ADVERTISEMENT

₹ 40.57 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:16 IST
Last Updated 16 ಸೆಪ್ಟೆಂಬರ್ 2021, 20:16 IST

ಬೆಂಗಳೂರು: ಭೂ ಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎರಡು ಸ್ಥಳಗಳಲ್ಲಿ ಒಟ್ಟು ₹ 40.57 ಕೋಟಿ ಮೌಲ್ಯದ ತನ್ನ ಆಸ್ತಿಯನ್ನು ಗುರುವಾರ ಮತ್ತೆ ವಶಕ್ಕೆ ಪಡೆದುಕೊಂಡಿದೆ.

ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 156/2 ರಲ್ಲಿನ 1.12 ಎಕರೆ ಮತ್ತು 156/3ರಲ್ಲಿನ 1.28 ಎಕರೆ ಪ್ರದೇಶವನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಈ ಬಗ್ಗೆ ಭೂಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಿಡಿಎ ಪರ ತೀರ್ಪು ನೀಡಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಕಾರ್ಯಕಾರಿ ಎಂಜಿನಿಯರ್ ಸುಷ್ಮಾ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಈ ಜಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಿದರು. ಈ ಭೂಮಿಯ ಸದ್ಯದ ಮಾರುಕಟ್ಟೆ ದರ ₹ 34.52 ಕೋಟಿ.

ADVERTISEMENT

ಮತ್ತೊಂದು ಕಾರ್ಯಾಚರಣೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 6ನೇ ಬ್ಲಾಕ್‌ನಲ್ಲಿ ನಿವೇಶನ ರಚನೆಗಾಗಿ ಭೂ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು. ಆದರೆ, ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 202ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 30x40 ಅಳತೆಯ ಏಳು ನಿವೇಶನಗಳಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಈ ಶೆಡ್‌ಗಳನ್ನೂ ಅಧಿಕಾರಿಗಳು ತೆರವುಗೊಳಿಸಿದರು. ಈ ನಿವೇಶನಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 6.05 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.