ADVERTISEMENT

ಕವಿತೆ: ನಗರವಾಸಿ ನಿವೇದನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:31 IST
Last Updated 28 ನವೆಂಬರ್ 2020, 19:31 IST
ಚಿತ್ರ: ಐಸ್ಟಾಕ್‌
ಚಿತ್ರ: ಐಸ್ಟಾಕ್‌   

(ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ–2020ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕವನ)

ತಂದೆ,
ನಿನಗೇ ಗೊತ್ತಲ್ಲ,
ಇಲ್ಲಿ ಸಮಯಕ್ಕೆ, ತಾಳ್ಮೆಗೆ ತೀರಾ ಅಭಾವ
ಕ್ಯೂನಲ್ಲಿ, ಟ್ರಾಫಿಕ್‌ನಲ್ಲಿ ಕಾಯದಂತೆ,
ನನ್ನ ಬೇಡಿಕೆಗಳನ್ನೆಲ್ಲ ಮನ್ನಿಸು ದೇವ

ಸ್ವಗತದ ಮರುಳರಿಗೂ,
ಬ್ಲೂಟೂತ್‌ನ ನನಗೂ,
ಭೇದ ಕಾಣಿಸು

ADVERTISEMENT

ತಿಂಗಳ ಮಕ್ಕಳ ಸ್ಕೂಲ್ ಫೀಸಿಗೆ
ಸೆಕೆಂಡ್ ಹ್ಯಾಂಡ್ ಕಾರಿಗೆ, ಶಾಪಿಂಗ್‌ಗೆ,
ಸಮಯಕ್ಕೆ ದುಡ್ಡ ಕರುಣಿಸು ದೇವರೇ

ತಲೆ ತುಂಬಾ ಜೇನುಗೂಡಿದ್ದ ಹಳ್ಳಿ ಹುಡುಗನ
ನೆರಳಾದರೂ ಉಳಿಯಲಿ
ಅಚಾನಕ್ಕಾಗಿ ಬಾಲ್ಯ ಗೆಳೆಯರು ಸಿಕ್ಕಾಗ
ಕನಿಷ್ಠ ಅವರ ಹೆಸರಾದರೂ ಮರಳಲಿ

ಬೇರು ಸಡಿಲುಗೊಂಡ, ನೀರು ದಕ್ಕದ ಮರಗಳು
ಜೋರು ಮಳೆಗೆ, ಬಿರುಗಾಳಿಗೆ
ನಗರವಾಸಿಗಳು ರಸ್ತೆ ಗುಂಡಿಗೆ
ಬೀಳಿಸದಿರು ತಂದೆ

ಆಗಾಗ್ಗೆ ಕನಸ ಕೊಡುತ್ತಿರು
ಎರಡಂತಸ್ತಿನ ವಿಲ್ಲಾ ಕೊಂಡಂತೆ
ವರ್ಷಕ್ಕೆರಡು ವಿದೇಶಿ ಪ್ರವಾಸ ಹೋದಂತೆ

ಒಂದೇ ಸೂರಡಿ ಇದ್ದರೂ
ಒಂದೇ ಸ್ಕ್ರೀನ್‌ನಲ್ಲಿ ತೋರಿಸು
ದೇವ, ಮಡದಿ ಮಕ್ಕಳನ್ನ

ದುಂಡಗಿನ ಗಾಜಿನ ಹೂಜಿ ಮೀನು ನಾನು
ಆಳ, ಅಗಲ ಅರಿಯುವಂತೆ
ತಾರಸಿಯ ಹೂ ಕುಂಡದ ಬೇರು ನಾನು
ನಿಜ ನೆಲವು ಸಿಕ್ಕುವಂತೆ
ಮಾಡು ಪ್ರಭುವೇ
ಬೇರು ಆಳಕ್ಕಿಳಿಯಲು, ಮತ್ತೆ ಚಿಗುರಲು

(ಆದರೆ ಬೇರು ಯಾವ ಕಾಂಪೌಂಡ್‌ಗೂ ತಾಗದಿರಲಿ)

ಜೀವಾವಧಿ ಶಿಕ್ಷೆ ಜಾರಿಯಾಗಿರುವ ಖೈದಿಯಂತೆ
ಶಾಪಗ್ರಸ್ತ ಗಂಧರ್ವನಂತೆ
ನಾನು
ಕೊನೆಯರೆಗೂ ಉಸಿರಾದರೂ
ಬಸವಳಿಯದಂತೆ ದಕ್ಕಲಿ

ಎಲ್ಲರೂ ಎಲ್ಲರ ವಿಮರ್ಶಿಸುವಾಗ,
ಎಲ್ಲಿ ನಿಂತರೂ ಇನ್ನೊಬ್ಬರಿಗೆ ಅಡ್ಡಿಯಾದಾಗ,
ಅಭುಕ್ತ ಮೂಲೆಯ ಕರುಣಿಸು
ಯಾರಿಗೂ ಕಾಣದಂತೆ ಬಿಕ್ಕಲು
ನನ್ನೊಂದಿಗೆ ನಾನೇ ಮಾತಾಡಲು

ಟ್ರಾಫಿಕ್‌ನಲ್ಲಿ ಮಂಗಳಮುಖಿಯರು ಅಚಾನಕ್ಕಾಗಿ
ಬೆನ್ನು ಚಪ್ಪರಿಸಿದಂತೆ,
ಮನೆಯವರ ಆತ್ಮೀಯತೆ ಅಪರೂಪಕ್ಕಾದರೂ ಸಿಕ್ಕಲಿ
ಬತ್ತಿದ ಬಾವಿಯಲ್ಲಿ ಸೆಲೆ ಉಕ್ಕುವಂತೆ

ಮೆಟ್ರೊನಲ್ಲಿ ಒಣ ಕಟ್ಟಿಗೆಯಂತೆ ನಿಂತ ಮುದುಕನನ್ನೂ
ದೂರದಿಂದ ಅಮ್ಮನಂತೆ ಕಾಣುವ ಮುದುಕಿಯನ್ನೂ
ತೂರಿಸಿ ಜ್ಞಾನೋದಯವಾಗುವಂತೆ ಮಾಡಬೇಡ

ಕನ್ನಡಿಯಲ್ಲಿ ನನ್ನ ಮುಖ ನನಗೇ ಗುರುತು ಸಿಗದಾದಾಗ
ನೀನ್ಯಾರೆಂದು ನಗರ ಕೇಳಿದಾಗ
ಪೂರ್ತಿ ಮಳೆಯಲ್ಲಿ ತೋಯಿಸಿ
ಪ್ರವಾಹದಲ್ಲಿ ಹಳ್ಳಿಗೆ ರವಾನಿಸು

–ಶೈಲೇಶ್‌ ಕುಮಾರ್‌ ಶಿವಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.