ADVERTISEMENT

ಮದ್ಯದ ಅಂಗಡಿ ತೆರೆಯಲು ವಿರೋಧ: ಪಟ್ಟು ಸಡಿಲಿಸದ ಪ್ರತಿಭಟನಕಾರರು

ಇಂದಿನಿಂದ ಡಿ.ಸಿ. ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:45 IST
Last Updated 21 ಸೆಪ್ಟೆಂಬರ್ 2021, 4:45 IST
ಮದ್ಯದ ಅಂಗಡಿ ತೆರವಿಗೆ ಆಗ್ರಹಿಸಿ ಬೀರೂರು ಹೋಬಳಿ ಎಮ್ಮೆದೊಡ್ಡಿ ಸಮೀಪದ ಮುಸಲಾಪುರ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು
ಮದ್ಯದ ಅಂಗಡಿ ತೆರವಿಗೆ ಆಗ್ರಹಿಸಿ ಬೀರೂರು ಹೋಬಳಿ ಎಮ್ಮೆದೊಡ್ಡಿ ಸಮೀಪದ ಮುಸಲಾಪುರ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು   

ಬೀರೂರು: ಸಮೀಪದ ಮುಸಲಾಪುರ ಗ್ರಾಮದಲ್ಲಿ ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವಾದ ಸೋಮವಾರವೂ ಮುಂದುವರಿದಿದೆ.

ಗ್ರಾಮದ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸೇರಿ ಭಾನುವಾರ ಅಂಗಡಿ ತೆರೆಯಲು ಅವಕಾಶ ನೀಡದೆ ಶಾಮಿಯಾನ ಹಾಕಿ ಸಂಜೆಯವರೆಗೂ ಪ್ರತಿಭಟನೆ ಜತೆಗೆ ಅಲ್ಲಿಯೇ ಆಹಾರ ತಯಾರಿಸಿ ಊಟ ಮಾಡಿದ್ದರು.

‘ಇದು ಪ್ರವಾಸಿ ತಾಣವೇನೂ ಅಲ್ಲ, ಹಾಗಿದ್ದ ಮೇಲೆ ಇಲ್ಲಿ ಲಾಡ್ಜ್ ಸಹಿತ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಯ ಉದ್ದೇಶ ಅನೈತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದೇ ಆಗಿದೆ ಎನ್ನುವುದು ನಮ್ಮ ದೂರು. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ತಲೆತಗ್ಗಿಸಿ ನಡೆಯುವಂತಾಗುವುದು ಬೇಡ ಎನ್ನುವುದು ನಮ್ಮ ನಿಲುವು ಆಗಿದ್ದು, ಮದ್ಯದ ಅಂಗಡಿ ತೆರವು ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ADVERTISEMENT

‘ಇಲ್ಲಿ ಪಂಚಾಯಿತಿ ನೀಡಿರುವ ಪರವಾನಗಿಯೂ ನಕಲಿ ಎನ್ನುವುದು ನಮ್ಮ ಅನುಮಾನವಾಗಿದ್ದು, ಚಿಲ್ಲರೆ ಮಾರಾಟಕ್ಕೆ ಬೇರೆಕಡೆ ನೀಡಿರುವ ಪರವಾನಗಿ ಸಂಖ್ಯೆ 3/21,22ಯನ್ನೇ ಇಲ್ಲಿ ಹೋಟೆಲ್ ಮತ್ತು ಲಾಡ್ಜ್ ನಡೆಸಲು ಕೊಟ್ಟಿದ್ದಾರೆ’ ಎಂದು ದೂರಿದರು.

ಮದ್ಯದ ಅಂಗಡಿ ಬಾಗಿಲು ತೆರೆಯಲು ಯತ್ನ: ಸೋಮವಾರ ಹೋರಾಟದ ನೇತೃತ್ವ ವಹಿಸಿದ್ದ ಪುರುಷರಲ್ಲಿ ಸಾಕಷ್ಟು ಮಂದಿ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸಂಘಟಿಸಲು ತೆರಳಿದ್ದರು. ಮಹಿಳೆಯರು ಕೃಷಿ ಚಟುವಟಿಕೆಗಳಿಗೆ ತೆರಳಲು ಸಿದ್ಧರಾಗಿದ್ದರು. ಕೆಲವೇ ಪೊಲೀಸ್‌ ಸಿಬ್ಬಂದಿ ಮುಂಜಾಗ್ರತೆ ಕ್ರಮವಾಗಿ ಸ್ಥಳದಲ್ಲಿದ್ದರು. ಅಂಗಡಿ ಮುಂದೆ ಪ್ರತಿಭಟನಕಾರರು ಇಲ್ಲದಿರುವುದನ್ನು ಗಮನಿಸಿ ಮದ್ಯದ ಅಂಗಡಿ ಬಾಗಿಲು ತೆರೆದು ವಹಿವಾಟಿಗೆ ಮುಂದಾದಾಗ ಕೂಡಲೇ ಎಚ್ಚೆತ್ತುಕೊಂಡ ಮಹಿಳೆಯರು ಮಂಗಡಿ ಮುಂದೆ ಜಮಾಯಿಸಿದರು.

