ADVERTISEMENT

ಅಭಿವೃದ್ಧಿ ಕಾಮಗಾರಿ‌ಗಳು ಕಳಪೆ

ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 14:02 IST
Last Updated 21 ಸೆಪ್ಟೆಂಬರ್ 2021, 14:02 IST
ಗಂಗಾವತಿ ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ, ಉಪಾಧ್ಯಕ್ಷೆ ಸುಧಾ ಸೋಮನಾಥ ಇದ್ದರು
ಗಂಗಾವತಿ ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ, ಉಪಾಧ್ಯಕ್ಷೆ ಸುಧಾ ಸೋಮನಾಥ ಇದ್ದರು   

ಗಂಗಾವತಿ: ನಗರದಲ್ಲಿ ಸುಮಾರು ವರ್ಷಗಳಿಂದ ಒಳಚರಂಡಿ ಮತ್ತು ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಇವೆಲ್ಲವೂ ಕಳಪೆಯಿಂದ ಕೂಡಿದ್ದು, ಅಪೂರ್ಣ ಕಾಮಗಾರಿಗಳಾಗಿವೆ ಎಂದು ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ವಾರ್ಡಿನಲ್ಲಿ ಒಳಚರಂಡಿ ಮತ್ತು ರಸ್ತೆಗಳ ಕಾಮಗಾರಿ ನಡೆದಿದ್ದು, ಪ್ರತಿ ಮನೆಗಳಿಂದ ಚರಂಡಿಗೆ ಪೈಪ್‌ಲೈನ್ ಸಂಪರ್ಕ ಅಳವಡಿಸಬೇಕಿತ್ತು. ಈ ಪ್ರಕ್ರಿಯೆ ನಡೆಯದ ಕಾರಣ ಸದಸ್ಯರು, ಸಂಬಂಧಿಸಿದ ಎಂಜಿನಿಯರ್‌ ಅವಿನಾಶ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಅಮೃತ ಸಿಟಿ ಯೋಜನೆಯಡಿ ನಗರದ ವಿವಿಧ ವಾರ್ಡಿನಲ್ಲಿ ಪೂರ್ಣಗೊಂಡ ಸಿಸಿ ರಸ್ತೆಗಳ, ಚರಂಡಿಗಳ ಕಾಮಗಾರಿ ಬೇಕಾ ಬಿಟ್ಟಿಯಾಗಿ ನಡೆದಿವೆ. ಇದು ಕಾಮಗಾರಿ ಪಡೆದ ಎಂಜಿನಿಯರ್‌ ಅವರ ತಪ್ಪು, ಆದರೆ ವಾರ್ಡಿನ ಜನರು ನಗರಸಭೆ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಇದಕ್ಕೆ ಸದಸ್ಯರು ಏನೂ ಉತ್ತರ ನೀಡಬೇಕು ಎಂದು ಬಿಜೆಪಿಯ ನವೀನ್ ಪಾಟೀಲ್, ಪರಶುರಾಮ ಮಡ್ಡೇರ, ವಾಸು ನವಲಿ, ಉಮೇಶ ಸಿಂಗನಾಳ, ರಮೇಶ ಚೌಡ್ಕಿ ಆಕ್ರೋಶ ವ್ಯಕ್ತಪಡಿಸಿದರು.

2010-11ನೇ ಸಾಲಿನಿಂದ 2014-15ರ ವರೆಗೆ 13ನೇ ಹಣಕಾಸು ಯೋಜನೆಯಡಿ ಉಳಿಕೆಯಾದ ₹ 42 ಲಕ್ಷ ಅನುದಾನವನ್ನು ರಸ್ತೆ ಕಾಮಗಾರಿಗಳಿಗೆ ಬಳಸುವಂತೆ ಒಪ್ಪಿಗೆ ನೀಡಲಾಯಿತು.

ಹೈಕೋರ್ಟ್‌ನಲ್ಲಿರುವ ಕೆಲ ಪ್ರಕರಣಗಳನ್ನು ಚರ್ಚೆ ಮಾಡುವ ವೇಳೆ, ಕೆಲ ಸದಸ್ಯರು ಇಂತಹ ವಿಷಯಗಳು ಸಭೆಯಲ್ಲಿ ಚರ್ಚಿಸಲು ಅವಕಾಶ ಇಲ್ಲ. ಈ ಕುರಿತು ಆಡಳಿತ ಮಂಡಳಿಗೆ ಪರಿಜ್ಞಾನ ಇಲ್ಲವೇ ಎಂದು ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಒಳ ಚರಂಡಿ ಯೋಜನೆಯಡಿ ಹಳೆಯ ಕೊಳವೆ ಜಾಲವನ್ನು ಸ್ವಚ್ಚಗೊಳಿಸಲು ₹ 172 ಲಕ್ಷ ಅನುದಾನವಿದ್ದು, ಇದು ರಾಜ್ಯ ಸರ್ಕಾರದ ಅನುದಾನವಾಗಿದ್ದರೆ ಮಾತ್ರ ನಗರದಲ್ಲಿನ 43 ಕಿ.ಮೀ ಕೊಳವೆ ಜಾಲ ಸ್ವಚ್ಚಗೊಳಿಸಿಲು ಒಪ್ಪಿಗೆ ನೀಡಲಾಗುವುದು, ನಗರಸಭೆ ಅನುದಾನವಾದರೆ ಒಪ್ಪಿಗೆ ನೀಡುವುದಿಲ್ಲ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

