ADVERTISEMENT

ಹಳೆ ಬಟ್ಟೆಗೆ ಹೊಸ ವಿನ್ಯಾಸ; ಇದು ಫ್ಯಾಷನ್ ಲೋಕದ ಹೊಸ ಟ್ರೆಂಡ್‌

ರೇಷ್ಮಾ
Published 4 ಡಿಸೆಂಬರ್ 2020, 19:30 IST
Last Updated 4 ಡಿಸೆಂಬರ್ 2020, 19:30 IST
ಮರುಬಳಕೆಯ ಬಟ್ಟೆಗಳು
ಮರುಬಳಕೆಯ ಬಟ್ಟೆಗಳು   
""
""

ಪ್ರತಿದಿನ, ಪ್ರತಿಕ್ಷಣ ಹೊಸತನಕ್ಕೆ ತೆರೆದುಕೊಳ್ಳುವ ಫ್ಯಾಷನ್ ಕ್ಷೇತ್ರದಲ್ಲಿನ ಸಣ್ಣಪುಟ್ಟ ಬದಲಾವಣೆಗಳೂ ಫ್ಯಾಷನ್‌ ಪ್ರಿಯರ ಮನಗೆಲ್ಲುತ್ತವೆ. ಫ್ಯಾಷನ್‌ ಕ್ಷೇತ್ರದ ಹರವು ವಿಸ್ತಾರವಾಗುತ್ತಿರುವ ಈ ಹೊಸ್ತಿಲಿನಲ್ಲಿ ಸೆಕೆಂಡ್‌ ಹ್ಯಾಂಡ್ ಅಥವಾ ಮರುಬಳಕೆಯ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಸೆಕೆಂಡ್‌ ಹ್ಯಾಂಡ್ ಬಟ್ಟೆಗಳಿಂದ ಮರುವಿನ್ಯಾಸಗೊಂಡ ವಿವಿಧ ಬಗೆಯ ಉಡುಪುಗಳು ಫ್ಯಾಷನ್ ಮಾರುಕಟ್ಟೆಯ ರಂಗನ್ನು ಹೆಚ್ಚಿಸಿರುವುದಲ್ಲದೇ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ.

‘ಬಟ್ಟೆಗಳ ಮರುಬಳಕೆಯಿಂದ ಗ್ರಾಹಕರು ಹಾಗೂ ವಿನ್ಯಾಸಕರು ಇಬ್ಬರಿಗೂ ಹಲವು ಉಪಯೋಗಗಳಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಫ್ಯಾಷನ್ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಉತ್ಪನ್ನಗಳ ಮರುಬಳಕೆಯ ಪ್ರಮಾಣ ಹೆಚ್ಚಿದೆ. ಇದರಿಂದ ಆರ್ಥಿಕತೆಯನ್ನು ವೃದ್ಧಿಸಬಹುದು, ಅಲ್ಲದೇ ಪರಿಸರದ ಹಾನಿಯನ್ನೂ ತಪ್ಪಿಸಬಹುದು’ ಎನ್ನುತ್ತಾರೆ ವಸ್ತ್ರ ವಿನ್ಯಾಸಕಿ ಶಿಲ್ಪಿ ಚೌಧರಿ.

ಸೆಕೆಂಡ್ ಹ್ಯಾಂಡ್ ಅಥವಾ ಮರುಬಳಕೆಯ ಬಟ್ಟೆಯ ಖರೀದಿಯನ್ನು ಉತ್ತೇಜಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುವುದು ಶಿಲ್ಪಿ ಅವರ ಅಭಿಪ್ರಾಯ.

