ADVERTISEMENT

ಹಾಲಿ ಶಾಸಕರಿಗೆ ಟಿಕೆಟ್?: ಚರ್ಚೆ ಹುಟ್ಟು ಹಾಕಿದ ಬಸವರಾಜ ಬೊಮ್ಮಾಯಿ ಮಾತು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:32 IST
Last Updated 19 ಮಾರ್ಚ್ 2023, 7:32 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹಾಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರಿಗೆ ಮತ್ತೆ ಟಿಕೆಟ್ ನೀಡುವುದು ನಿಶ್ಚಿತವೇ ಎಂಬ ಮಾತು ಇದೀಗ ಬಲವಾಗತೊಡಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಪಾಲ್ಗೊಂಡ ‘ಫಲಾನುಭವಿಗಳ ಸಮ್ಮೇಳನ’ ಹಾಗೂ ಕೊಡವ ಕೌಟುಂಬಿಕ ಹಾಕಿ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭಗಳಲ್ಲಿ ‘ಇಬ್ಬರು ಶಾಸಕರಿಗೆ ಇದುವರೆಗೂ ಆಶೀರ್ವಾದ ಮಾಡಿದ್ದೀರಿ, ಮುಂದೆಯೂ ಇವರಿಗೆ ಆಶೀರ್ವಾದ ಮಾಡಿ’ ಎಂದು ಹೇಳಿರುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

‘ಜಿಲ್ಲೆಯಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಅದರ ಲಾಭ ನಮಗೆ ಸಿಗುತ್ತದೆ’ ಎಂಬ ಕಾಂಗ್ರೆಸ್ ‍ಪಕ್ಷದ ಮುಖಂಡರ ಮಾತಿನಿಂದ ಬಿಜೆಪಿಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಬಹುದು ಎಂಬ ಚರ್ಚೆ ಕಾರ್ಯಕರ್ತರಲ್ಲಿ ನಡೆದಿತ್ತು. ಈ ಬಾರಿ ಕನಿಷ್ಠ ಒಂದು ಕ್ಷೇತ್ರದಲ್ಲಾದರೂ ಹೊಸ ಮುಖಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಮುಖ್ಯಮಂತ್ರಿಯ ಈ ಮಾತು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಇಬ್ಬರೂ ಶಾಸಕರು ಕಡತಗಳನ್ನು ಬೆಂಗಳೂರಿಗೆ ಹೊತ್ತು ತರುತ್ತಾರೆ. ನನ್ನ ಸಹಿ ಆಗುವವರೆಗೂ ಕಾದುಕೊಂಡಿದ್ದು, ಸಹಿ ಮಾಡಿದ ತಕ್ಷಣ ವಾಪಸ್ ಇಲ್ಲಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಬೇರೆ ಜಿಲ್ಲೆಯ ಶಾಸಕರಂತೆ ಸುಮ್ಮನೇ ಇರುವುದಿಲ್ಲ. ಇಲ್ಲಿನ ಶಾಸಕರ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ’ ಎಂಬ ಮುಖ್ಯಮಂತ್ರಿಯ ಹೊಗಳಿಕೆ ಮಾತುಗಳೂ ಇದಕ್ಕೆ ಸಾಕ್ಷಿ ಎನಿಸಿವೆ.

ADVERTISEMENT

ಒಂದು ವೇಳೆ ಅಭ್ಯರ್ಥಿಗಳ ಬದಲಾವಣೆ ಖಚಿತವಾಗಿದ್ದರೆ ಅದರ ಒಂದಿಷ್ಟು ಸುಳುಹುಗಳನ್ನು ಅವರು ತಮ್ಮ ಭಾಷಣದಲ್ಲಿ ನೀಡುತ್ತಿದ್ದರು. ಆದರೆ, ಅವರು ಎರಡೂ ಕಡೆಯೂ ಈ ಬಾರಿಯೂ ಹಾಲಿ ಶಾಸಕರಿಗೆ ಆಶೀರ್ವಾದ ಮಾಡಿ ಹೇಳಿರುವುದು ರಾಜಕೀಯ ವಲಯದಲ್ಲಿ ಮಹತ್ವದ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.