ADVERTISEMENT

ಸಮಗ್ರ ಕೃಷಿ ಪದ್ಧತಿ ಅಳವಡಿಕೆ: ಬದುಕು ನೀಡಿದ ಕುರಿ ಸಾಕಾಣಿಕೆ

35 ಕುರಿಮರಿ ಸಾಕಾಣಿಕೆ

ಕಿಶನರಾವ್‌ ಕುಲಕರ್ಣಿ
Published 22 ಫೆಬ್ರುವರಿ 2020, 11:13 IST
Last Updated 22 ಫೆಬ್ರುವರಿ 2020, 11:13 IST
ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದ ಮಂಜುಳಾ ಮರಿಯಪ್ಪ ಗೋತಗಿ ಕುರಿ ಸಾಕಾಣಿಕೆ ಮಾಡುತ್ತಿರುವುದು 
ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದ ಮಂಜುಳಾ ಮರಿಯಪ್ಪ ಗೋತಗಿ ಕುರಿ ಸಾಕಾಣಿಕೆ ಮಾಡುತ್ತಿರುವುದು    

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮರಿಯಪ್ಪ ಗೋತಗಿ ಅವರು ಕೃಷಿ ಜತೆಗೆ ಕುರಿ ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಮಂಜುಳಾ ಮರಿಯಪ್ಪ ಗೋತಗಿ ಅವರು ಮೂಲತಃ ಕೃಷಿ ಕುಟುಂಬದವರು. ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ. ಕೃಷಿಯಲ್ಲಿ ಪೂರ್ಣ ಸ್ವಾತಂತ್ರ್ಯ ದೊರೆತಿದ್ದರಿಂದ ಜಮೀನನ್ನು ಒಂದು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಹೊಸ ಬಗೆಯ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ಲಾಭದಾಯಕ ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.

‘ಉದ್ಯೋಗ ಮಾಡುವ ಮನಸ್ಸಿದ್ದರೆ ಸಾಕಷ್ಟು ಮಾರ್ಗಗಳು ಗೋಚರಿಸುತ್ತವೆ. ಕುರಿ ಸಾಕಣೆ ಉತ್ತಮ ಮಾರ್ಗ. ಕುರಿ ಸಾಕಾಣಿಕೆಗೆ ಒಣ ವಾತಾವರಣ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳು ಉತ್ತಮವಾಗಿರುತ್ತವೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕವೂ ಆಗಿದೆ. ಕುರಿಗಳು ಸಂಕಷ್ಟ ಸಮಯದಲ್ಲಿ ನಮ್ಮ ಬದುಕನ್ನು ಉಳಿಸುತ್ತವೆ’ ಎಂದು ಮಂಜುಳಾ ಅವರು ತಮ್ಮ ಅನುಭವ ಹಂಚಿಕೊಂಡರು.

ADVERTISEMENT

ಸಂಪೂರ್ಣ ಕೃಷಿಗೆ ಮೊರೆಹೋಗಿ ಮಳೆ ಕೈಕೊಟ್ಟರೆ ಕಂಗಾಲಾಗುವುದರ ಬದಲು, ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಕಷ್ಟ ಕಾಲದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ ಎನ್ನುತ್ತಾರೆ ಅವರು.

ಕುರಿ ಸಾಕಾಣಿಕೆಗಾಗಿ ತಮ್ಮ ಜಮೀನಿನಲ್ಲಿಯೇ ಶೆಡ್ ನಿರ್ಮಿಸಿಕೊಂಡು ಸದ್ಯ 35 ಕುರಿ ಮರಿಗಳನ್ನು ಸಾಕುತ್ತಿದ್ದಾರೆ. ಹೊಟ್ಟು, ಹಸಿಮೇವನ್ನು ಕುರಿಗಳಿಗೆ ಮೀಸಲಿಟ್ಟಿದ್ದಾರೆ.

ಕುರಿ ಸಾಕಾಣಿಕೆಗೆ ಹಾಗೂ ಕೃಷಿಗೆ ಅವರ ಪತಿ ಮರಿಯಪ್ಪ ಸಹಕಾರ ನೀಡುತ್ತಾರೆ. ಈ ಮೊದಲು ಮನೆಯಲ್ಲಿ ಬೆಳೆಸಿದ್ದ ಕುರಿಗಳನ್ನು ಮಾರಾಟ ಮಾಡಿ ಆ ಹಣದಿಂದ ಸದ್ಯ ಮುಧೋಳ ಸಂತೆಯಲ್ಲಿ ತಲಾ ₹6,500ರಂತೆ ಮೂರು ತಿಂಗಳ ಅವಧಿಯ 35 ಕುರಿಮರಿಗಳನ್ನು ತಂದಿದ್ದಾರೆ.

