ADVERTISEMENT

ರೋಗನಿರೋಧಕ ಶಕ್ತಿ ಇಲ್ಲದೆ ಸಾಯುತ್ತಿರುವ ಗಂಡು ಕರುಗಳು!

ರಾತ್ರೋರಾತ್ರಿ ಗೋಶಾಲೆ ಮುಂದೆ ಬಿಟ್ಟು ಹೋಗುತ್ತಿರುವ ರೈತರು

ಶರತ್‌ ಎಂ.ಆರ್‌.
Published 10 ಫೆಬ್ರುವರಿ 2021, 19:30 IST
Last Updated 10 ಫೆಬ್ರುವರಿ 2021, 19:30 IST
ಪಾಂಡವಪುರ ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆ ಮುಂದೆ ಬಿಟ್ಟು ಹೋಗಿರುವ ಗಂಡು ಕರು
ಪಾಂಡವಪುರ ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆ ಮುಂದೆ ಬಿಟ್ಟು ಹೋಗಿರುವ ಗಂಡು ಕರು   

ಮಂಡ್ಯ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, ವಿದೇಶಿ ತಳಿಯ ಗಂಡು ಕರುಗಳನ್ನು ಏನು ಮಾಡಬೇಕು ಎಂಬ ಗೊಂದಲದಲ್ಲಿ ರೈತರು ಸಿಲುಕಿದ್ದಾರೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಗಂಡು ಕರುಗಳನ್ನು ಗೋಶಾಲೆಗಳ ಮುಂದೆ ಬಿಟ್ಟು ಹೋಗುತ್ತಿದ್ದು, ಕರುಗಳು ಪ್ರತಿರೋಧ ಶಕ್ತಿ ಇಲ್ಲದೆ ಕೆಲವೇ ದಿನಗಳಲ್ಲಿ ಸಾಯುತ್ತಿವೆ.

ಗಂಡು ಕರು ಹುಟ್ಟಿದಾಗ ತಾಯಿಯ ಹಾಲು ಕುಡಿಸಿ 2–3 ತಿಂಗಳು ಪೋಷಿಸಿ, ನಂತರ ಕಸಾಯಿ ಖಾನೆಗೆ ಕೊಡುತ್ತಿದ್ದರು. ಆಗ ಆದಾಯವೂ ಬರುತ್ತಿತ್ತು. ಇದರಿಂದ ಮೇವಿಗೆ ಹಾಕಿದ ಬಂಡವಾಳ, ಸಮಯ ಮೀಸಲಿಟ್ಟಿದ್ದಕ್ಕೆ ಒಂದಷ್ಟು ಹಣ ಸಿಗುತ್ತಿತ್ತು. ಈಗ ಮಾರಲೂ ಆಗದ, ಸಾಕಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರುಗಳ ಬಾಯಿಯನ್ನು ಕಟ್ಟಿ ರಾತ್ರೋ ರಾತ್ರಿ ಗೋಶಾಲೆಗಳ ಮುಂದೆ ಬಿಡುತ್ತಿದ್ದಾರೆ.

ಹೀಗೆ ರಾತ್ರಿ ವೇಳೆ ತಂದು ಬಿಡುತ್ತಿರುವುದರಿಂದ, ಕರುವಿನ ಆರೋಗ್ಯ– ಬೆಳವಣಿಗೆ ಬಗ್ಗೆ ಗೋಶಾಲೆಯವರು ರೈತರಿಗೆ ತಿಳಿವಳಿಕೆ ನೀಡಲು ಆಸ್ಪದವಾಗುತ್ತಿಲ್ಲ. ಹೀಗೆ ತಂದು ಬಿಟ್ಟ ಎಳೆಗರುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ತಾಯಿಹಸುವಿನಿಂದ ಕೂಡಲೇ ಬೇರ್ಪಟ್ಟ ಕರುಗಳು, ತಾಯಿಯ ಹಾಲಿಲ್ಲದೇ, ಆರೈಕೆ ಇಲ್ಲದೆ ನೈಸರ್ಗಿಕ ಬೆಳವಣಿಗೆಯಿಂದ ವಂಚಿತವಾಗಿ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಸಾವನ್ನಪ್ಪುತ್ತಿವೆ.

