ADVERTISEMENT

‘ಆಪರೇಷನ್‌ ಕಮಲ’: ಸೋತವರೇ ಹೆಚ್ಚು!

ಎಸ್.ರವಿಪ್ರಕಾಶ್
Published 17 ಮೇ 2018, 19:42 IST
Last Updated 17 ಮೇ 2018, 19:42 IST
‘ಆಪರೇಷನ್‌ ಕಮಲ’: ಸೋತವರೇ ಹೆಚ್ಚು!
‘ಆಪರೇಷನ್‌ ಕಮಲ’: ಸೋತವರೇ ಹೆಚ್ಚು!   

ಬೆಂಗಳೂರು: 2008 ರ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆದ್ದು ಬಂದಿದ್ದಾಗ ಕೈಯಲ್ಲಿ ಮ್ಯಾಜಿಕ್‌ ಸಂಖ್ಯೆ (113) ಇರಲಿಲ್ಲ. ಆಗ ಬಿಜೆಪಿ ಮೊರೆ ಹೋಗಿದ್ದು ಅನ್ಯ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವ ‘ಆಪರೇಷನ್‌ ಕಮಲ’ ತಂತ್ರಕ್ಕೆ.

ಬಳಿಕ ಈ ಪದ ದೇಶದಾದ್ಯಂತ ‘ಕುಖ್ಯಾತಿ’ ಪಡೆಯಿತು. ಹಲವು ರಾಜ್ಯಗಳಲ್ಲಿ ಸರ್ಕಾರ ರಚಿಸುವ ಅಥವಾ ಉಳಿಸಿಕೊಳ್ಳುವ ಹೆಸರಿನಲ್ಲಿ ಬಿಜೆಪಿ ಈ ಪ್ರಯೋಗವನ್ನು ಪುನರ್‌ ಬಳಕೆ ಮಾಡಿತು.

ರಾಜ್ಯದಲ್ಲಿ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ ಬಿಜೆಪಿಗೆ ಬಂದವರಲ್ಲಿ ಬಹುತೇಕರು ಮಂತ್ರಿ ಪದವಿ ಪಡೆದರು. ಆದರೆ, 2013 ರ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಶಾಸಕರು ಮಣ್ಣು ಮುಕ್ಕಿದ್ದು ಇತಿಹಾಸ.

ADVERTISEMENT

2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆದ್ದಿತ್ತು. ಆಗ ಜನಾರ್ದನ ರೆಡ್ಡಿ ಮತ್ತವರ ಆಪ್ತರ ಉಸ್ತುವಾರಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಬೇಟೆಯಾಡಿ, ತಮ್ಮ ತೆಕ್ಕೆಗೆ ಸೆಳೆಯಲು ಯಶಸ್ವಿಯಾಗಿತ್ತು. ಆಗ ಬಹುಮತಕ್ಕೆ ಬೇಕಾಗಿದ್ದು ನಾಲ್ಕು ಸ್ಥಾನಗಳು.

ಆದರೆ, ಶಾಸಕರನ್ನು ಬೇಟೆಯಾಡುವ ಗೀಳಿಗೆ ಬಿದ್ದ ರೆಡ್ಡಿ ಬಳಗ ಆಪರೇಷನ್‌ ಕಮಲದ ಮೂಲಕ 10 ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ರಾಜೀನಾಮೆ ಕೊಟ್ಟು ಬಂದ ಶಾಸಕರನ್ನು ಉಪ ಚುನಾವಣೆಗಳಲ್ಲಿಗೆಲ್ಲಿಸಿಕೊಂಡರು. ಹೊರಗಿನಿಂದ ಕರೆತಂದವರಿಗೆ ಸಚಿವ ಸ್ಥಾನ ಕೊಡಲಾಗದೆ ಕೆಲವರಿಗೆ ನಿಗಮ– ಮಂಡಳಿಗಳಲ್ಲಿ ಸ್ಥಾನ ನೀಡಲಾಯಿತು.

2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದ ಡಿ.ಸುಧಾಕರ್‌, ಗೂಳಿಹಟ್ಟಿ ಶೇಖರ್‌, ಶಿವರಾಜ್‌ ತಂಗಡಗಿ, ವರ್ತೂರು ಪ್ರಕಾಶ್‌, ವೆಂಕಟರಮಣಪ್ಪ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಬಿಜೆಪಿ ನಿರಾಯಾಸವಾಗಿ ಸೆಳೆಯಿತು.

ಮುಂದೆ ಸರ್ಕಾರಕ್ಕೆ ಸಂಕಟ ಉದ್ಭವಿಸುವುದನ್ನು ತಪ್ಪಿಸಲು ಹೆಚ್ಚು ಸಂಖ್ಯೆ ತನ್ನ ಬಳಿ ಇದ್ದರೆ ಒಳಿತು ಎಂಬ ಕಾರಣಕ್ಕೆ ಆಪರೇಷನ್‌ ಕಮಲಕ್ಕೆ ಕೈ ಹಾಕಿತು. ಈ ಆಪರೇಷನ್‌ ತಂತ್ರ ಒಂದು ಕೆಟ್ಟ ಪರಂಪರೆಯಾಗಿಯೇ ಮುಂದುವರಿಯಿತು.

