ADVERTISEMENT

ಸವದತ್ತಿ ಯಲ್ಲಮ್ಮ ದೇವಸ್ಥಾನ: ಸಾರ್ವಜನಿಕ ದರ್ಶನ ನಿಷೇಧ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 10:45 IST
Last Updated 4 ಜುಲೈ 2021, 10:45 IST
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ   

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಜೋಗುಳಭಾವಿ ಸತ್ತೆಮ್ಮದೇವಿ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭಾನುವಾರ ಆದೇಶಿಸಿದ್ದಾರೆ.

ಈ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿಗಳನ್ನು ತೆರೆಯುವುದನ್ನು ಕೂಡ ಮುಂದಿನ‌ ಆದೇಶದವರೆಗೆ ನಿಷೇಧಿಸಲಾಗಿದೆ.

ಈ ದೇವಸ್ಥಾನಗಳ ಆಡಳಿತ ಮಂಡಳಿಯವರು ದಿನ ನಿತ್ಯದ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ನಡೆಸುವ ಷರತ್ತಿಗೆ ಒಳಪಟ್ಟು ವಿನಾಯಿತಿ ನೀಡಲಾಗಿದೆ.

ADVERTISEMENT

ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಜುಲೈ 5ರಿಂದ ಅನ್ ಲಾಕ್ ಘೋಷಣೆ ಮಾಡಲಾಗಿದ್ದು, ದೇವಸ್ಥಾನಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಆದರೆ, ಯಲ್ಲಮ್ಮ ದೇವಸ್ಥಾನಕ್ಕೆ ನೆರೆಯ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ದರ್ಶನ ನಿಷೇಧ ಮುಂದುವರಿಸಲಾಗಿದೆ. ಆ ರಾಜ್ಯದಲ್ಲಿ ಕೋವಿಡ್ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.