ADVERTISEMENT

‘ಅಮ್ಮ ಮನೆ’ ಮಕ್ಕಳ ಕತೆ

ಬಿ.ಜೆ.ಧನ್ಯಪ್ರಸಾದ್
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಎಚ್‌ಐವಿ ಸೋಂಕಿತ ಮಕ್ಕಳ ಪಾಲನೆಗೆ ಅನಂತ ಭಾರತ ಚಾರಿಟಬಲ್‌ ಟ್ರಸ್ಟ್(ಎಬಿಸಿಟಿ) ಮೈಸೂರಿನಲ್ಲಿದೆ. ವಿಶ್ವ ಏಡ್ಸ್‌ ದಿನ (ಡಿಸೆಂಬರ್‌ 1) ಸಂದರ್ಭದಲ್ಲಿ ‘ಅಮ್ಮ ಮನೆ’ಯನ್ನು ಪರಿಚಯಿಸಿದ್ದಾರೆ ಬಿ.ಜೆ. ಧನ್ಯಪ್ರಸಾದ್‌.

ಬೆಳಗಿನ ಚುಮುಚುಮು ಚಳಿ. ಹಲವು ಜನ ಮೈಸೂರಿಗರಿಗೆ ಹಾಸಿಗೆ ಬಿಟ್ಟೇಳದ ಆಲಸ್ಯ. ಅವರಿಗೆಲ್ಲ ಅಮ್ಮ ಅಡುಗೆಮನೆಯಿಂದ ಕೂಗು ಹಾಕಿದಾಗಲೇ ನಿದ್ದೆಯಿಂದೇಳುವ ಮಂಪರು. ಆದರೆ, ಇದೇ ಮೈಸೂರಿನ ಇನ್ನೊಂದು ದಿಕ್ಕಿನಲ್ಲಿ ಅಗ್ನಿಹೋತ್ರದ ಮುಂದೆ ಕುಳಿತಿರುವ ಮಕ್ಕಳು. ಕಂಗಳಲ್ಲಿ ಅಪಾರ ಆತ್ಮವಿಶ್ವಾಸ, ಶ್ರದ್ಧೆಯೊಂದಿಗೆ ಕೆಂಪಕ್ಕಿ ತುಪ್ಪದ ಹವಿಸ್ಸು ಬಿಡುತ್ತಿರುವ ಮಕ್ಕಳು.

ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ದೈನಂದಿನ ಚಟುವಟಿಕೆಗಳಲ್ಲಿ ಅಗ್ನಿಯ ಮುಂದೆ ಕೂರುತ್ತಾರೆ. ಪಂಚಭೂತಗಳಿಂದಲೂ ಜೀವನದಿ ಇವರಲ್ಲಿ ಪ್ರವಹಿಸಲಿ ಎಂಬ ಪ್ರಾರ್ಥನೆ ಆ ಮನೆಯ ಹಿರಿಯರಿಂದ ನಡೆಯುತ್ತದೆ. ಬೆಳಿಗ್ಗೆ ಮತ್ತು ಸಂಜೆ ನಿತ್ಯನವೀನ ಸೂರ್ಯನ ಬಳಿ ಇವರ ಆರೋಗ್ಯಕ್ಕೆ ಈ ಪ್ರಕ್ರಿಯೆ ಜರುಗುತ್ತಲೇ ಇರುತ್ತದೆ. ಮಗು ಚಿರಂಜೀವಿಯಾಗಲಿ ಎಂದು ಬಯಸುವುದೇ ಅಮ್ಮನ ಮನ. ಅದಕ್ಕಾಗಿ ಅಹಿರ್ನಿಶಿ ದುಡಿಯುವುದೇ ಅಮ್ಮ ಮನೆ! ಎಚ್‌ಐವಿ ಸೋಂಕಿತರ ಮಕ್ಕಳು ಪ್ರತಿನಿತ್ಯ ಸವೆಯುತ್ತಾರೆ ಎನ್ನುವುದೊಂದು ನಂಬಿಕೆ. ಆದರಿಲ್ಲಿ ಪ್ರತಿದಿನವೂ ಅರಳುತ್ತಾರೆ. ರೋಗ ನಿರೋಧಕ ಶಕ್ತಿಯ ವೃದ್ಧಿಗೆ ಪೂರಕವಾಗಿ  ದಿನಚರಿ ರೂಪಿತವಾಗಿದೆ. 

