ADVERTISEMENT

ಬೆಳಗಾವಿ: ಹಬ್ಬದ ಖರೀದಿ ಭರಾಟೆಯಲ್ಲಿ ಮಾರ್ಗಸೂಚಿ ಗಾಳಿಗೆ!

ಮಾರುಕಟ್ಟೆಯಲ್ಲಿ ಭಾರಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 12:50 IST
Last Updated 9 ಸೆಪ್ಟೆಂಬರ್ 2021, 12:50 IST
ಗಣೇಶ ಚತುರ್ಥಿ ಹಬ್ಬದ ಮುನ್ನಾದಿನವಾದ ಗುರುವಾರ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ಹೂವು, ಹಣ್ಣುಗಳು ಮೊದಲಾದವುಗಳ ಖರೀದಿಗಾಗಿ ಭಾರಿ ಜನಜಂಗುಳಿ ಕಂಡುಬಂತುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಗಣೇಶ ಚತುರ್ಥಿ ಹಬ್ಬದ ಮುನ್ನಾದಿನವಾದ ಗುರುವಾರ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ಹೂವು, ಹಣ್ಣುಗಳು ಮೊದಲಾದವುಗಳ ಖರೀದಿಗಾಗಿ ಭಾರಿ ಜನಜಂಗುಳಿ ಕಂಡುಬಂತುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಇಲ್ಲಿನ ಮಾರುಕಟ್ಟೆಗಳಲ್ಲಿ ಅಪಾರ ಜನಜಂಗುಳಿ ಕಂಡುಬಂತು. ಮಾಸ್ಕ್‌ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮೊದಲಾದ ಕೋವಿಡ್ ಮಾರ್ಗಸೂಚಿಗಳನ್ನು ಜನರು ಗಾಳಿಗೆ ತೀರಿ, ತಮಗೆ ಬೇಕಾದ ವಸ್ತುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರು.

ಹೂವುಗಳು, ಹಣ್ಣುಗಳು, ಪೂಜಾ ಸಾಮಗ್ರಿ, ಬಟ್ಟೆಗಳು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಟಪಗಳ ಅಲಂಕಾರಕ್ಕೆ ಸೇರಿದಂತೆ ಹಬ್ಬಕ್ಕೆ ಬೇಕಾಗುವ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದರು. ಬೆಲೆ ಏರಿಕೆ ಬಿಸಿಯ ನಡುವೆಯೂ ಸಾಮಗ್ರಿಗಳನ್ನು ಖರೀದಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಲಾಬಿ ಕೆ.ಜಿ.ಗೆ ₹ 800 ಇತ್ತು. ಸೇವಂತಿಗೆ ಕೆ.ಜಿ.ಗೆ ₹ 600, ಹೂಮಾಲೆಗಳಿಗೆ ಸರಾಸರಿ ₹ 60ರಿಂದ ₹ 70 ಇತ್ತು. ಸೇಬು ಕೆ.ಜಿ.ಗೆ ₹ 120, ದಾಳಿಂಬೆ ಕೆ.ಜಿ.ಗೆ ₹ 120ರಿಂದ ₹ 150, ಚಿಕ್ಕು ಡಜನ್‌ಗೆ ₹ 100ರಿಂದ ₹ 120, ಮೋಸಂಬಿ ಕೆ.ಜಿ.ಗೆ ₹ 120 ಇತ್ತು. ಟೊಮೆಟೊ ₹ 25ರಿಂದ ₹ 30, ಈರುಳ್ಳಿ ₹ 30 ಹಾಗೂ ಕ್ಯಾರೆಟ್ ₹ 60ಕ್ಕೆ ಇತ್ತು. ಕೆಲ ಸಮಯ ಮಳೆಯ ನಡುವೆಯೂ ವ್ಯಾಪಾರ–ಖರೀದಿ ನಡೆಯಿತು. ಪೂಜೆ ಇಡಲಾಗುವ ವಿವಿಧ ರೀತಿಯ ಐದು ಹಣ್ಣುಗಳಿಗೆ ₹ 60ರಿಂದ ₹ 70 ಇತ್ತು.

ADVERTISEMENT

ಕೆಲವು ಯುವಕರು ಕೇಸರಿ ಟೋಪಿ ಹಾಕಿಕೊಂಡು ತಳ್ಳುಗಾಡಿಗೆ ಭಗವಾಧ್ವಜ ಕಟ್ಟಿಕೊಂಡು ಹಣ್ಣುಗಳನ್ನು ಕಡಿಮೆ ಇತರರಿಗಿಂತ ಕಡಿಮೆ ದರದಲ್ಲಿ ಮಾರುತ್ತಿದ್ದುದು ಗಣಪತಿ ಗಲ್ಲಿಯಲ್ಲಿ ಕಂಡುಬಂತು.

‘ಹಬ್ಬದ ಕಾರಣ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ, ಜನರು ಒಂದು ಕೆ.ಜಿ. ಬದಲಿಗೆ ಅರ್ಧ ಕೆ.ಜಿ. ಖರೀದಿಸುತ್ತಿದ್ದಾರೆ. ಇದರಿಂದ ನಮಗೆ ಲಾಭವಾಗುವುದಿಲ್ಲ. ಸಿಕ್ಕಷ್ಟಕ್ಕೆ ತೃಪ್ತಿ ಪಡಬೇಕಾಗಿದೆ’ ಎಂದು ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದರು.

ಗಣಪತಿ ಗಲ್ಲಿ, ರವಿವಾರ ಪೇಟೆಯಲ್ಲಿ ಜನಜಂಗುಳಿ ಕಂಡುಬಂತು. ಸಾವಿರಾರು ಮಂದಿ ಜಮಾಯಿಸಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರು. ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಅಶೋಕ ನಗರದ ಸಗಟು ಹೂವಿನ ಮಾರುಕಟ್ಟೆಯಲ್ಲಿ ಜನರು ಮತ್ತು ವ್ಯಾಪರಿಗಳು ಹೂವುಗಳ ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗುಣಿ ಉಂಟಾಗಿತ್ತು. ಮುಂಜಾನೆಯಿಂದಲೇ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ಬರಲಾರಂಭಿಸಿದರು. ಮಧ್ಯಾಹ್ನ 12ರವರೆಗೂ ಖರೀದಿ ಪ್ರಕ್ರಿಯೆ ನಡೆಯಿತು. ರಸ್ತೆ ಬದಿಯಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದರಿಂದಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.