ADVERTISEMENT

ಆಲೆಮನೆಯಲ್ಲಿ ಎಣ್ಣೆಗಾಣದ ಸದ್ದು: ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಭಿನ್ನ ಹಾದಿ

ಎಂ.ಎನ್.ಯೋಗೇಶ್‌
Published 3 ಫೆಬ್ರುವರಿ 2020, 20:00 IST
Last Updated 3 ಫೆಬ್ರುವರಿ 2020, 20:00 IST
ಎತ್ತಿನ ಗಾಣದ ಮೂಲಕ ಎಣ್ಣೆ ಕಾಳು ಪುಡಿ ಮಾಡುತ್ತಿರುವ ಮಹಿಳೆಯರು
ಎತ್ತಿನ ಗಾಣದ ಮೂಲಕ ಎಣ್ಣೆ ಕಾಳು ಪುಡಿ ಮಾಡುತ್ತಿರುವ ಮಹಿಳೆಯರು   

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ನೆಲಮನೆ ಗ್ರಾಮದಲ್ಲಿ ಪಾಳುಬಿದ್ದ ಆಲೆಮನೆಯಲ್ಲೀಗ ಶೇಂಗಾ (ಕಡ್ಲೆಕಾಯಿ), ಕೊಬ್ಬರಿ, ಹರಳು, ಎಳ್ಳು, ಹುಚ್ಚೆಳ್ಳಿನಿಂದ ಎಣ್ಣೆ ತೆಗೆಯುವ ಗಾಣ ಸದ್ದು ಮಾಡುತ್ತಿದೆ. ಕಡಿಮೆ ಉಷ್ಣಾಂಶದಲ್ಲಿ ತಯಾರಾಗುತ್ತಿರುವ ಪರಿಶುದ್ಧ ಎಣ್ಣೆಯನ್ನು ಮಂಡ್ಯ ಮೈಸೂರು, ಬೆಂಗಳೂರಿನ ನಿವಾಸಿಗಳು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ ಉದ್ಯಮದಿಂದ ಸ್ಥಳೀಯ 15 ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಅಕ್ಕಪಕ್ಕದ ರೈತರು ಬೆಳೆಯುವ ಧಾನ್ಯಗಳಿಗೂ ಮಾರುಕಟ್ಟೆ ಸಿಕ್ಕಿದೆ. ಚನ್ನಮ್ಮ ಹಾಗೂ ಪುಟ್ಟಮ್ಮ ಅವರಂಥ ಹಿರಿಯ ಮಹಿಳೆಯರು ಎಣ್ಣೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ದೇಸಿ ವಿಧಾನದಲ್ಲಿ...

ಎರಡು ಎತ್ತಿನ ಗಾಣಗಳಿವೆ. ಧಾನ್ಯ ಹದ ಮಾಡಲು, ಮಣ್ಣಿನ ಇಟ್ಟಿಗೆಯಲ್ಲಿ (ಸ್ಟೆಬಿಲೈಸ್ಡ್‌ ಮಡ್‌ ಬ್ಲಾಕ್‌) ಎರಡು ಗೋದಾಮುಗಳನ್ನು ಕಟ್ಟಿಸಿದ್ದಾರೆ. ಹಳೆಯ ಬಿದಿರು, ಮರ, ಹಳೆಯ ಟೈರ್‌ ಬಳಸಿ ಅಗತ್ಯ ಪರಿಕರ ಮಾಡಿಕೊಂಡು, ಉದ್ಯಮಕ್ಕೆ ದೇಸಿ ರೂಪ ನೀಡಲಾಗಿದೆ. ವರ್ಷದಿಂದೀಚೆಗೆ 5 ಸಾವಿರ ಲೀಟರ್‌ ಎಣ್ಣೆ ಮಾರಾಟವಾಗಿದ್ದು 700ಕ್ಕೂ ಹೆಚ್ಚು ಕುಟುಂಬಗಳಿಗೆ ಎಣ್ಣೆ ಪೂರೈಸಲಾಗುತ್ತಿದೆ. ಎಣ್ಣೆಗೆ ‘ಗ್ರ್ಯಾಸ್‌ರೂಟ್‌ ಆರ್ಗ್ಯಾನಿಕ್‌ ಆಯಿಲ್‌’ ಬ್ರ್ಯಾಂಡ್‌ ರೂಪ ನೀಡಲಾಗಿದ್ದು ಆನ್‌ಲೈನ್‌ (grassrootorganic.in) ಮೂಲಕವೂ ಮಾರಾಟ ಮಾಡಲಾಗುತ್ತಿದೆ.