14ನೇ ಹಣಕಾಸು ಯೋಜನೆಯಡಿ 2015-16ರಿಂದ 2019-20 ಸಾಲಿನಲ್ಲಿ ಉಳಿದ ಎಸ್.ಎಫ್.ಸಿ ₹ 20.10ಲಕ್ಷ ಅನುದಾನವನ್ನು ವಿವಿಧ ರೀತಿಯ ಕಾಮಗಾರಿಗಳಿಗೆ ಬಳಸುವಂತೆ ಸೂಚಿಸಿದರು. ಈ ಸಭೆಯಲ್ಲಿ ಇತರೆ ವಿಷಯಗಳ ಕುರಿತು ಚರ್ಚೆ ನಡೆಯಿತು.

ನಗರದಲ್ಲಿನ ಸಂತೆಬಯಲು ಮತ್ತು ಸಂಡೆ ಮಾರುಕಟ್ಟೆ ನಗರಸಭೆ ಆಸ್ತಿಯಾಗಿದ್ದು, ಅಲ್ಲಿ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಬಹುದು. ಇದರಿಂದ ಆಸ್ತಿ ಕಾಪಾಡಿದಂತಾಗುತ್ತದೆ ಜೊತೆಗೆ ನಗರಸಭೆಗೆ ಬಾಡಿಗೆ ರೂಪದಲ್ಲಿ ಆದಾಯವು ಹೆಚ್ಚಾಗುತ್ತದೆ ಎಂದು ಪೌರಾಯುಕ್ತರು ಅಭಿಪ್ರಾಯಪಟ್ಟರು.

ಈ ವೇಳೆ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಅಧ್ಯಕ್ಷೆ ಮಾಲಾಶ್ರೀ ಸಂದೀಪ, ಉಪಾಧ್ಯಕ್ಷೆ ಸುಧಾ ಸೋಮನಾಥ, ನಗರಸಭೆ ಸದಸ್ಯರಾದ ಸೋಮನಾಥ ಬಂಡಾರಿ ಸೋಮಪ್ಪ, ಸುನೀತಾ ತಿಪ್ಪಣ್ಣ ಶ್ಯಾವಿ, ಅಬಿದಾ ಮುದ್ದಾಬಳ್ಳಿ, ಮಸ್ತಕ್ ಅಲಿ ಫಕ್ರುದ್ದೀನ್, ಪರಶುರಾಮ ಮಡ್ಡೇರಾ, ವಾಸುನವಲಿ, ಉಮೇಶ ಸಿಂಗನಾಳ, ರಮೇಶ ಚೌಡ್ಕಿ ಸೇರಿದಂತೆ ವಿವಿಧ ವಾರ್ಡಿನ ಸದಸ್ಯರು ಇದ್ದರು.

ನಗರಸಭೆ ಆಸ್ತಿ ಒತ್ತುವರಿ: ಆರೋಪ

1986 ರಲ್ಲಿ ಗಂಗಾವತಿ ನಗರಸಭೆ ಆಸ್ತಿ ಒಟ್ಟು 36 ಎಕರೆ ಹೊಂದಿತ್ತು. ಆದರೆ ಇದೀಗ ಟೀಚರ್ಸ್ ಕಾಲೊನಿ, ಕೆಇಬಿ, ಸಿರಿಗೇರಿ ಪೆಟ್ರೋಲ್ ಪಂಪ್, ಗುಂಡಮ್ಮ ಕ್ಯಾಂಪ್ ಡಾ.ಪಾಟೀಲ್ ಆಸ್ಪತ್ರೆ, ಫಾತೀಮಾ ಶಾಹಿದ್ ಮಹಲ್ ರಸ್ತೆ ಸೇರಿದಂತೆ ಇತರೆ ಒಟ್ಟು 50 ರಸ್ತೆಗಳ ಸ್ಥಳ ಮತ್ತು ಪ್ಲಾಟ್ ಗಳ ಒತ್ತುವರಿ ನಡೆದಿದೆ. ನಗರಸಭೆ ಆಸ್ತಿ ರಕ್ಷಣೆ ಮಾಡಬೇಕಾದ ಅಧಿಕಾರಿಗಳೆ ಸುಮ್ಮನಿರುವುದು ತುಂಬಾ ಬೇಸರವಾಗಿದೆ ಎಂದು 5ನೇ ವಾರ್ಡಿನ ನಗರಸಭೆ ಸದಸ್ಯ ಮಹ್ಮದ್ ಉಸ್ಮಾನ್ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.