ನಾಲ್ಕು ತಿಂಗಳ ಆರೋಗ್ಯಕರವಾಗಿ ಉತ್ತಮ ತೂಕ ಬರುವಂತೆ ಬೆಳೆಸಿದರೆ ಕನಿಷ್ಠ ತಲಾ ₹12 ಸಾವಿರಕ್ಕೆ ಮಾರಾಟವಾಗಬಹುದು ಎಂಬುದು ಮಂಜುಳಾ ಅವರ ಅಂದಾಜು ಲೆಕ್ಕ. ಲಾಭದಾಯಕ ಕಸುಬಾದ ಈ ಕುರಿ ಸಾಕಾಣಿಕೆ ಕೈಗೊಳ್ಳಲು ರೈತರು ಹಿಂಜರಿಕೆಯಿಲ್ಲದೇ ಉತ್ತಮ ರೀತಿಯ ತಾಂತ್ರಿಕ ಜ್ಞಾನ ಪಡೆದು ವೈಜ್ಞಾನಿಕ ಕುರಿ ಸಾಕಾಣಿಕೆ ಮಾಡಿದರೆ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ಅವರು ಹೇಳುತ್ತಾರೆ.

30-60 ಅಡಿ ಅಳತೆಯ ಶೇಡ್ ನಿರ್ಮಿಸಿದ್ದು, ಇದರಲ್ಲಿ ಕುರಿಗಳಿಗೆ ಮೇವು ಹಾಗೂ ನೀರು ಇಡಲು ಗೋದಲಿಯನ್ನು ನಿರ್ಮಾಣ ಮಾಡಿ ವೇಳೆಗೆ ಸರಿಯಾದ ಆಹಾರ ನೀಡುತ್ತಾರೆ. ತಮ್ಮ ಜಮೀನಿನಲ್ಲಿಯೇ ಬೆಳೆದ ಗೋವಿನ ಜೋಳ, ಹುರುಳಿ, ಹಿಂಡೆ, ಅಕ್ಕಿ, ಗೋಧಿಯಂತಹ ಧಾನ್ಯಗಳನ್ನು ನುಚ್ಚು ಮಾಡಿ ನೀಡುತ್ತಾರೆ. ಜೊತೆಗೆ ಜೋಳ, ಡೈರಿ ಹುಲ್ಲು, ತೊಗರಿ ಹೊಟ್ಟು, ಶೇಂಗಾ ಹೊಟ್ಟುಗಳನ್ನು ಪ್ರತಿ ದಿನ ಸಮತೋಲನದಲ್ಲಿ ನೀಡುತ್ತಾರೆ.

ಇದರ ಜೊತೆಗೆ ಕೋಳಿ ಸಾಕಾಣಿಕೆ, ತರಕಾರಿ ಬೇಸಾಯ, ಹಿಪ್ಪುನೇರಳೆ, ಬೀಜೋತ್ಪಾದನೆಯಂತಹ ಕೃಷಿಯನ್ನು ಮಾಡುತ್ತಾರೆ. ಕುರಿಗಳಿಗೆ ಸಮಯಕ್ಕೆ ಸರಿಯಾಗಿ ಜಂತು ನಾಶಕ, ಕರಳು ಬೇನೆ ಸೇರಿದಂತೆ ಇತರ ರೋಗಗಳ ವಿರುದ್ಧ ಲಸಿಕೆ ಹಾಕಿಸಿ ಲಾಲನೆ ಮಾಡಿದರೆ ನಾಲ್ಕಾರು ತಿಂಗಳಲ್ಲಿ ಲಕ್ಷಗಳಲ್ಲಿ ಆದಾಯ ಪಡೆಯುವಲ್ಲಿ ಸಂದೇಹವಿಲ್ಲ ಎಂದು ಕುರಿ ವೀಕ್ಷಣೆಗೆ ಬಂದಿದ್ದ ರೈತ ಮುಖಂಡ ಯಮನೂರಪ್ಪ ಅಬ್ಬಿಗೇರಿ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ (9900125575/8549841214) ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.