ADVERTISEMENT

ಗಾಣದಿಂದ ತಯಾರಾದ ಎಣ್ಣೆಯನ್ನು ಗಾಜಿನ ಬಾಟಲಿ ಹಾಗೂ ಸ್ಟೀಲ್‌ ಡಬ್ಬಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಎಣ್ಣೆ ತಯಾರಿಕಾ ಪ್ರಕ್ರಿಯೆ ಯಲ್ಲಿ ಎಲ್ಲೂ ಪ್ಲಾಸ್ಟಿಕ್‌ ಬಳಕೆ ಇಲ್ಲ. ಕಾಲು ಲೀಟರ್‌, ಅರ್ಧ ಲೀಟರ್‌, ಒಂದು ಲೀಟರ್‌ ಬಾಟಲಿ ತುಂಬಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಶೀಶೆಯನ್ನು ವಾಪಸ್‌ ಕೊಟ್ಟರೆ ಒಟ್ಟು ದರದಲ್ಲಿ ₹ 20 ಕಡಿಮೆ ಮಾಡಿಕೊಳ್ಳಲಾಗುತ್ತದೆ.

ನೆಲಮನೆ ಗಾಣದಲ್ಲಿ ತಯಾರಾಗುತ್ತಿರುವ ಉತ್ಪನ್ನಗಳು

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು

ಎಣ್ಣೆ ಗಾಣದ ಮೂಲಕ ಗ್ರಾಮೀಣರಿಗೆ ಉದ್ಯೋಗ ಕಲ್ಪಿಸುವ ಹಾಗೂ ಪರಿಶುದ್ಧ ಎಣ್ಣೆ ಉತ್ಪಾದಿಸುವ ಪರಿಕಲ್ಪನೆಯ ಹಿಂದಿರುವವರೆಲ್ಲ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು. ಇವರೆಲ್ಲ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದ ಎಂ.ಟೆಕ್‌ ಪದವೀಧರ ಎಂ.ಕಮಲೇಶ್‌ ಸಂಪೂರ್ಣವಾಗಿ ಉದ್ಯಮ ನೋಡಿಕೊಳ್ಳುತ್ತಿದ್ದಾರೆ. ಉಳಿದವರು ವಾರಾಂತ್ಯದಲ್ಲಿ ಬಂದು ಹೋಗುತ್ತಾರೆ. ಎಂ.ವಿ.ಶ್ರೀಕಾಂತ್‌, ಎಸ್‌.ಬಸವರಾಜ್‌, ಸೌಮ್ಯಾ ಪಾಟೀಲ್‌, ಎಂ.ಮಹೇಶ್‌ಕುಮಾರ್‌, ಕೆ.ವಿ.ದೀಪಕ್‌, ಮೇಘಾ ರಾಮಚಂದ್ರ, ನಿಶಾಂತ್‌ ಪ್ರಸಾದ್‌ ಉದ್ಯಮದ ಹಿಂದಿದ್ದಾರೆ. ಮಂಡ್ಯದ ಕಮಲೇಶ್‌ ಹಾಗೂ ರಾಯಚೂರಿನ ಬಸವರಾಜ್‌ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ದೆಹಲಿಯಲ್ಲಿ ತರಬೇತಿಯ ವೇಳೆ ಸ್ನೇಹಿತರಾದ ಇವರು ಬದಲಿ ವೃತ್ತಿಯ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ನೈಸರ್ಗಿಕ ವಿಧಾನದಲ್ಲಿ ಎಣ್ಣೆ ಉತ್ಪಾದಿಸುವ ಗ್ರಾಮೋದ್ಯಮ ಸ್ಥಾಪಿಸುವ ತೀರ್ಮಾನಕ್ಕೆ ಬಂದಿದ್ದರು.

