ADVERTISEMENT

ಅನ್‌ಲಾಕ್ ಆಗದ ‘ಮಕ್ಕಳ ಮೇಲಿನ ದೌರ್ಜನ್ಯ’

ಶಾಲಾ ತರಗತಿಗಳು ಇಲ್ಲದ ಕಾರಣ ಹೊರಬಾರದ ಮಕ್ಕಳ ಹಕ್ಕುಗಳ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 5:34 IST
Last Updated 1 ಸೆಪ್ಟೆಂಬರ್ 2021, 5:34 IST
ಡಾ.ಶ್ರೀನಿವಾಸ ಕಕ್ಕಿಲ್ಲಾಯ
ಡಾ.ಶ್ರೀನಿವಾಸ ಕಕ್ಕಿಲ್ಲಾಯ   

ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಮುಚ್ಚಿ ಹೋಗಿದ್ದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹೊರ ತೆಗೆಯಲು ಮಕ್ಕಳ ಸಹಾಯವಾಣಿ ಸಜ್ಜಾಗಿದ್ದು, ಭೌತಿಕ ತರಗತಿಗಳ ಆರಂಭದ ಬಳಿಕಜಾಗೃತಿ ಹಾಗೂ ಕೌನ್ಸೆಲಿಂಗ್ ಆರಂಭಗೊಳ್ಳಲಿವೆ.

ಮಕ್ಕಳ ಹಕ್ಕುಗಳ ರಕ್ಷಣೆಯ ಕಾರ್ಯಕರ್ತರ ಪ್ರಕಾರ ಲಾಕ್‌ಡೌನ್‌ (ಭೌತಿಕ ತರಗತಿಗಳು ಇಲ್ಲದ) ಅವಧಿಯಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು ವರದಿಯಾಗಿಲ್ಲ. ಈ ಪೈಕಿ ಕೌಟುಂಬಿಕ ದೌರ್ಜನ್ಯಗಳೇ ಹೆಚ್ಚಾಗಿವೆ. ವೇದಿಕೆ (ಶಾಲೆ) ಸಿಗದ ಕಾರಣ ಹಿಂಸೆಗಳನ್ನು ಅನುಭವಿಸಿದ ಮಕ್ಕಳೂ ಮೌನವಾಗಿದ್ದಾರೆ.

ಮಕ್ಕಳ ಸಹಾಯವಾಣಿ ಪ್ರಕಾರ, ಪ್ರತಿ ವರ್ಷ ಮಕ್ಕಳ ಮೇಲಿನ ದೌರ್ಜನ್ಯ ಕುರಿತ ದೂರುಗಳ ಸಂಖ್ಯೆ ಹೆಚ್ಚುತ್ತಾ(2016ರಿಂದ 20ರ ತನಕ) ಹೋಗಿವೆ. ಆದರೆ, 2020–21ರಲ್ಲಿ ಆರೋಪಗಳು ಕೇಳಿಬಂದಿದ್ದರೂ, ಜಾಗೃತಿ ಹಾಗೂ ಅಭಿವ್ಯಕ್ತಿಸಲು ವೇದಿಕೆ ಸಿಗದ ಕಾರಣ ದೂರುಗಳ ಸಂಖ್ಯೆ ಕಡಿಮೆಯಾಗಿವೆ.

ADVERTISEMENT

‘ಕಳೆದ ವರ್ಷದ ಲಾಕ್‌ಡೌನ್‌ ಬಳಿಕ (2021ರ ಜನವರಿ) ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಆಗ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಶಾಲೆಗಳು ನಡೆಯದ ಕಾರಣ ಎಲ್ಲ ಮಕ್ಕಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಕರಣಗಳ ಸಂಖ್ಯೆ ಕಡಿಮೆ’ ಎಂದು ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕ ದೀಕ್ಷಿತ್‌ ಅಚ್ರಪ್ಪಾಡಿ ತಿಳಿಸಿದರು.

‘ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹೆಚ್ಚಿನ ಅಸ್ಥೆ ವಹಿಸಲು ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ. ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ಪ್ರತಿ ಶನಿವಾರ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಲಾಗುವುದು. ಆನ್‌ಲೈನ್ ತರಗತಿಗಳಲ್ಲೂ ಮಕ್ಕಳ ಸಹಾಯವಾಣಿ (1098) ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ’ ಎಂದರು.

ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ತನಕ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಒಟ್ಟು 2,214 ಶಾಲೆಗಳಲ್ಲಿ ಸುಮಾರು 3,18,436 ಮಕ್ಕಳು ಇದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ಶಾಲೆಗಳು ನಡೆಯದ ಕಾರಣ ಮಕ್ಕಳಿಗೆ ಹೇಳಿಕೊಳ್ಳಲೂ ತಿಳಿಯದಾಗಿದೆ. ಇದರಿಂದಾಗಿ ಸಾಕಷ್ಟು ಪ್ರಕರಣಗಳು ಹೊರಬಂದಿಲ್ಲ’ ಎಂದುದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಪೀಟರ್ ಡಿಸೋಜ ತಿಳಿಸಿದರು.

‘ಆದರೆ,ಫೋಕ್ಸೊ ಪ್ರಕರಣಗಳನ್ನು ಗಮನಿಸಿದರೆ ದೌರ್ಜನ್ಯ ಹೆಚ್ಚಿರುವ ಸಾಧ್ಯತೆ ಇದೆ. ಅದಕ್ಕಾಗಿ ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕಾಗಿದೆ’ ಎಂದರು.

ಕುಟುಂಬದೊಳಗಿನ ದೌರ್ಜನ್ಯವೇ ಹೆಚ್ಚು: ‘ತಂದೆ ಅಥವಾ ತಾಯಿಯಿಂದ ಹಲ್ಲೆ, ಸಂಬಂಧಿಗಳಿಂದ ದೌರ್ಜನ್ಯದ ಆರೋಪಗಳು ಹೆಚ್ಚಿವೆ. ಕೆಲಸವಿಲ್ಲದೇ ಸಮಸ್ಯೆಗೆ ಸಿಲುಕಿದ ಪೋಷಕರು ಮಕ್ಕಳ ಮೇಲೆ ದರ್ಪ ತೋರುತ್ತಿರುವ ಬಗ್ಗೆ ದೂರುಗಳಿವೆ. ಈ ರೀತಿಯಾಗಿ ಕುಟುಂಬದೊಳಗೆ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ’ ಎನ್ನುತ್ತಾರೆ ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ.

‘ಆನ್‌ಲೈನ್ ತರಗತಿ ಆರಂಭಗೊಂಡ ಬಳಿಕ ಮಕ್ಕಳಿಗೆ ಸಂಬಂಧಿಸಿದ ‘ಸೈಬರ್ ಕ್ರೈಂ’ ಹಾಗೂ ಮೊಬೈಲ್‌ ಮೂಲಕ ಮಕ್ಕಳನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ’ ಎಂದರು.

ಫೋಕ್ಸೊ ಹೆಚ್ಚಳ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012ರಿಂದ 2020ರ ತನಕ ಪೊಲೀಸ್ ಠಾಣೆಯಲ್ಲಿ 731 ಫೋಕ್ಸೊ ಪ್ರಕರಣಗಳು ದಾಖಲಾಗಿದ್ದವು. ಆದರೆ, 2021ರ ಜನವರಿ ಮತ್ತು ಫೆಬ್ರುವರಿಯಲ್ಲಿ 66 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ತಿಂಗಳಿಗೆ ಸರಾಸರಿ 8ರಷ್ಟು ಇದ್ದ ಪ್ರಕರಣಗಳ ಸಂಖ್ಯೆಯು ಲಾಕ್‌ಡೌನ್ ಬಳಿಕ 33ಕ್ಕೆ ಆಗಿದೆ.

ಕೋವಿಡ್ ಕಾರಣವಲ್ಲ: ಕಕ್ಕಿಲ್ಲಾಯ

‘ಬಹುತೇಕ ಮಕ್ಕಳಿಗೆ ಶಾಲೆ ಸುರಕ್ಷಿತ ಜಾಗವಾಗಿತ್ತು. ಲಾಕ್‌ಡೌನ್ ಬಳಿಕ ಮಕ್ಕಳ ಮೇಲಿನ ಮಾನಸಿಕ ಮತ್ತು ದೈಹಿಕ ಹಿಂಸೆ ಹೆಚ್ಚಾಯಿತು. ಮಕ್ಕಳಿಗೆ ಕಲಿಕೆ ಮಾತ್ರವಲ್ಲ, ಪೌಷ್ಟಿಕ ಆಹಾರವನ್ನೂ ಸಮರ್ಪಕವಾಗಿ ನೀಡಿಲ್ಲ. ಇನ್ನೊಂದೆಡೆ ಕುಟುಂಬದ ಒಳಗಿನ ಮನಸ್ತಾಪಗಳು ಹೆಚ್ಚಾಗಿ, ಈ ಹತಾಶೆಯನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೆ. ಮಾನಸಿಕ ವಿಕೃತಿ ಹಾಗೂ ಹಿಂಸಾ ಪ್ರವೃತ್ತಿಯು ಸಮಾಜದಲ್ಲಿ ಹೆಚ್ಚಾಗಿದ್ದು, ಮಕ್ಕಳು ಬಲಿಪಶು ಆಗುತ್ತಿದ್ದಾರೆ. ಇದಕ್ಕೆ ಕೋವಿಡ್ ಕಾರಣ ಅಲ್ಲವೇ ಅಲ್ಲ. ಕೊರೊನಾ ಹೆಸರಿನಲ್ಲಿ ಸರ್ಕಾರ, ಆಡಳಿತ ಹಾಗೂ ತಥಾಕತಿತ ವೈದ್ಯ ಸಲಹಾ ಮಂಡಳಿಗಳು ನೀಡಿದ ಪ್ರಜ್ಞಾ ರಹಿತ ತಪ್ಪು ನಿರ್ಧಾರಗಳೇ ಕಾರಣ’ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.