ADVERTISEMENT

ಫ್ಯಾಷನ್‌ ಫ್ಲಿಪ್ಪಿಂಗ್‌
ಬಹಳಷ್ಟು ಬ್ರ್ಯಾಂಡೆಡ್ ಬಟ್ಟೆಗಳ ತಯಾರಕರು ತಾವು ತಯಾರಿಸಿದ ಬಟ್ಟೆಯಲ್ಲಿ ಡ್ಯಾಮೇಜ್ ಇದ್ದರೆ ಅದನ್ನು ಎಸೆಯುವುದಿಲ್ಲ. ಬದಲಾಗಿ ಚೆನ್ನಾಗಿರುವ ಭಾಗವನ್ನು ಕತ್ತರಿಸಿ ಅದರಿಂದ ಹೊಸ ವಿನ್ಯಾಸದ ಉಡುಪನ್ನು ತಯಾರಿಸುತ್ತಾರೆ. ಇನ್ನೊಂದು ವಿಧಾನ ಎಂದರೆ ಬಟ್ಟೆಯನ್ನು ಪುನಃ ತೊಳೆದು, ಅದಕ್ಕೆ ಬೇರೆ ಬಣ್ಣ ಬಳಿದು (ಡೈ ಮಾಡಿ) ಹೊಸ ರೂಪ ನೀಡಿ ಮಾರಾಟ ಮಾಡುವುದು. ಅಂತಹ ಉಡುಪುಗಳಿಗೆ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ಸಂಪೂರ್ಣ ಹೊಸತರಂತೆ ಕಾಣುವ ಈ ಉಡುಪು ಯಾವುದೇ ಹೊಚ್ಚ ಹೊಸದಾಗಿರುವ ಬಟ್ಟೆಗಳಿಗಿಂತ ಭಿನ್ನವಾಗಿರುವುದಿಲ್ಲ. ಕೋವಿಡ್‌ ಕಾಲದಲ್ಲಿ ಉಂಟಾದಂತಹ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಇವು ಗ್ರಾಹಕರಿಗೆ ಹೆಚ್ಚು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಮಿತವ್ಯಯ ಮಳಿಗೆಗಳು ಮತ್ತು ಮರುಮಾರಾಟ ಆನ್‌ಲೈನ್‌ ವೇದಿಕೆಗಳಿಗೆ ಇವು ಹೆಚ್ಚು ಪ್ರೋತ್ಸಾಹ ನೀಡುತ್ತವೆ. ಇತ್ತೀಚೆಗೆ ಯುವಜನರಲ್ಲಿ ‘ಫ್ಯಾಷನ್‌ ಫ್ಲಿಪ್ಪಿಂಗ್‌’ ಅಥವಾ ಸೆಕೆಂಡ್ ಬಟ್ಟೆಯನ್ನು ಖರೀದಿ ಮಾಡುವ, ಪುನಃ ಮಾರಾಟ ಮಾಡುವ ಟ್ರೆಂಡ್ ಹೆಚ್ಚುತ್ತಿದೆ.

ಪರಿಸರಕ್ಕೆ ಹಾನಿಯಿಲ್ಲ
‘ವಿಮಾನಯಾನ ಹಾಗೂ ಇತರ ಕೆಲವು ಕೈಗಾರಿಕೆಗಳಿಗಿಂತಲೂ ಜವಳಿ ಉದ್ಯಮವು ಹೆಚ್ಚಿನ ಇಂಗಾಲವನ್ನು ಹೊರಹಾಕುತ್ತದೆ. ಅಲ್ಲದೇ ವಿಶ್ವದಲ್ಲೇ ಶೇ 20ರಷ್ಟು ಜಲಮಾಲಿನ್ಯವಾಗುತ್ತಿರುವುದು ಫ್ಯಾಷನ್ ಕ್ಷೇತ್ರದಿಂದ. ಬಟ್ಟೆಯ ಉತ್ಪಾದನೆಯ ಹಂತದಿಂದ ಉಡುಪು ಸಿದ್ಧವಾಗುವವರೆಗೂ ಅತಿಯಾಗಿ ಬಳಸುವ ನೀರು ಹಾಗೂ ತ್ಯಾಜ್ಯಗಳನ್ನು ಹರಿದು ಬಿಡುವುದರಿಂದ ಮಾಲಿನ್ಯ ಉಂಟಾಗುತ್ತದೆ’ ಎನ್ನುವ ಶಿಲ್ಪಿ, ‘ಆದರೆ ಬಟ್ಟೆಗಳ ಮರುಬಳಕೆಯು ಪರಿಸರ ಹಾನಿಗೆ ಕಡಿವಾಣ ಹಾಕುತ್ತದೆ. ಜನರಿಗೂ ಈಗ ಪರಿಸರದ ಮೇಲೆ ಕಾಳಜಿ ಹೆಚ್ಚಿರುವುದರಿಂದ ಮರುಬಳಕೆಯ ಬಟ್ಟೆಗಳ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ’ ಎನ್ನುತ್ತಾರೆ.

ಡಿಜಿಟಲ್ ವೇದಿಕೆಯ ಸಹಾಯ
ಡಿಜಿಟಲ್ ವೇದಿಕೆಗಳೂ ಸೆಕೆಂಡ್ ಹ್ಯಾಂಡ್‌ ಬಟ್ಟೆಯ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಒದಗಿಸಿವೆ. ಅವುಗಳ ಮೂಲಕ ನಾವು ಪ್ರತಿದಿನ ಮರುಬಳಕೆಗೆ ಸಾಧ್ಯವಾಗುವ ಬಟ್ಟೆಗಳನ್ನು ಕೊಳ್ಳುವುದು, ಮಾರಾಟ ಮಾಡುವುದು ಮಾಡಬಹುದು. ಇದು ನಿಜಕ್ಕೂ ಫ್ಯಾಷನ್ ಮಾರುಕಟ್ಟೆಗೆ ವರ ಎನ್ನಬಹುದು.

