರ್ಭದಲ್ಲಿ ಹಿಪೇಶಿಯಾ ಬದುಕು ಹಾಗೂ ತಾತ್ವಿಕತೆ ಈಗ ಹೆಚ್ಚು ಪ್ರಸ್ತುತ. ಆಕೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಕೆಲಸ ಜರೂರಿನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.