ADVERTISEMENT

ಝುಮ್ಮೆನಿಸಿದ ಪಿಟೀಲು ಫ್ಯೂಷನ್‌

ಮಹಿಳಾ ಕಾಲೇಜಿನಲ್ಲಿ ಮುಂಗಾರು ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:43 IST
Last Updated 15 ಜೂನ್ 2018, 10:43 IST

ಬಳ್ಳಾರಿ: ಹಗರಿಬೊಮ್ಮನಹಳ್ಳಿಯ ಕಲಾವಿದ ಪ್ರದೀಪ್‌ಕುಮಾರ್‌ ಪಿಟೀಲು ಹಿಡಿದು ಇಬ್ಬರು ಸಂಗಡಿಗರೊಂದಿಗೆ ವೇದಿಕೆಗೆ ಬಂದಾಗ ನೆರೆದಿದ್ದ ಸಭಿಕರು ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿರಲಿಲ್ಲ.

ಆದರೆ ಪ್ರದೀಪ್‌, ತಮ್ಮ ಪಿಟೀಲಿನಲ್ಲಿ ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಟ್ಯೂನ್‌ ಅನ್ನು ನುಡಿಸುತ್ತಿದ್ದಂತೆಯೇ ನೂರಾರು ವಿದ್ಯಾರ್ಥಿನಿಯರು ರೋಮಾಂಚಿತರಾಗಿ ಹೋ ಎಂದು ಹರ್ಷೋದ್ಗಾರ ಎಳೆದರು.

ಬುಧವಾರ ಅಲ್ಲಿಂದ ಶುರುವಾಯಿತು ನಗರದ ಅಲ್ಲಂ ಸುಮಂಗಳಮ್ಮ ಮಹಿಳೆಯರ ಕಾಲೇಜಿನಲ್ಲಿ ‘ಮುಂಗಾರು ಕಲೋತ್ಸವ’ದ ಸಂಭ್ರಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಜುನಾಥ ಲಲಿತಕಲಾ ಬಳಗ ಏರ್ಪಡಿಸಿದ್ದ ಉತ್ಸವ ಹೀಗೆ ಹೊಸತನದಿಂದ ರಂಜಿಸಿತು.

ADVERTISEMENT

ಪ್ರದೀಪ್‌ ತಂಡದವರು ನುಡಿಸಿದ‘ಜಾನೆ ಕಹಾ ಗಯಾ ಓ ದಿನ್‌’, ‘ ‘ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ’ ಫ್ಯೂಷನ್‌ ಹಾಡೂ ನೆರೆದವರನ್ನು ಮೋಡಿ ಮಾಡಿತು. ವಿಜಯ್‌ ಬಡಿಗೇರ್‌ ಕೀ ಬೋರ್ಡ್‌ ಹಾಗೂ ವಿಜಯ್‌ ತಬಲಾ ನುಡಿಸಿದರು.

ನಂತರ ಬಂದ ಅನುಮಯ್ಯ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಜಾನಪದ ಗೀತೆಗಳ ಗಾಯನ ಸಭಿಕರನ್ನು ಇನ್ನೊಂದು ನಾದದ ಲೋಕಕ್ಕೆ ಕರೆದೊಯ್ದಿತು. ‘ಚುನಾವಣೆಗೆ ನಿಂತ ಕಡೇ ಮನೆ ಹನುಮಂತ’ ಹಾಸ್ಯಗೀತೆಯು ನಗುವಿನ ಅಲೆಯನ್ನು ಉಕ್ಕಿಸಿತು.

ನಂತರ ಕೆ.ಉಮೇಶ್‌ ಅವರ ತಬಲಾ ಸೋಲೋ ಶಾಸ್ತ್ರೀಯ ಸಂಗೀತದ ಮಜಲನ್ನು ಪರಿಚಯಿಸಿತು. ಕೆ.ಶಾರದಾ ಆಚಾರ್ಯ ಭರತ ನಾಟ್ಯ ಪ್ರಸ್ತುತಪಡಿಸಿದರು. ಕೆ.ಕಾಳಿದಾಸ್‌ ಅವರ ‘ಮಾತನಾಡುವ ಗೊಂಬೆ’ ಇನ್ನಷ್ಟು ರಂಜಿಸಿತು.

ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ ಮಾತನಾಡಿದರು. ನೃತ್ಯ ಕಲಾವಿದೆ ವನಮಾಲ ಕುಲಕರ್ಣಿ ಉತ್ಸವವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಉಡೇದ ಬಸವರಾಜ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶಶಿಕಲಾ ಅಂಗಡಿ, ಕಲಾವಿದ ಮೋಹನ್ ಕಲ್ಬುರ್ಗಿ, ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ, ಕಾರ್ಯದರ್ಶಿ ಎಂ.ನಾಗಭೂಷಣ್, ಗೌರವಾಧ್ಯಕ್ಷ ಬಿ.ಎಂ.ಸಿದ್ದಲಿಂಗ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.