ನಸುಕಿನಲ್ಲಿ ಯೋಗಾಭ್ಯಾಸದೊಂದಿಗೆ ಚಟುವಟಿಕೆಗಳು ಮೊದಲ್ಗೊಳ್ಳುತ್ತವೆ. ಏಕಾಗ್ರತೆ, ಮಾನಸಿಕ ಸಮತೋಲನ, ದೈಹಿಕ ಸ್ವಾಸ್ಥ್ಯಕ್ಕೆ ಪೂರಕ ಆಸನ, ಪ್ರಾರ್ಥನೆ ಕ್ರಿಯೆಯಲ್ಲಿ ತಲ್ಲೀನರಾಗುತ್ತಾರೆ. ಗ್ನಿಹೋತ್ರ. ಪೂರ್ವಾಭಿಮುಖವಾಗಿ ಕುಳಿತು ಪಿರಮಿಡ್‌ ಆಕಾರದ ತಾಮ್ರದ ಚಿಕ್ಕ ಹೋಮದ ಕುಂಡದಲ್ಲಿ ಹಸುವಿನ ಬೆರಣಿ ಇಟ್ಟು, ತುಪ್ಪ ಹಾಕಿ ಅಗ್ನಿ ಹೊತ್ತಿಸಿ ಕೆಂಪಕ್ಕಿ ಹಾಕಿ ‘ಓಂ ಸೂರ್ಯಾಯ ಸ್ವಾಹಾ: ಸೂರ್ಯಾಯ ಇದಂ ನ ಮಮ...’ ಮಂತ್ರ ಪಠಿಸಿ ಆರೋಗ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ.

ರೋಗ ನಿರೋಧಕ ಶಕ್ತಿ ವೃದ್ಧಿ ಮತ್ತು  ರೋಗಗಳನ್ನು ಗುಣಪಡಿಸಲು ಅಗ್ನಿಹೋತ್ರ ಸಹಕಾರಿ ಎಂಬ ನಂಬಿಕೆ ಇದೆ. ನಂತರ ಎಳೆ ಬಿಸಿಲಿಗೆ ಮೈ ಒಡ್ಡಿ ಸೂರ್ಯಪಾನದಲ್ಲಿ ತೊಡಗುತ್ತಾರೆ. ವಿಟಮಿನ್‌ ‘ಡಿ’ ಪಡೆಯಲು ಸಹಕಾರಿ. ಯೋಗ, ಸೂರ್ಯಪಾನ, ಅಗ್ನಿಹೋತ್ರದಿಂದ ಬೆವರಿಳಿದ ದೇಹಕ್ಕೆ ಬಿಸಿ ನೀರ ಸ್ನಾನ ಹೊಸ ಉತ್ಸಾಹವನ್ನು ನೀಡುತ್ತದೆ.. ನಂತರ ಉಪಾಹಾರದ ಸಮಯ. ಬೇಳೆಕಾಳು, ಹಾಲು, ತರಕಾರಿಯುಕ್ತ ತಿಂಡಿ ಈ ಮಕ್ಕಳ ಹಸಿವನ್ನು ತಣಿಸುತ್ತದೆ. ಜೊತೆಗೆ ಅಗತ್ಯವಿರುವ ಪೌಷ್ಠಿಕಾಂಶವನ್ನೂ ಪೂರೈಸುತ್ತದೆ.

ಶಾಲೆಗೆಹೋಗುವ ಮಕ್ಕಳ ಬುತ್ತಿಯಲ್ಲಿ ಖಾರ ರಹಿತ ಊಟವನ್ನೇ ನೀಡಲಾಗುತ್ತದೆ. ಅಮ್ಮ ಮನೆಯ ಗಿರಿಜಕ್ಕ ಸ್ಟಾಫ್‌ ನರ್ಸ್‌. ಮಧುಸೂಧನ್‌ ಸೂಪರ್‌ವೈಸರ್‌. ಆದರೆ ಇವರಿಬ್ಬರ ಅಂತಃಕರುಣದ ಹರಿವು ಇಲ್ಲಿಯ ಮಕ್ಕಳಿಗೆ ಕಟ್ಟಡವೊಂದು ಮನೆಯಾಗಿರುವ ಭಾವ ನೀಡುತ್ತದೆ. ಅಮ್ಮ ಮನೆಗೆ ಬರುವುದಕ್ಕೆ ಮೊದಲು ಈ ಮಕ್ಕಳು ತಮ್ಮ ಊರು, ಮನೆ, ಶಾಲೆಗಳಲ್ಲಿ ಅನುಭವಿಸಿದ ಕಹಿ ಘಟನೆಗಳು ಮನಸ್ಸಿನಾಳದಲ್ಲಿ ಇವೆ. ಮನೆ ಬಿಟ್ಟು ಬಂದ ಮಕ್ಕಳಿಗೆ ಮಾನಸಿಕ ಬೆಂಬಲ, ಭಾವನಾತ್ಮಕ ಭದ್ರತೆ ಅತ್ಯಗತ್ಯ.

ಅವರಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿರುವುದರಿಂದ ಶಿಕ್ಷಣದೆಡೆಗೆ ಗಮನ ಹರಿಸುತ್ತಿದ್ದಾರೆ.  ಶಿಕ್ಷಕ, ಎಂಜಿನಿಯರ್‌, ಪೊಲೀಸ್‌ ಅಧಿಕಾರಿ ಇತ್ಯಾದಿ ಹುದ್ದೆಗೆ ಸೇರಬೇಕೆಂಬ ಆಸೆಗಳು ಅವರಲ್ಲಿ ಚಿಗುರಿವೆ. ಮಕ್ಕಳಿಗೆ ಶಾಲೆಯ ಪಾಠ ಪ್ರವಚನದ ಜೊತೆಗೆ ಸಂಜೆ ಕೋಚಿಂಗ್‌ ವ್ಯವಸ್ಥೆ ಮಾಡಲಾಗಿದೆ. ನಾಡಿನ ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ಈ 22 ಮಕ್ಕಳು  ಸಹಬಾಳ್ವೆ ನಡೆಸುತ್ತಿದ್ದಾರೆ.  ವ್ಯವಸ್ಥಾಪಕ, ಮೇಲ್ವಿಚಾರಕ, ದಾದಿ ಸೇರಿದಂತೆ 10 ಮಂದಿಯ ತಂಡ ಈ ಮಕ್ಕಳ ಪೋಷಣೆಗೆ ಶ್ರಮಿಸುತ್ತಿದೆ.