‘ಎತ್ತಿನ ಗಾಣದ ಮೂಲಕ ಕಡಿಮೆ ಉಷ್ಣಾಂಶ ದಲ್ಲಿ ತಯಾರಿಸುತ್ತಿದ್ದೇವೆ. ಇದರಿಂದ ಎಣ್ಣೆಯ ಶುದ್ಧತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ಗಾಣದ ಎಣ್ಣೆಯ ವಿಶೇಷತೆ ವಿವರಿಸುತ್ತಾರೆ ಕಮಲೇಶ್. ನಗರದ ಯಾವುದೋ ಕಂಪನಿಯಲ್ಲಿ ಜೀವನ ಕೊನೆಗೊಳಿಸುವ ಬದಲು ಗ್ರಾಮೀಣ ಸಂಸ್ಕೃತಿಗೆ ಮರುಜೀವ ಕೊಟ್ಟು, ತಮ್ಮ ಜೀವನವನ್ನೂ ರೂಪಿಸಿಕೊಳ್ಳುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ‘ಮುಂದೆ ಸಾವಯವ ಪದ್ಧತಿಯಲ್ಲಿ ಬೆಳೆದ ಧಾನ್ಯಗಳನ್ನು ಖರೀದಿಸಿ, ಅವುಗಳನ್ನು ಬೀಸುವ ಕಲ್ಲಿನಿಂದ ಬೀಸಿ ಹಿಟ್ಟು ತಯಾರಿಸಬೇಕೆಂದು ಯೋಚಿಸಿದ್ದೇವೆ’ ಎನ್ನುತ್ತಾರೆ ಕಮಲೇಶ್‌.

ನೆಲಮನೆಯ ಎಣ್ಣೆಗಾಣದಿಂದ ಅಕ್ಕಪಕ್ಕದ ಹಳ್ಳಿಗಳ ರೈತರಿಗೂ ಅನುಕೂಲವಾಗಿದೆ. ಕೊಬ್ಬರಿ, ಹರಳು, ಹುಚ್ಚೆಳ್ಳು, ಎಳ್ಳು ಮತ್ತಿತರ ಎಣ್ಣೆಕಾಳುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆಗಿಂತಲೂ ಗಾಣ ದಿಂದ ತಯಾರಾಗುವ ಎಣ್ಣೆಯ ಬೆಲೆ ಕೊಂಚ ಜಾಸ್ತಿ ಇದೆ. ಗ್ರಾಹಕರೇ ಸ್ಟೀಲ್‌ ಡಬ್ಬಿಯಲ್ಲಿ ಎಣ್ಣೆ ಕೊಂಡೊಯ್ಯುವುದಾದರೆ ಎಲ್ಲ ಎಣ್ಣೆಗಳ ಮೇಲೆ ₹20 ರಿಯಾಯಿತಿ. ಎಣ್ಣೆ ಗಾಣ ಕುರಿತ ಹೆಚ್ಚಿನ ಮಾಹಿತಿಗೆ ಕಮಲೇಶ್‌ (9844123344), ದೀಪಕ್‌ (9916265847), ಮಹೇಶ್‌ (9164468872) ಅವರನ್ನು ಸಂಪರ್ಕಿಸಬಹುದು.

ಎಣ್ಣೆ ಕಾಯಿಸುತ್ತಿರುವ ಈರಮ್ಮ

‘ಮೊದಲು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ ಆಟೊ ಹಿಡಿದು ಕೆಲಸಕ್ಕೆ ಹೋದರೆ ಮತ್ತೆ ರಾತ್ರಿಯೇ ವಾಪಸ್‌ ಬರ್ತಿದ್ದು. ತುಂಬಾ ಒತ್ತಡದ ಬದುಕಾಗಿತ್ತು. ಈಗ ನಮ್ಮ ಮನೆಯ ಮುಂದೆಯೇ ಕೆಲಸ ಸಿಕ್ಕಿದೆ. ನನ್ನಂಥ ಹಲವು ಮಹಿಳೆಯರಿಗೆ ಈ ಗಾಣಗಳಿಂದ ಅನುಕೂಲವಾಗಿದೆ’ ಎನ್ನುತ್ತಾರೆ ಕಾರ್ಮಿಕರಾದವಸಂತಾ.

ಉದ್ಯಮದ ಹಿಂದಿರುವ ಯುವಜನರ ತಂಡ
ಎಳ್ಳು ಹದ ಮಾಡುತ್ತಿರುವ ಮಹಿಳೆ
ಎಳ್ಳು ಕುಟ್ಟುತ್ತಿರುವ ಮಹಿಳೆ
ಸ್ಟೀಲ್ ಡಬ್ಬಿಗಳಲ್ಲಿ ಎಣ್ಣೆ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.