ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ; ಒಂದೂವರೆ ತಿಂಗಳಾದರೂ ಬಾರದ ಗೌರವಧನ

ಮೌಲ್ಯಮಾಪನ ಮಾಡಿದ ಅತಿಥಿ ಉಪನ್ಯಾಸಕರ ಪರದಾಟ

ಎಂ.ಮಹೇಶ
Published 17 ಸೆಪ್ಟೆಂಬರ್ 2021, 19:30 IST
Last Updated 17 ಸೆಪ್ಟೆಂಬರ್ 2021, 19:30 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೋಟ (ಸಂಗ್ರಹ ಚಿತ್ರ)
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೋಟ (ಸಂಗ್ರಹ ಚಿತ್ರ)   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದಲ್ಲಿ ವಿವಿಧ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವಧನ ಒಂದೂವರೆ ತಿಂಗಳಾದರೂ ಸಂದಾಯವಾಗಿಲ್ಲ.

ವಿವಿಧ ಸೆಮಿಸ್ಟರ್‌ಗಳಿಗೆ ನಡೆದಿದ್ದ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ನಗರದ ವಿವಿಧ ಕಾಲೇಜುಗಳಲ್ಲಿನ ಕೇಂದ್ರಗಳಲ್ಲಿ ನಡೆದಿತ್ತು. ಈ ಕಾರ್ಯಕ್ಕೆ ಯುಜಿಸಿ ಉಪನ್ಯಾಸಕರೊಂದಿಗೆ ಅತಿಥಿ ಉಪನ್ಯಾಸಕರನ್ನು ಕೂಡ ಬಳಸಿಕೊಳ್ಳಲಾಗಿತ್ತು. ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಇಲ್ಲಿಗೆ ಬಂದು ಹಲವು ದಿನಗಳು ತಂಗಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಿದ್ದರು. ‘ನಮಗೆ ವಿಶ್ವವಿದ್ಯಾಲಯದಿಂದ ಗೌರವಧನ ತಲುಪಿಲ್ಲ’ ಎಂದು ಹಲವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾನು ಹಿಂದೆಯೂ ಹಲವು ಬಾರಿ ಮೌಲ್ಯಮಾಪನ ಕೆಲಸಕ್ಕೆ ನಿಯೋಜನೆಗೊಂಡಿದ್ದೆ. ಹಿಂದೆಲ್ಲಾ ಮೌಲ್ಯಮಾಪನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹಾಜರಾತಿ ಪ್ರಮಾಣಪತ್ರದೊಂದಿಗೆ ಗೌರವಧನವನ್ನೂ ಸಂದಾಯ ಮಾಡುತ್ತಿದ್ದರು. ಆದರೆ, ಈ ಬಾರಿ ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ದಾಖಲೆಗಳನ್ನು ಪಡೆದಿದ್ದರು. ಗೌರವಧನಕ್ಕಾಗಿ ಕಾಯುತ್ತಾ ಕುಳಿತಿದ್ದೇನೆ. ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾಗಿದ್ದವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಾಗಲಕೋಟೆ ಜಿಲ್ಲೆಯ ಅತಿಥಿ ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡರು.

ADVERTISEMENT

‘ಬೇರೆ ಬೇರೆ ಕಡೆಯಿಂದ ಬಂದಿದ್ದ ನಾವು ಬೆಳಗಾವಿಯಲ್ಲಿ ಸ್ವಂತ ಖರ್ಚಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡು ಉಳಿದಿದ್ದೆವು. ದಿನಕ್ಕೆ ‘ಡಿಎ’ ಎಂದು ₹1200, ಪ್ರತಿ ಉತ್ತರಪತ್ರಿಕೆಗೆ ₹ 15 ಗೌರವಧನ ಕೊಡಬೇಕು. ದಿನಕ್ಕೆ ಸರಾಸರಿ 38 ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದೇವೆ. ಅದರಂತೆ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಬರಬೇಕಿದೆ. ಕೋವಿಡ್‌ ಪರಿಸ್ಥಿತಿಯಿಂದ ಕಂಗಲಾಗಿರುವ ನಮಗೆ ಗೌರವಧನ ಕೈಹಿಡಿಯುತ್ತದೆ ಎಂದು ಭಾವಿಸಿದ್ದೆವು. ಆದರೆ, ವಿಶ್ವವಿದ್ಯಾಲಯದವರ ವಿಳಂಬ ಧೋರಣೆಯಿಂದ ನಿರಾಸೆಯಾಗಿದೆ’ ಎಂದು ತಿಳಿಸಿದರು.

‘ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಕೆಲಸ ಇರಲಿಲ್ಲ. ಖಾಸಗಿ ಕಾಲೇಜುಗಳವರು ನಮಗೆ ಸಂಪೂರ್ಣ ವೇತನ ನೀಡಿಲ್ಲ. ಅದರ ನಡುವೆಯೂ ವಾ‌ಸ್ತವ್ಯದ ಖರ್ಚಿಗೆ ಸಾಲ ಮಾಡಿದ್ದೆ. ನನಗೆ 13 ದಿನಗಳ ಕೆಲಸಕ್ಕೆ ₹ 27ಸಾವಿರ ಬರಬೇಕಾಗಿದೆ. ಹೆಚ್ಚು ದಿನ ಕಾರ್ಯನಿರ್ವಹಿಸಿದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಕೋವಿಡ್ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನಮಗೆ ನೆರವಾಗಬೇಕು’ ಎಂದು ಅತಿಥಿ ಉಪನ್ಯಾಸಕರೊಬ್ಬರು ಕೋರಿದರು.

ಹಂತ ಹಂತವಾಗಿ ನೀಡಲಾಗುತ್ತಿದೆ​
ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದವರ ಬಿಲ್‌ಗಳು ಬಂದಿವೆ. ನ್ಯಾಕ್‌ ತಂಡ ಬಂದಿದ್ದರಿಂದ ಆ ಕೆಲಸದಲ್ಲಿ ತೊಡಗಿದ್ದೆವು. ಅದರಿಂದ ಸ್ವಲ್ಪ ವಿಳಂಬವಾಗಿದೆ. ವ್ಯತ್ಯಾಸವಿರುವ ಬಿಲ್‌ಗಳನ್ನು ವಾಪಸ್ ಮಾಡಲಾಗಿದೆ. ಹಂತ ಹಂತವಾಗಿ ನೀಡಲಾಗುತ್ತಿದೆ.
–ಪ್ರೊ.ಎಸ್.ಎಂ. ಹುರಕಡ್ಲಿ, ಕುಲಸಚಿವ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.