ADVERTISEMENT

ತಲೆಯೊಳಗಿನ ನಡುಕಕ್ಕೆ ಕಾರಣವೇನು?

ಸುನೀತಾ ರಾವ್
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ತಲೆಯೊಳಗಿನ ನಡುಕಕ್ಕೆ ಕಾರಣವೇನು?
ತಲೆಯೊಳಗಿನ ನಡುಕಕ್ಕೆ ಕಾರಣವೇನು?   

1. ನಾನು ಬಿಇ ಓದುತ್ತಿದ್ದೇನೆ. ನನಗೆ ತಲೆಯಲ್ಲಿ ಕೆಲವೊಮ್ಮೆ ನಡುಕ ಬರುತ್ತದೆ. ಬರಿ ನೆಗೆಟೀವ್ ಯೋಚನೆಗಳೇ ಬರುತ್ತವೆ. ದಿನದಲ್ಲಿ ಐದು ಸಲ ತಲೆಯಲ್ಲಿ ನಡುಕ ಬರುತ್ತದೆ. ನಾನು ಮಾನಸಿಕ ರೋಗಿಯಾಗುತ್ತಿದ್ದೇನೆ ಎಂದು ಅನಿಸುತ್ತಿದೆ. ನಾನು ಅನೇಕ ಡಾಕ್ಟರ್‌ಗಳ ಬಳಿ ತೋರಿಸಿದ್ದೇನೆ. ಅವರು ನನಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಮಾತ್ರೆಗಳನ್ನು ಮಾತ್ರ ನೀಡುತ್ತಾರೆ! ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತದೆ. ಯಾವುದರಲ್ಲೂ ಆಸಕ್ತಿ ಇಲ್ಲ; ನಿದ್ದೆಯೂ ಇಲ್ಲವಾಗಿದೆ.

–ಭಾವನಾ, ಊರು ಬೇಡ

ಕೆಲವು ರೀತಿಯ ಒತ್ತಡ ಹಾಗೂ ಭಯ ನಿಮ್ಮಲ್ಲಿ ಆತಂಕವನ್ನು ಹುಟ್ಟುಹಾಕುತ್ತಿವೆ. ಅದುವೇ ನಿಮ್ಮ ಸಮಸ್ಯೆಗೆ ಕಾರಣ ಕೂಡ. ನೀವು ಋಣಾತ್ಮಕವಾಗಿ ಚಿಂತಿಸುವಂತೆ ಮಾಡುವ ಅಂಶ ಯಾವುದು ಎಂಬುದನ್ನು ನೀವಾಗಿ ಅರಿಯಲು ಪ್ರಯ್ನತಿಸಿ. ನೀವು ಯಾವ ವಿಷಯದ ಬಗ್ಗೆ ಅತಿಯಾಗಿ ಚಿಂತಿಸುತ್ತೀರಿ ಎಂಬುದನ್ನೂ ತಿಳಿದುಕೊಳ್ಳಿ. ನೀವು ವೈಯಕ್ತಿಕವಾಗಿ ಆಪ್ತಸಮಾಲೋಚಕರ ಬಳಿ ಮಾತನಾಡಿ. ಅವರು ನಿಮ್ಮ ಋಣಾತ್ಮಕ ಯೋಚನೆಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ; ಹಾಗೂ ನೀವು ಮನಃಶಾಸ್ತ್ರಜ್ಞರನ್ನು ಭೇಟಿಯಾಗಬೇಕೋ, ಬೇಡವೋ ಎಂಬುದನ್ನು ಅವರೇ ತಿಳಿಸುತ್ತಾರೆ.

ADVERTISEMENT

ಪ್ರತಿದಿನ ಯೋಗ ಹಾಗೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಜೀವನಕ್ಕಿಂತ ಮುಖ್ಯವಾದುದ್ದು ಯಾವುದೂ ಇಲ್ಲ. ಹೀಗಾಗಿ ಇದರ ಬಗ್ಗೆ ಯಾವತ್ತೂ ಋಣಾತ್ಮಕವಾಗಿ ಯೋಚಿಸಬೇಡಿ. ಹೀಗೆ ಮಾಡುವುದರಿಂದ ಜೀವನವನ್ನು ಹೇಗೆ ಅರ್ಥಪೂರ್ಣವಾಗಿಸಿಕೊಳ್ಳಬಹುದು ಮತ್ತು ಇನ್ನಷ್ಟು ಸಂತೋಷಮಯವಾಗಿಯೂ  ಸುಂದರಮಯವಾಗಿಯೂ ರೂಪಿಸಿಕೊಳ್ಳಬಹುದು ಎಂಬುದನ್ನು ಆಲೋಚಿಸಿ. ಇದನ್ನು ನೀವು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು.

2. ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ನಾನು ಮಾತನಾಡುವಾಗ ಸ್ಪಲ್ಪ ಅವಸರದಿಂದ ಮಾತನಾಡುತ್ತೇನೆ. ಸಾವಕಾಶವಾಗಿ ಮಾತನಾಡಲು ಪ್ರಯತ್ನಿಸಿದರೂ ಆಗುತ್ತಿಲ್ಲ. ನಾನು ಸ್ವರಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾ? ಮಾತಿನ ಸಮಸ್ಯೆ ಸರಿ ಹೋಗಲು ಏನಾದರೂ ಸಲಹೆಗಳು ಇವೆಯೆ?

–ಹೆಸರು ಬೇಡ, ಬಾದಾಮಿ

ಅವಸರವಾಗಿ ಮಾತನಾಡುವುದು ನಿಮ್ಮ ವಾಡಿಕೆಯಾಗಿದ್ದರೆ, ಮಾತಿನ ನಡುವೆ ಬೇರೆ ಬೇರೆ ವಿಧಾನಗಳಿಂದ ವಿರಾಮವನ್ನು ನೀಡಬೇಕು. ತುಂಬಾ ಸ್ವಾಭಾವಿಕ ವಿರಾಮ ಎಂದರೆ ಉಸಿರಾಟದ ನಡುವೆ ನಿಲ್ಲಿಸಿ ಮಾತನಾಡಿ. ಕೇಳುವವರಿಗೂ ಇದರಿಂದ ಅನಾನುಕೂಲವಾಗುತ್ತದೆ. ಮಾತಿನ ನಡುವೆ ವಿರಾಮ ನೀಡದಿದ್ದರೆ ಮಾತು ಸ್ವಷ್ಟವಾಗಿರುವುದಿಲ್ಲ; ಮಾತನ್ನು ಕೇಳಲೂ ಕಷ್ಟವಾಗುತ್ತದೆ.

ಇಲ್ಲಿ ಕೆಲವು ಟಿಪ್ಸ್‌ಗಳಿವೆ: ಮಾತನಾಡುವಾಗ ಎದುರಿನ ವ್ಯಕ್ತಿಗಳ ಕಣ್ಣಗಳನ್ನು ದಿಟ್ಟಿಸಿ ನೋಡಿ. ಆಗ ಅವರ ಮುಖಭಾವದಿಂದ ನಿಮಗೆ ಅವರ ಪ್ರತಿಕ್ರಿಯೆ ಅರ್ಥವಾಗುತ್ತದೆ. ಅಲ್ಲದೇ, ಅವರಿಗೆ ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಇದರಿಂದ ಸಾಧ್ಯ.

ಆಗಾಗ ಉಸಿರು ತೆಗೆದುಕೊಳ್ಳುತ್ತಿರಿ. ಆಗ ನಿಮ್ಮ ಸ್ವರಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಇದರಿಂದ ನೀವು ನಿಶ್ಚಲರಾಗಿಲು ಸಾಧ್ಯ. ಹಾಗಾಗಿ ಮಾತಿನ ಕೊನೆಯವರೆಗೂ ಅಗತ್ಯವಿದ್ದಷ್ಟು ಗಾಳಿಯನ್ನು ಸಂಗ್ರಹಿಸಿಕೊಂಡಿರುವುದರಿಂದ ಕೊನೆಯ ನುಡಿಗಟ್ಟಿನವರೆಗೂ ಮಾತಿನ ಶಕ್ತಿಯನ್ನು ಹಾಗೇ ಉಳಿಸಿಕೊಳ್ಳಬಹುದು.

ವಾಕ್ಯದ ನಡುವೆ ವಿರಾಮ ನೀಡಿ: ವಿರಾಮ ನಿಮ್ಮ ಎದುರಿನವರಿಗೆ ನೀವು ಏನು ಹೇಳಿದ್ದೀರಿ – ಎಂಬುದನ್ನು ಅರಗಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ದೀರ್ಘ ಉಸಿರಾಟದ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಈ ಟಿಪ್ಸ್‌ಗಳನ್ನು ಅನುಸರಿಸಲು ಪ್ರಯ್ನತಿಸಿ, ಆಗಲೂ ನಿಮ್ಮ ಮಾತಿನ ಶೈಲಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳದಿದ್ದರೆ, ನೀವು ‘ಸ್ಪೀಚ್ ಥೆರಫಿಸ್ಟ್’ ಅನ್ನು ಭೇಟಿ ಮಾಡಿ; ಅವರು ನಿಮಗೆ ಸಹಾಯ ಮಾಡುತ್ತಾರೆ.

(ಸುನೀತಾ ರಾವ್‌, ಆಪ್ತ ಸಮಾಲೋಚಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.