ADVERTISEMENT

ಅರುಣ್ ಯೋಗಿರಾಜ್‌ಗೆ ‘ವಿಶ್ವಕರ್ಮ ಕುಲ ತಿಲಕ’ ಬಿರುದು

ಸಮರ್ಪಣಂ ಕಲೋತ್ಸವ, ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
<div class="paragraphs"><p>ಮಂಗಳೂರಿನಲ್ಲಿ ನಡೆದ ಸಮರ್ಪಣಂ ಕಲೋತ್ಸವ‌ದ ಭಾಗವಾಗಿ ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು</p></div>

ಮಂಗಳೂರಿನಲ್ಲಿ ನಡೆದ ಸಮರ್ಪಣಂ ಕಲೋತ್ಸವ‌ದ ಭಾಗವಾಗಿ ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು

   

– ಪ್ರಜಾವಾಣಿ ಚಿತ್ರ 

ಮಂಗಳೂರು: ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ತಯಾರಕ ಮೈಸೂರಿನ ಅರುಣ್ ಯೋಗಿರಾಜ್ ಅವರನ್ನು ಶೃಂಗಾರಗೊಂಡ ವಾಹನದಲ್ಲಿ ಪೀಠದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ಭಾವುಕರಾದ ಅರುಣ್ ಯೋಗಿರಾಜ್ ದಾರಿಯುದ್ದಕ್ಕೂ ವಿನಮ್ರವಾಗಿ ನಮಸ್ಕರಿಸುತ್ತ ಸಾಗಿದರು.

ADVERTISEMENT

ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ವತಿಯಿಂದ ಶನಿವಾರ ಆಯೋಜಿಸಿದ್ದ ‘ಸಮರ್ಪಣಂ ಕಲೋತ್ಸವ’ ಕಾರ್ಯಕ್ರಮಕ್ಕೆ ಅರುಣ್ ಅವರನ್ನು ಮೆರವಣಿಗೆಯಲ್ಲಿ ಕರೆತಂದು ‘ವಿಶ್ವಕರ್ಮ ಕುಲ ತಿಲಕ’ ಬಿರುದು ನೀಡಿ ಸನ್ಮಾನಿಸಲಾಯಿತು.

‘ಶ್ರೀರಾಮ ಮೂರ್ತಿ ನಿರ್ಮಾಣಕ್ಕಾಗಿಯೇ ನಾನು ಹುಟ್ಟಿರುವುದೇನೋ ಅನ್ನಿಸುತ್ತಿದೆ. ವಿಶ್ವಕರ್ಮ ಸಮುದಾಯದಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಕೋಟ್ಯಂತರ ಜನರ ಆಶೀರ್ವಾದದಿಂದ ಧನ್ಯನಾಗಿದ್ದೇನೆ. ಯುವ ತಲೆಮಾರು ಈ ಕಲೆಯನ್ನು ಕಲಿತು, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಇದನ್ನು ಕಲಿಸುವ ಉದ್ದೇಶವಿದೆ’ ಎಂದು ಅರುಣ್ ಹೇಳಿದರು.

ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ,‘500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ, ಬಾಲರಾಮನ ಪ್ರತಿಷ್ಠೆ ಆಗಿದೆ. ಇದಕ್ಕೆ ಅರುಣ್ ಯೋಗಿರಾಜರ ಕೊಡುಗೆ ದೊಡ್ಡದು. ಮುಂದಿನ ದಿನಗಳಲ್ಲಿ ಮಥುರಾದಲ್ಲಿ ‘ಬಾಲಮುರಳಿ ಕೃಷ್ಣನ’ ವಿಗ್ರಹ ನಿರ್ಮಾಣವೂ ಅವರಿಂದಲೇ ಆಗಲಿ’ ಎಂದು ಹಾರೈಸಿದರು.

ರಥಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ಕೋಟೇಶ್ವರ ಶುಭಾಶಂಸನೆಗೈದರು. ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ವರದಿ ವಾಚಿಸಿದರು. ಹಿರಿಯ ಕಲಾಸಾಧಕರಿಗೆ ಸನ್ಮಾನ, ಪಿ.ಎನ್. ಆಚಾರ್ಯ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ ಆಚಾರ್ಯ, ಅವಿಭಜಿತ ದ.ಕ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಬೆಂಗಳೂರಿನ ವಿಜ್ಞಾನಿ ಜಿ.ಕೆ. ಆಚಾರ್ಯ, ಉದ್ಯಮಿ ಪ್ರಜ್ವಲ್ ಆಚಾರ್ಯ, ಪರಿಷತ್ ಗೌರವಾಧ್ಯಕ್ಷ ಪಿ.ಎನ್. ಆಚಾರ್ಯ, ಗೌರವ ಸಲಹೆಗಾರ ಅಲೆವೂರು ಯೋಗೀಶ ಆಚಾರ್ಯ, ವಿದುಷಿ ಶಾರದಾಮಣಿ ಶೇಖರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ, ಎಸ್.ಕೆ.ಜಿ.ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಇದ್ದರು.

ಪರಿಷತ್ ಅಧ್ಯಕ್ಷ ಎಸ್.ಪಿ.ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು. ಎನ್.ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.