ADVERTISEMENT

‘ನೋ’ ಅಂದ್ರೆ ‘ನೋ’

ಸುಶೀಲಾ ಡೋಣೂರ
Published 3 ನವೆಂಬರ್ 2023, 23:44 IST
Last Updated 3 ನವೆಂಬರ್ 2023, 23:44 IST
   

‘No’ is not a word, It is a sentence. Complete sentence...

ನೋ ಕಾ ಮತ್ಲಬ್‌ ಸಿರ್ಫ್‌ ನೋ ಹೋತಾ ಹೈ

ಪಿಂಕ್‌ (2016) ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌ ಬಹಳ ಸ್ಪಷ್ಟವಾಗಿ ಮತ್ತು ಅಷ್ಟೇ ದೀರ್ಘವಾಗಿ ವಾದ ಮಂಡಿಸಿದ ತುಂಬಾ ತುಂಬಾ ಸರಳ ಪದವಿದು. ರಾಮಾಯಣ–ಮಹಾಭಾರತದ ಕಾಲದಿಂದ ಹಿಡಿದು ಇವತ್ತಿನವರೆಗೂ ಬಹಳ ಜನರಿಗೆ ಅರ್ಥವಾಗದ ಪದ. ದ್ರೌಪದಿಯೂ ‘ನೋ’ ಅಂದಳು ಪಾಂಡವರಿಗದು ಅರ್ಥವಾಗಲಿಲ್ಲ. ಗಾಂಧಾರಿಯೂ ‘ನೋ’ ಅಂದಿದ್ದಳು, ಅದು ಸುಬಲನಿಗೂ ಕೇಳಿಸಲಿಲ್ಲ, ಧೃತರಾಷ್ಟ್ರನಿಗೂ ಕೇಳಿಸಲಿಲ್ಲ. ಇವತ್ತಿಗೂ ಈ ಜಾಣ ಕಿವುಡತನ ಮುಂದುವರೆದೇ ಇದೆ. ಕೆಲವರಿಗೆ ಕೇಳಿಸುವುದಿಲ್ಲ, ಕೆಲವರಿಗೆ ಕೇಳಿಸಿದರೂ ಅರ್ಥವಾಗುವುದಿಲ್ಲ, ಇನ್ನೂ ಕೆಲವರಿಗೆ ಅರ್ಥವಾದರೂ ಜಾಣ ಮಳ್ಳತನ.

ADVERTISEMENT

ಇದು ‘ನೊ’ ಎನ್ನುವ ಪದದಲ್ಲಿಯೇ ಇರಬಹುದಾದ ದೋಷವೊ, ‘ನೋ’ ಎಂದು ಹೇಳುವವರ ದನಿಯಲ್ಲಿ ಇರಬಹುದಾದ ದೋಷವೊ ಅಥವಾ ಅದನ್ನು ಕೇಳಿಸಿಕೊಳ್ಳುವವರಲ್ಲಿ ಇರಬಹುದಾದ ಜಾಣಕಿವುಡುತನವೊ ಗೊತ್ತಿಲ್ಲ.

‘ನೋ’ ಎನ್ನುವುದು ಒಂದು ಪದವಲ್ಲ, ಅದು ಪೂರ್ತಿ ವಾಕ್ಯ. ‘ನೋ’ ಎಂದರೆ ಅಲ್ಲಿಗೇ ಅದನ್ನು ನಿಲ್ಲಿಸಬೇಕು ಎಂದೇ ಅರ್ಥ. ಅದಕ್ಕೆ ಪರ್ಯಾಯ ಅರ್ಥವಾಗಲಿ, ಹೆಚ್ಚಿನ ವಿವರಣೆಯನ್ನಾಗಲಿ ಬಯಸುವ ಅಗತ್ಯವಿಲ್ಲ. ಇದು ಅವಳಿಗೂ, ಅವನಿಗೂ ಇಬ್ಬರಿಗೂ ಅನ್ವಯಿಸುವ ಪದವೇ ಆದರೂ ಅವಳಿಗೆ, ಅದರಲ್ಲೂ ದುಡಿಯುವ ಹೆಣ್ಮಕ್ಕಳಿಗೆ ಹೆಚ್ಚು ಅನ್ವಯಿಸುತ್ತದೆ.

ಹಾಗೆಯೇ, ನೋ ಹೇಳುವವಳು ಗೆಳತಿಯಾಗಿರಬಹುದು, ಆಫೀಸಿನಲ್ಲಿ ಕೂಡಿ ಕೆಲಸ ಮಾಡುವ ಸಹೋದ್ಯೋಗಿಯೇ ಆಗಿರಬಹುದು, ಕಾನ್ಫರೆನ್ಸ್‌ನಲ್ಲಿ ಜತೆಯಾಗಿ ಭಾಗವಹಿಸಿದಾಕೆಯೇ ಆಗಿರಬಹುದು, ರಸ್ತೆಯಲ್ಲಿ ನಿಂತ ಸೆಕ್ಸ್‌ ವರ್ಕರೇ ಆಗಿರಬಹುದು ಅಥವಾ ಕಾಯಾ ವಾಚಾ ಮನಸಾ ಜತೆಯಾದ ಪತ್ನಿ. ಯಾರೇ ಹೇಳಿದರೂ, ಯಾವುದೇ ಸಂದರ್ಭದಲ್ಲಿ ಹೇಳಿದರೂ, ಯಾವುದೇ ಕಾರಣಕ್ಕೆ ಹೇಳಿದರೂ ನೋ ಅಂದ್ರೆ ನೋ. ಇಷ್ಟು ನೇರವಾದ, ಸರಳರೇಖೆಯಂಥ ಒಂದು ಪದ ಅರ್ಥವಾಗದವರಿಗೆ, ಪ್ರೀತಿ–ಪ್ರೇಮ, ಸ್ನೇಹ, ಅನುಬಂಧದಂತಹ ದೊಡ್ಡದೊಡ್ಡ ಪದಗಳು ಮಿದುಳಿಗಿಳಿಯಲು ಸಾಧ್ಯವೇ ಇಲ್ಲ ಎಂದೇ ಅರ್ಥ.

***

ಇದು ಬರೀ ಕೇಳಿಸಿಕೊಳ್ಳುವವರ ಸಮಸ್ಯೆಯಲ್ಲ. ಹೇಳುವವರದೂ ಆಗಿದೆ. ನೋ–ಎನ್ನುವ ಇಷ್ಟು ಸುಲಭದ ಪದವನ್ನು ಹೇಳುವುದು ಬಹಳಷ್ಟು ಜನರಿಗೆ ಬಲು ಕಷ್ಟದ ಕೆಲಸ. ಎಷ್ಟೊ ಜನರು ಇದನ್ನು ಪ್ರಕಟಿಸಲು ಬಹಳೇ ಒದ್ದಾಡುವುದಿದೆ, ಮತ್ತು ಅಷ್ಟೇ ಗೊಂದಲಕ್ಕೀಡಾಗುವುದೂ ಇದೆ. ತಮ್ಮದಲ್ಲದ ಕೆಲಸವಾಗಿರಬಹುದು, ತಮಗಲ್ಲದ ಬುಲಾವ್‌ ಆಗಿರಬಹುದು, ತಮಗೊಪ್ಪದ ಆಫರ್‌ ಆಗಿರಬಹುದು... ಇಲ್ಲ ಎಂದು ಹೇಳಲು ಕಷ್ಟಪಡುವವರೇ ಹೆಚ್ಚು.

ಒಂದು ಕಪ್‌ ಕಾಫಿ, ಒಂದು ಲಾಂಗ್‌ ಡ್ರೈವ್‌ ಅಥವಾ ಮಧ್ಯಾಹ್ನದ ಮ್ಯಾಟನಿ ಶೋ... ರಾತ್ರಿಯ ಊಟ... ಡೇಟಿಂಗ್‌... ಯಾವುದೊ ಒಂದು. ಕರೆದವರು ಸ್ನೇಹಿತರೇ ಆಗಿರಲಿ, ಮನೆಯವರು, ಬಂಧುಗಳೇ ಆಗಿರಲಿ ಅಥವಾ ಸಹೋದ್ಯೋಗಿಗಳೇ ಆಗಿರಲಿ... ‘ನೋ’ ಎಂದು ಹೇಳುವ ಬದಲು ಏನೇನೊ ಸಬೂಬು ಹೇಳಲು ಹೋಗಿ ಪೇಚಾಡುತ್ತಾರೆ. ಮಾತ್ರವಲ್ಲ, ಇದೇ ಕಾರಣಕ್ಕಾಗಿ ಅನೇಕರು ತಮಗೆ ಮನಸ್ಸಿಲ್ಲದಿದ್ದರೂ, ಮನಸಿಗೊಪ್ಪದಿದ್ದರೂ, ಸಮಯವಿಲ್ಲದಿದ್ದರೂ ಇಲ್ಲ ಎಂದು ಹೇಳುವ ಮುಜುಗರದಿಂದ ಪಾರಾಗಲು ‘ಆಗಲಿ’‌ ಅಂದುಬಿಡುತ್ತಾರೆ.