ಗುಣಮಟ್ಟವೂ ಉತ್ತಮ
ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವ ಉಡುಪುಗಳ ದರ ಅಗ್ಗ ಮಾತ್ರವಲ್ಲ, ಗುಣಮಟ್ಟವನ್ನೂ ಕಾಪಾಡಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಅವು ಹೆಚ್ಚು ಮೌಲ್ಯವನ್ನು ಉಳಿಸಿಕೊಳ್ಳುತ್ತವೆ ಎನ್ನುವುದು ಫ್ಯಾಷನ್ ವಿರ್ಮಶಕರ ಮಾತು.

ಫ್ಯಾಷನ್ ಉದ್ಯಮಕ್ಕೆ ಉಪಯೋಗ
ವಸ್ತ್ರ ವಿನ್ಯಾಸಕರು ಮರುಬಳಕೆ ವಸ್ತುಗಳ ಮೇಲೆ ತಮ್ಮ ಕ್ರಿಯಾಶೀಲತೆಯನ್ನು ತೋರಬಹುದು. ಒಂದೇ ರೀತಿಯ ಸಂಗ್ರಹ, ವಿನ್ಯಾಸ ನೋಡಿ ಬೇಸರಗೊಂಡ ಗ್ರಾಹಕರಿಗೆ ಕ್ರಿಯಾತ್ಮಕ ವಿನ್ಯಾಸಗಳು ಹೆಚ್ಚು ಇಷ್ಟವಾಗುತ್ತವೆ. ಒಂದು ಡೆನಿಮ್ ಬಟ್ಟೆ ಇದ್ದರೆ ಅದನ್ನು ಕತ್ತರಿಸಿ ಹೊಸ ವಿನ್ಯಾಸದ ಜಾಕೆಟ್‌ ತಯಾರಿಸುವುದು, ಅದರ ಮೇಲೆ ಪಾಕೆಟ್‌, ಪ್ಯಾಚ್ ವರ್ಕ್ ಮಾಡುವುದು.. ಹೀಗೆ ಸೃಜನಶೀಲತೆ ತೋರಬಹುದು. ‘ಪಾಶ್ಚಾತ್ಯ ಉಡುಪಿಗೆ ಭಾರತೀಯ ಸಾಂಪ್ರದಾಯಿಕ ನೋಟ ಸಿಗುವಂತೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಬಹುದು’ ಎನ್ನುತ್ತಾರೆ ಶಿಲ್ಪಿ.

***

ನಾನು ಕಳೆದ 10 ವರ್ಷಗಳಿಂದ ಬಟ್ಟೆಗಳ ಪುರ್ನಬಳಕೆ ಮಾಡುತ್ತಿದ್ದೇನೆ. ದುಬಾರಿ ಬೆಲೆಯ ಫ್ಯಾಬ್ರಿಕ್‌ಗಳ ಸಣ್ಣ ತುಂಡಗಳನ್ನು ಬಳಸಿ ಒಂದು ಹೊಸ ವಿನ್ಯಾಸದ ಡ್ರೆಸ್‌ ರಚಿಸುತ್ತೇನೆ. ಭಾರತೀಯ ಸಾಂಪ್ರದಾಯಿಕ ದಿರಿಸಾದ ಸೀರೆಯಲ್ಲಿ ಅನೇಕ ಹೊಸ ವಿನ್ಯಾಸದ ಉಡುಪುಗಳನ್ನು ವಿನ್ಯಾಸಗೊಳಿಸಬಹುದು. ಅಲ್ಲದೇ ಪಾಶ್ಚಾತ್ಯ ಫ್ಯಾಷನ್‌ಗೆ ಸಾಂಪ್ರದಾಯಿಕ ಟಚ್ ನೀಡುವ ಮೂಲಕ ವಿಶ್ವದರ್ಜೆಯಲ್ಲಿ ಭಾರತೀಯ ಉಡುಪುಗಳಿಗೆ ಬೇಡಿಕೆ ಬರುವಂತೆ ಮಾಡಬಹುದು.

-ಶಿಲ್ಪಿ ಚೌಧರಿ, ಫ್ಯಾಷನ್ ಡಿಸೈನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.