ಅಮ್ಮ ಮನೆ ವಿಳಾಸ: ನಂ. 1984, ಮಹದೇಶ್ವರ ಕೃಪ, ಮಾನಂದವಾಡಿ ರಸ್ತೆ, ಶ್ರೀರಾಮಪುರ 2ನೇ ಹಂತ, ಮೈಸೂರು.
ದೂರವಾಣಿ: 0821 2361711

***
ಅಗ್ನಿಹೋತ್ರ ಪ್ರಯೋಗ
ಪ್ರಪಂಚದಲ್ಲಿ ಎಚ್‌ಐವಿಗೆ ಈವರೆಗೆ ಔಷಧ ಕಂಡುಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ರೋಗನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಯೋಗ, ಅಗ್ನಿಹೋತ್ರ, ಸಾಂಪ್ರದಾಯಿಕ ಔಷಧ ಪದ್ಧತಿ ಇಟ್ಟಕೊಂಡು ಸಂಶೋಧನೆ ಆರಂಭಿಸಿದ್ದೇವೆ. ರಾಜ್ಯದಲ್ಲಿ 18,861 ಎಚ್‌ಐವಿ ಸೋಂಕಿತ ಮಕ್ಕಳಿದ್ದಾರೆ. ಈ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ‘ಅಮ್ಮ ಮನೆ’ ಸಣ್ಣ ದೊಂದು ಪ್ರಯತ್ನ.
– ಎಸ್‌.ಎ. ರಾಮದಾಸ್‌, ‘ಅಮ್ಮ ಮನೆ’ ಸಂಸ್ಥಾಪಕ.

***
ಸಾಯಬೇಕು ಎನಿಸಿತ್ತು...
ಊರಲ್ಲಿ ಶಾಲೆಯಲ್ಲಿ ಗೆಳತಿಯರು ಮಾತಾಡಿಸುತ್ತಿರಲಿಲ್ಲ, ಒಂಟಿತನ ಕಾಡುತ್ತಿತ್ತು. ನನ್ನ ಹತ್ತಿರ ಯಾರೂ ಬರುತ್ತಿರಲಿಲ್ಲ. ನನಗೆ ಅಮ್ಮ ಇಲ್ಲ. ಅಪ್ಪ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ತುಂಬಾ ನೋವಾಗುತ್ತಿತ್ತು. ಸಾಯಬೇಕು ಎನಿಸುತ್ತಿತ್ತು. ಅಮ್ಮ ಮನೆಗೆ ಬಂದ ನಂತರ ಓದಬೇಕು ಎಂಬ ಆಸೆ ಚಿಗುರಿದೆ. ಇಲ್ಲಿ  ಎಲ್ಲವೂ ಛೊಲೋ ಇದೆ. ಶಾಲೆಯಲ್ಲಿ  ಯಾರೂ ತಾತ್ಸಾರ ಮಾಡುವುದಿಲ್ಲ. ಚೆನ್ನಾಗಿ ಓದಿ ಶಿಕ್ಷಕಿ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ.
–ಕನಸು (ಹೆಸರು ಬದಲಿಸಲಾಗಿದೆ), 8ನೇ ತರಗತಿ ವಿದ್ಯಾರ್ಥಿನಿ

***
ಸ್ನೇಹಿತರೇ ಇರಲಿಲ್ಲ...

ಊರಲ್ಲಿದ್ದಾಗ ಎಲ್ಲರೂ ಒಂಥರಾ ನೋಡುತ್ತಿದ್ದರು. ಅಲ್ಲಿ ಸ್ನೇಹಿತರೇ ಇರಲಿಲ್ಲ. ಇಲ್ಲಿಗೆ ಬಂದನಂತರ, ಸೂರ್ಯಪಾನದಿಂದ ಕಣ್ಣುದೃಷ್ಟಿ ಚೆನ್ನಾಗಿದೆ. ಸಮಾಧಾನವೆನಿಸಿದೆ. ದೇಹ ಸದೃಢವಾಗುತ್ತಿದೆ. ಮುಂದೆ ಜೀವನದಲ್ಲಿ ಎಂಜಿನಿಯರ್‌ ಆಗಬೇಕು ಎಂಬ ಆಸೆ ಇದೆ.
– ಆಕಾಶ್‌ (ಹೆಸರು ಬದಲಿಸಲಾಗಿದೆ), 10ನೇ ತರಗತಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT