ADVERTISEMENT

ಕಮರವಾಡಿ: ಅಂಗನವಾಡಿ ಕಟ್ಟಡ ಶಿಥಿಲ

ತಾತ್ಕಾಲಿಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:05 IST
Last Updated 10 ಏಪ್ರಿಲ್ 2021, 3:05 IST
ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿರುವುದು
ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿರುವುದು   

ಕಮರವಾಡಿ(ವಾಡಿ): ಕಮರವಾಡಿ ಗ್ರಾಮದ ವಾರ್ಡ್ ನಂ.2ರಲ್ಲಿರುವ ಅಂಗನವಾಡಿ ಕೇಂದ್ರ- 2 ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ತಾಲ್ಲೂಕಿನ ಕೆಲವು ಕಡೆ ಅಂಗನವಾಡಿ ಕೇಂದ್ರಗಳು ಸುಣ್ಣ ಬಣ್ಣ ಬಳಿದುಕೊಂಡು ನಳನಳಿಸುತ್ತಿದ್ದರೆ, ಈ ಅಂಗನವಾಡಿ ಕೇಂದ್ರ ಮಾತ್ರ ಸಂಪೂರ್ಣ ಹದಗೆಟ್ಟಿದೆ.

ಗ್ರಾಮ ಪಂಚಾಯಿತಿ ಹಿಂದೆ ಇರುವ ಈ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದೆ. ಕಬ್ಬಿಣದ ಸಲಾಕೆಗಳು ಹೊರಬಂದಿವೆ. ಸಿಮೆಂಟ್ ಸತ್ವ ಕಳೆದುಕೊಂಡು ಪದರು ಪದರಾಗಿ ಕಳಚಿ ಬೀಳುತ್ತಿದೆ. ಕಬ್ಬಿಣ ತುಕ್ಕು ಹಿಡಿದಿದ್ದು, ಭಾರ ತಾಳದೇ ನೆಲದತ್ತ ಮುಖ ಮಾಡಿವೆ.

ADVERTISEMENT

ಮಳೆ ಬಂದರೆ ಸಂಪೂರ್ಣ ಸೋರುತ್ತದೆ. ಇಡೀ ಗೋಡೆಗಳು ತಂಪಾಗಿ ಅಸಹನೀಯ ವಾತಾವರಣ ಉಂಟಾಗುತ್ತದೆ. ಕೆಲವು ಕಡೆ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಸಾಧ್ಯತೆ ಹೆಚ್ಚಿಸಿದೆ. ಇದು ಯಾವುದೇ ಕ್ಷಣದಲ್ಲಿ ಮಕ್ಕಳ ಪಾಲಿಗೆ ಹುರುಳಾಗಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಟ್ಟಡದ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಸ್ಥಳೀಯ ಪಂಚಾಯತಿಯ ಪಿಡಿಒ, ಅಧ್ಯಕ್ಷರಿಗೆ ತಿಳಿಸಲಾಗಿದೆ. ಆದಾಗ್ಯೂ ಅಂಗನವಾಡಿಯನ್ನು ಸುರಕ್ಷಿತ ಕಟ್ಟಡಕ್ಕೆ ಸ್ಥಳಾಂತರಿಸುವ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಜನರ ದೂರು.

ಇಲ್ಲಿಯೇ ಮಕ್ಕಳ ಚಟುವಟಿಕೆಗಳು ನಡೆಯುತ್ತವೆ ಹಾಗೂ ಬಾಣಂತಿಯರಿಗೆ ಆಹಾರ ಪಡಿತರ ವಿತರಿಸಲಾಗುತ್ತಿದೆ. ಆದರೆ ಕಟ್ಟಡ ಸೋರುತ್ತಿರುವುದಿರಂದ ಆಹಾರ ಪದಾರ್ಥಗಳೆಲ್ಲವೂ ಕೆಟ್ಟು ಹೋಗುತ್ತಿದ್ದು, ಹುಳುಗಳಾಗುತ್ತಿವೆ. ಇಲಿ, ಹೆಗ್ಗಣಗಳು ಆಹಾರ ಪದಾರ್ಥಗಳ ಮೇಲೆ ದಾಳಿ ಮಾಡುತ್ತಿವೆ. ಮಕ್ಕಳು, ಗರ್ಭಿಣಿ ಬಾಣಂತಿಯರ ದೃಷ್ಟಿಯಿಂದ ಹಳೆ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಸ್ಥಳಾಂತರಿಸಬೇಕು. ತಾಲ್ಲೂಕು ಆಡಳಿತ, ಶಾಸಕರು ಲಭ್ಯ ಅನುದಾನ ಬಳಸಿಕೊಂಡು ಹೊಸ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಕಟ್ಟಡ ಶಿಥಿಲಗೊಂಡಿರುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಅಂಗನವಾಡಿ ಮೇಲ್ವಿಚಾರಕಿ.

***

ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದು ಗಮನಕ್ಕೆ ಇದೆ. ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಹೆಚ್ಚುವರಿ ಕೋಣೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚಿಸಲಾಗಿತ್ತು. ಆದರೆ ಆಗಿರಲಿಲ್ಲ. ಪರ್ಯಾಯ ವ್ಯವಸ್ಥೆ ಮಾಡಲಾಗುವುದು

ಶೇಖಪ್ಪ ಶಂಖು, ಪಿಡಿಒ, ಕಮರವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.