ಇದರ ಪರಿಣಾಮ ಜೆಡಿಎಸ್‌ನಿಂದ ಬಾಲಚಂದ್ರ ಜಾರಕಿಹೊಳಿ, ಉಮೇಶ್‌ ಕತ್ತಿ, ಕರಡಿ ಸಂಗಣ್ಣ, ಶಿವನಗೌಡ ನಾಯ್ಕ್, ಕಾಂಗ್ರೆಸ್‌ನ ವಿ.ಸೋಮಣ್ಣ, ಜಗ್ಗೇಶ್‌, ಎಂ.ಸಿ.ಅಶ್ವತ್ಥ್ , ಆನಂದ ಆಸ್ನೋಟಿಕರ್‌ ಮತ್ತು ಜೆ.ನರಸಿಂಹ ಸ್ವಾಮಿಯವರಿಂದ ರಾಜೀನಾಮೆ ಕೊಡಿಸಿತು. ನಂತರ ನಡೆದ ಉಪಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಹೊರತುಪಡಿಸಿ ಉಳಿದವರು ಗೆದ್ದರು. ಜಗ್ಗೇಶ್ ಚುನಾವಣೆಗೆ ಸ್ಪರ್ಧಿಸಲಿಲ್ಲ. ಈ ಬಾರಿ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು.

ನರಸಿಂಹಸ್ವಾಮಿ ಅವರಿಗೆ ಕೊಳೆಗೇರಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೆ, ಉಳಿದವರಿಗೆ ಮಂತ್ರಿ ಸ್ಥಾನ ನೀಡಲಾಯಿತು. ಸೋತ ಇಬ್ಬರಿಗೆ ತಕ್ಷಣಕ್ಕೆ ಪುನರ್ವಸತಿ ಆಗಲಿಲ್ಲ. ಸ್ವಲ್ಪ ಸಮಯದ ಬಳಿಕ ಜಗ್ಗೇಶ್‌ ಮತ್ತು ಸೋಮಣ್ಣ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಲಾಯಿತು. ಸೋಮಣ್ಣ ಮಂತ್ರಿಯೂ ಆಗಿದ್ದರು.

ಈಗ ಮತ್ತೆ ‘ಆಪರೇಷನ್‌ ಕಮಲ’ದ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಇದಕ್ಕೆ ಒಳಗಾಗಿ ಮತ್ತೆ ಕೆಟ್ಟ ಹೆಸರು ಪಡೆಯಬೇಕೆ ಅಥವಾ ರಾಜಕೀಯ ಜೀವನದಲ್ಲಿ ಒದಗಿ ಬಂದ ಸುವರ್ಣ ಅವಕಾಶ ಕಳೆದುಕೊಳ್ಳಬೇಕೆ ಎಂಬ ಗೊಂದಲಕ್ಕೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಸಿಲುಕಿದ್ದಾರೆ ಎಂದು  ಪಕ್ಷದ ಮೂಲಗಳು ತಿಳಿಸಿವೆ.

ಚನ್ನಪಟ್ಟಣದಲ್ಲಿ 2 ಬಾರಿ ಉಪಚುನಾವಣೆ

ರಾಮನಗರ ಜಿಲ್ಲೆ ಚನ್ನ‍ಪಟ್ಟಣದಲ್ಲಿ (2008) ಒಂದು ವಿಧಾನಸಭಾ ಅವಧಿಯಲ್ಲಿ ಎರಡು ಬಾರಿ ಉಪ ಚುನಾವಣೆ ನಡೆದು ಇತಿಹಾಸ ಸೃಷ್ಟಿಯಾಯಿತು.  ಮೊದಲ ಉಪಚುನಾವಣೆಯಲ್ಲಿ ಆಪರೇಷನ್‌ ಕಮಲಕ್ಕೆ ಒಳಗಾದ ಎಂ.ಸಿ.ಅಶ್ವತ್ಥ್‌ ಗೆಲುವು ಸಾಧಿಸಿದರು. ಇವರಿಗೆ ನಿಗಮವೊಂದರ ಸ್ಥಾನ ನೀಡಿ ತೃಪ್ತಿ ಪಡಿಸಲಾಯಿತು. ಬಳಿಕ ಅವರಿಂದ ರಾಜೀನಾಮೆ ಕೊಡಿಸಿ ಸಿ.ಪಿ.ಯೋಗೀಶ್ವರ ಗೆಲುವು ಸಾಧಿಸಿ ಸಚಿವರಾದರು.

ಆಪರೇಷನ್‌ ಕಮಲಕ್ಕೆ ಒಳಗಾಗಿದ್ದವರು

ಬಾಲಚಂದ್ರ ಜಾರಕಿಹೊಳಿ, ಎಂ.ಸಿ.ಅಶ್ವತ್ಥ್, ಶಿವನಗೌಡ ನಾಯ್ಕ್, ಜೆ.ನರಸಿಂಹಸ್ವಾಮಿ, ಉಮೇಶ್‌ ಕತ್ತಿ, ವಿ.ಸೋಮಣ್ಣ, ಜಗ್ಗೇಶ್‌, ಆನಂದ ಆಸ್ನೋಟಿಕರ್‌, ಕರಡಿ ಸಂಗಣ್ಣ, ಸಿ.ಪಿ.ಯೋಗೀಶ್ವರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.