ADVERTISEMENT

ದೇವಾಲಯಗಳ ತೆರವು: ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 12:06 IST
Last Updated 16 ಸೆಪ್ಟೆಂಬರ್ 2021, 12:06 IST
ಮೈಸೂರಿನ ನಂಜನಗೂಡಿನಲ್ಲಿ ದೇವಾಲಯ ನೆಲಸಮ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರು ಮಂಗಳೂರಿನ ಮಲ್ಲಿಕಟ್ಟೆ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.  –ಪ್ರಜಾವಾಣಿ ಚಿತ್ರ
ಮೈಸೂರಿನ ನಂಜನಗೂಡಿನಲ್ಲಿ ದೇವಾಲಯ ನೆಲಸಮ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರು ಮಂಗಳೂರಿನ ಮಲ್ಲಿಕಟ್ಟೆ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.  –ಪ್ರಜಾವಾಣಿ ಚಿತ್ರ   

ಮಂಗಳೂರು: ಮೈಸೂರಿನಲ್ಲಿ ಪುರಾತನ ದೇವಾಲಯಗಳ ಧ್ವಂಸ ಹಾಗೂ ರಾಜ್ಯದಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಸರ್ಕಾರದ ನಡೆಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಕಾರ್ಯಕರ್ತರು ಗುರುವಾರ ನಗರದ ಕದ್ರಿ ಮಲ್ಲಿಕಟ್ಟೆ ದ್ವಾರದ ಬಳಿ ಪ್ರತಿಭಟಿಸಿದರು.

‘ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಆದಿಶಕ್ತಿ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಬಲವಂತದಿಂದ ಒಡೆದು ಹಾಕಿರುವುದು ಸರಿಯಲ್ಲ. ದೇವಾಲಯಗಳನ್ನು ತೆರವುಗೊಳಿಸುವ ನಿರ್ಧಾರದಿಂದ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು ಮತ್ತು ಒಡೆದು ಹಾಕಿರುವ ದೇವಾಲಯಗಳ ಪುನರ್‌ ನಿರ್ಮಾಣ ಮಾಡಬೇಕು. ಈ ಘಟನೆಗೆ ಕಾರಣದಾದ ಮೈಸೂರು ಜಿಲ್ಲಾಧಿಕಾರಿ ಹಾಗೂ ನಂಜನಗೂಡು ತಹಶೀಲ್ದಾರರನ್ನು ಅಮಾನತುಗೊಳಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಸಂದರ್ಭದಲ್ಲಿ ಸರ್ಕಾರ, ಪ್ರತಿ ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕ ಪರಾಮರ್ಶೆ ನಡೆಸಬೇಕು. ಸಕ್ರಮ, ಸ್ಥಳಾಂತರ ಅನಿವಾರ್ಯ ಇದ್ದಾಗ ಮಾತ್ರ ತೆರವು ಮಾಡಬೇಕು ಎಂದಿದ್ದರೂ, ಮೈಸೂರಿನ ಜಿಲ್ಲಾಡಳಿತ ಇದನ್ನು ಪರಿಶೀಲಿಸಿದೆ, ದೇವಾಲಯ ಕೆಡವಿರುವುದು ಖಂಡನೀಯ ಎಂದು ಬಜರಂಗ ದಳ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಹೇಳಿದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಬಜರಂಗ ದಳ ಪ್ರಾಂತ್ಯ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಪ್ರಮುಖರಾದ ಗೋಪಾಲ ಕುತ್ತಾರ್, ಶಿವಾಜಿ ಮೆಂಡನ್, ರಾಧಾ, ಶಶಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.