‘ಇಲ್ಲ’ ಎಂದು ಹೇಳುವ ಬದಲು ‘ಕೆಲಸ ಇದೆ’ ಅಂತಲೊ, ‘ತಡವಾಯ್ತು’ ಅಂತಲೊ, ‘ಇನ್ಯಾರೊ ಕಾಯ್ತಾ ಇದ್ದಾರೆ’ ಅಂತಲೋ ಹೇಳಿದರೆ ಅದನ್ನು ನಿಮ್ಮೆದುರಿಗಿನವರು ‘ಎಸ್’‌ ಎಂದೇ ಪರಿಭಾವಿಸುವ ಸಾಧ್ಯತೆಯೂ ಇರುತ್ತದೆ. ‘ಎಸ್’‌ ಅಂತ ಹೇಳುವಾಗಲಂತೂ ‘ನೋ’ ಹೇಳುವುದಕ್ಕಿಂತ ಹೆಚ್ಚಿನ ತಪ್ಪುಗ್ರಹಿಕೆಗಳು, ಅಪಾಯಗಳೂ ಇರುತ್ತವೆ. ನೀವು ‘ಎಸ್’‌ ಅಂದಿರುವುದು ಅವರೊಂದಿಗೆ ಬರೀ ಕಾಫಿ ಕುಡಿಯುವುದಕ್ಕೊ, ಅವರ ಜೊತೆಗಿನ ಸ್ನೇಹಕ್ಕೂ–ಸಾಂಗತ್ಯಕ್ಕೂ ಎನ್ನುವುದೆಲ್ಲಾ ಬೂದಿ ಮುಚ್ಚಿದ ಕೆಂಡದಂತೆ ಉಳಿದುಕೊಳ್ಳಬಹುದು.

ನೋ ಅಂದ್ರೆ ಇಲ್ಲ, ಬರುವುದಿಲ್ಲ, ಮಾಡುವುದಿಲ್ಲ, ಆಗುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ, ನಿಲ್ಲುವುದಿಲ್ಲ, ಕಾಯುವುದಿಲ್ಲ... ಎಲ್ಲಕ್ಕೂ ‘ಇಲ್ಲ’ ಎನ್ನುವ ಒಂದು ಸರಳ ಪದವಿದೆಯಲ್ಲವೆ? ಹಾಗೆಯೇ, ಯಾವುದೊ ಬೇಡಿಕೆಗೆ, ಅಪೇಕ್ಷೆಗೆ, ನಿರೀಕ್ಷೆಗೆ, ಯಾಚನೆಗೆ ಸ್ಪಷ್ಟವಾಗಿ, ಅಷ್ಟೇ ದೃಢವಾಗಿ ‘ನೋ’ ಎಂದು ಹೇಳಲು ಹಿಂಜರಿಯುವುದೇಕೆ? ಅಷ್ಟಕ್ಕೂ ಆ ಕರೆಗೆ ‘ನೋ’ ಹೇಳಬೇಕೊ, ‘ಎಸ್’ ಹೇಳಬೇಕೊ ಎಂದು ನಿರ್ಧರಿಸಬೇಕಾದವರು ನೀವೇ. ನಿಮಗೊಪ್ಪಿಗೆಯಿದ್ದರೆ ಯಾವ ಮುಜುಗುರವೂ ಇಲ್ಲದೆ ‘ಎಸ್’ ಹೇಳಿ. ಆದರೆ, ನೋ ಹೇಳಲು ಹೋಗಿ ಅಥವಾ ನೋ ಹೇಳಲು ಆಗದೇ ‘ಎಸ್’ ಹೇಳಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.