ADVERTISEMENT

‘ಹಿಂದೆಲ್ಲಾ ಅಕ್ರಮವಾಗಿ ಸಾಗಿಸುತ್ತಿದ್ದ ಹಸು–ಕರುಗಳನ್ನು ಮಾತ್ರ ಗೋಶಾಲೆಗೆ ತಂದು ಬಿಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಿತ್ಯವೂ, ನಮಗೆ ತಿಳಿಯದಂತೆ ನಿತ್ಯ 8–10 ಕರುಗಳನ್ನು ಗೋಶಾಲೆ ಗೇಟ್‌ ಬಳಿ ತಂದು ಬಿಡುತ್ತಿದ್ದಾರೆ. ಇಂಥ ಕರುಗಳಿಗೆ ಡೇರಿ ಹಾಲು ಕುಡಿಸುವುದರಿಂದ ಅವುಗಳಿಗೆ ಭೇದಿಯಾಗುತ್ತದೆ. ಇದಕ್ಕೆ ಔಷಧಿ ನೀಡಿದರೂ ಗುಣವಾಗುವುದಿಲ್ಲ. ಹೀಗಾಗಿ 15 ದಿನಗಳಲ್ಲೇ ಅಸುನೀಗುತ್ತವೆ’ ಎಂದು ಪಾಂಡವಪುರ ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರ ಗೋಶಾಲೆಯ ಮೇಲ್ವಿಚಾರಕ ಎಂ.ಅರುಣ್‌ ಬೇಸರ ವ್ಯಕ್ತಪಡಿಸಿದರು.

‘ಕರುವೊಂದನ್ನು ನಿರ್ವಹಣೆ ಮಾಡಲು ಪ್ರತಿ ದಿನ ₹ 150–200 ವೆಚ್ಚವಾಗುತ್ತದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 190 ಕರುಗಳನ್ನು ತಂದು ಬಿಟ್ಟಿದ್ದಾರೆ. ಇಲ್ಲಿಯವರೆಗೆ 50–60 ಕರುಗಳು ಸತ್ತಿವೆ. ಕೊಬ್ಬಿನ ಅಂಶ ಅಥವಾ ಗಿಣ್ಣಿನ ಹಾಲನ್ನು ಡೇರಿಯಲ್ಲಿ ಖರೀದಿಸುವುದನ್ನು ನಿಲ್ಲಿಸಿದರೆ, ಹೈನುಗಾರಿಕೆ ನಡೆಸುವವರು ಆ ಹಾಲನ್ನು ಕರುವಿಗಾದರೂ ಕುಡಿಸುತ್ತಾರೆ. ಆಗ ಅದು ಹೆಚ್ಚು ದಿನ ಬದುಕುಳಿಯುವ ಸಾಧ್ಯತೆ ಇರುತ್ತದೆ’ ಎಂದು ಹೇಳುತ್ತಾರೆ ಅರುಣ್‌.

ಮಂಡ್ಯ ಜಿಲ್ಲೆಯಲ್ಲಿ ಐದು ಗೋಶಾಲೆಗಳಿವೆ. ಕೆರೆ ತೊಣ್ಣೂರು ಯತಿರಾಜ ಸೇವಾ ಟ್ರಸ್ಟ್‌ನ ಗೋಶಾಲೆಯು ದೇಸಿ ಜಾನುವಾರುಗಳನ್ನಷ್ಟೇ ಸಾಕುತ್ತದೆ. ಕಾಯ್ದೆ ಜಾರಿಗೆ ಬಂದ ಮೇಲೆ ಈ ಗೋಶಾಲೆಯ ಗೇಟಿಗೆ ಮೂರು ಗಂಡುಕರುಗಳನ್ನು ಕಟ್ಟಿಹೋಗಿದ್ದರು. ಸಿ.ಸಿ.ಟಿ.ವಿ.ಯಲ್ಲಿ ದಾಖಲಾದ ದೃಶ್ಯಗಳನ್ನು ನೋಡಿ, ವಾರಸುದಾರರನ್ನು ಪತ್ತೆ ಮಾಡಿ, ಅವರಿಗೇ ಮರಳಿಸಲಾಗಿದೆ ಎಂದು ಅಲ್ಲಿಯ ಸಿಬ್ಬಂದಿ ರಾಮು ಮಾಹಿತಿ ನೀಡಿದರು.

ಇನ್ನುಳಿದ ಯಾವ ಗೋಶಾಲೆಗಳೂ ಕರುಗಳು–ಹಸುಗಳನ್ನು ಸ್ವೀಕರಿಸುತ್ತಿಲ್ಲ. ಜಾಗದ ಅಭಾವವಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದಾಗ ವಶಪಡಿಸಿಕೊಂಡ ಜಾನುವಾರುಗಳನ್ನು ಮೈಸೂರಿನ ಪಿಂಜರಪೋಳಕ್ಕೆ ಕಳುಹಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ತಾಲ್ಲೂಕಿಗೊಂದು ಗೋಶಾಲೆ’

ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ತೆರೆಯಬೇಕಿದ್ದು, ಪ್ರಾಥಮಿಕವಾಗಿ ಒಂದು ಗೋಶಾಲೆಯನ್ನು ಆದಷ್ಟು ಬೇಗ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಈಗಾಗಲೇ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, ಹುಟ್ಟಿದ ಕರುಗಳನ್ನು ಗೋಶಾಲೆಯವರಿಗೂ ತಿಳಿಯದಂತೆ ಗೇಟಿನ ಬಳಿ ತಂದು ಬಿಟ್ಟು ಹೋಗುತ್ತಿದ್ದಾರೆ. ಇದು ಅಮಾನವೀಯವಾಗಿದ್ದು, 45 ದಿನಗಳವರೆಗೂ ಕರುವಿಗೆ ತಾಯಿ ಹಾಲು ನೀಡಿ ಸಾಕಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಂತರದ ದಿನಗಳಲ್ಲಿ ಹೆಚ್ಚು ಕಾಲ ಬದುಕಿರುತ್ತದೆ ಎಂದು ಹೇಳಿದರು.

***

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಿಂದಾಗಿ, ರೈತರು ಕರುಗಳನ್ನು ಗೋಶಾಲೆ ಮುಂದೆ, ಸಿಕ್ಕ ಸಿಕ್ಕಲ್ಲಿ ಬಿಡುತ್ತಿದ್ದು, ಇದು ಕರುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕನಿಷ್ಠ ಒಂದು ತಿಂಗಳಾದರೂ ಹಾಲನ್ನು ಕುಡಿಸಿ ಗೋಶಾಲೆಗೆ ಬಿಟ್ಟರೆ ಅದು ಬದುಕುಳಿಯುವ ಸಾಧ್ಯತೆ ಇರುತ್ತದೆ.
–ಮಂಜುನಾಥ್‌, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ

***

ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಹೈನುಗಾರಿಕೆ ಅವಲಂಬಿಸಿದ್ದು, ಇದೊಂದು ರೀತಿಯ ಇಕ್ಕಟ್ಟಿನ ಸಂದರ್ಭ. ಕಾಯ್ದೆ ಮಾಡಿರುವವರೇ ಇದಕ್ಕೆ ಪರಿಹಾರ ನೀಡಬೇಕು.
–ಪಿ.ಕೆ.ನಾಗಣ್ಣ, ಅಧ್ಯಕ್ಷರು, ರೈತ ಸಂಘ ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.