‘ಏನೇ ಆದರೂ ಅಂಗಡಿ ತೆರೆಯಲು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ಕಂಡು ಮತ್ತೆ ಮಳಿಗೆ ಬಾಗಿಲು ಹಾಕಿದ್ದು, ಅಂಗಡಿ ನಿರ್ವಾಹಕರು ಒಳಗೇ ಇದ್ದು ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಬಂದರು. ‘ಪೊಲೀಸ್‌ ರಕ್ಷಣೆಯಲ್ಲಿ ಇಂತಹ ವ್ಯವಹಾರಗಳು ನಡೆಯುವು ದಾದರೆ ಜನರ ಪ್ರತಿಭಟನೆಗೆ ಏನು ಬೆಲೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಘಟನಾವಳಿಯನ್ನು ಪೊಲೀಸ್ ಸಿಬ್ಬಂದಿ ಚಿತ್ರೀಕರಿಸಿಕೊಂಡರು.

ಸಂಜೆ ವೇಳೆಗೆ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಮಾರಾಟ ಪರವಾನಗಿ ರದ್ದುಪಡಿಸಿದ ನೋಟಿಸ್‌ ಕೊಡಲು ಸ್ಥಳಕ್ಕೆ ಬಂದಾಗ ಪ್ರತಿಭಟನಕಾರರು ಮತ್ತು ಅಂಗಡಿ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಪೊಲೀಸ್‌ ಅಧಿಕಾರಿಗಳು, ಧರಣಿ ನೇತೃತ್ವ ವಹಿಸಿದ್ದ ಐವರನ್ನು ಗುರುತಿಸಿ ‘ಇಲ್ಲಿ ಏನೇ ಹಾನಿಯಾದರೂ ನೀವೇ ಹೊಣೆ’ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ಜನರ ಆಕ್ರೋಶಕ್ಕೆ ಹೆದರಿ ಅಂಗಡಿಯವರು ಪರಾರಿಯಾಗಿದ್ದು, ಅವರು ಸ್ಥಳೀಕರಲ್ಲ. ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿ ಕಟ್ಟಡ ಅಥವಾ ಒಳಗಿನ ಪರಿಕರಗಳಿಗೆ ಅವರೇ ಹಾನಿ ಮಾಡಬಹುದು. ಹೀಗಾಗಿ ಮುಂಜಾಗ್ರತೆಯ ಕ್ರಮವಾಗಿ ನಾವು ನಮ್ಮ ಪ್ರತಿಭಟನೆಯನ್ನು ಅಂಗಡಿಯ ಎದುರಿನಿಂದ ತೆರವುಗೊಳಿಸಿದ್ದು, ಶಾಮಿಯಾನ ಕೂಡಾ ತೆರವು ಮಾಡು ತ್ತಿದ್ದೇವೆ. ಹೀಗಾಗಿ ಇಲ್ಲಿ ಏನೇ ಅನಾಹುತ ಸಂಭವಿಸಿದರೂ ನಮಗೂ ಅದಕ್ಕೂ ಸಂಬಂಧವಿಲ್ಲ. ಪೊಲೀಸರು ಮತ್ತು ಮದ್ಯದ ಅಂಗಡಿಯವರೇ ಅದಕ್ಕೆ ಹೊಣೆಗಾರರಾಗಿದ್ದು, ನಾವು ಸ್ಥಳ ಬಿಡುವ ಸಮಯದಲ್ಲಿ ಕಟ್ಟಡ ಸುಸ್ಥಿತಿಯಲ್ಲಿ ಇರುವುದನ್ನು ಚಿತ್ರೀಕರಿಸಿ ಕೊಂಡಿದ್ದೇವೆ. ಮಂಗಳವಾರ ನಮ್ಮ ಪ್ರತಿ ಭಟನೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯಲಿದೆ’ ಎಂದು ತಿಳಿಸಿದರು.

ಕಡೂರು ಪಿಎಸ್‍ಐ ಎನ್.ಕೆ.ರಮ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.