ADVERTISEMENT

ವರ್ಣಾಶ್ರಮಗಳಾದ ಗೃಹಸ್ಥ, ಸನ್ಯಾಸದ ಆಯಾಮ ಭಕ್ತಿ: ಸುಷುಮ್ನಾ ಕಣ್ಣನ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:03 IST
Last Updated 16 ಸೆಪ್ಟೆಂಬರ್ 2021, 6:03 IST
ಸುಷುಮ್ನಾ ಕಣ್ಣನ್‌
ಸುಷುಮ್ನಾ ಕಣ್ಣನ್‌   

ಮೈಸೂರು: ‘ವರ್ಣಾಶ್ರಮಗಳಾದ ಗೃಹಸ್ಥ ಹಾಗೂ ಸನ್ಯಾಸದಿಂದ ರೂಪುಗೊಂಡ ಮೂರನೇ ಆಯಾಮವೇ ಭಕ್ತಿ’ ಎಂದು ವಿಮರ್ಶಕಿ ಸುಷುಮ್ನಾ ಕಣ್ಣನ್‌ ಪ್ರತಿಪಾದಿಸಿದರು.

ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಭಕ್ತಿ, ಮಹಿಳೆ ಮತ್ತು ಸ್ತ್ರೀವಾದ’ ಕುರಿತು ಅವರು ಮಾತನಾಡಿದರು.

‘12ನೇ ಶತಮಾನದ ವಚನಕಾರರು ಸಮಾಜದ ನಡುವೆ ಜೀವನ ನಡೆಸುತ್ತಲೇ ಸನ್ಯಾಸ ಹಾಗೂ ಅಧ್ಯಾತ್ಮವನ್ನು ಸಾಧಿಸಲು ಭಕ್ತಿ ಮಾರ್ಗವನ್ನು ಅನುಸರಿಸಿದರು. ಹಾಗೆಯೇ ಕಾಯಕವನ್ನು ಭಕ್ತಿಗೆ ಅಳವಡಿಸಿದರು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಶರಣರು ತಮ್ಮನ್ನುಸನ್ಯಾಸಿಗಳಂತೆಯೇ ಪರಿಭಾವಿಸಿದ್ದರಿಂದ ಜಾತಿಯ ಸೋಂಕು ಅವರಿಗೆ ಅಂಟಲಿಲ್ಲ. ಶೈವಾಗಮ ಪದ್ಧತಿಯನ್ನು ಅಳವಡಿಸಿಕೊಂಡ ಇವರು ದೀಕ್ಷೆ ಮೊದಲಾದ ಆಚರಣೆಗಳನ್ನು ಅನುಸರಿಸಿದರು’ ಎಂದರು.

‘ಶೂದ್ರರು ಮತ್ತು ಸ್ತ್ರೀಯರಿಗೆ ಮೋಕ್ಷ ಸಿಗುವುದಿಲ್ಲ ಎಂದು ವೇದೋತ್ತರ ಕಾಲದಲ್ಲಿ ಸಮಾಜವು ಬಲವಾಗಿ ಪ್ರತಿಪಾದಿಸಿತು. ಆಗಮ ಮಾರ್ಗಗಳು ಮುಚ್ಚಿದ್ದರಿಂದ ಎಲ್ಲ ಸುಧಾರಣಾ ಪಂಥಗಳು ಇವರಿಗೆಭಕ್ತಿ ಮಾರ್ಗವನ್ನು ತೋರಿದವು. ಹೀಗಾಗಿಯೇ ದೇಶದಲ್ಲಿ ಭಕ್ತಿ ‍ಪಂಥಗಳು ಜನಪ್ರಿಯತೆ ಪಡೆದವು’ ಎಂದು ಹೇಳಿದರು.

‘ಭಕ್ತಿ ಪಂಥಗಳು ಸಮಾಜದಲ್ಲಿದ್ದ ಮೌಢ್ಯಗಳು, ಅಸಮಾನತೆ ವಿರುದ್ಧ ಹೋರಾಡಲು ಶ್ರಮಿಸುವುದಕ್ಕಿಂತ ಹೆಚ್ಚಾಗಿಯೇ ಕರ್ಮ, ಮೋಕ್ಷ ಮೊದಲಾದ ಹಕ್ಕುಗಳನ್ನು ಜನರಿಗೆ ದೊರಕಿಸಲು ಯತ್ನಿಸಿವೆ’ ಎಂದು ತಿಳಿಸಿದರು.

‘ಮುಟ್ಟಿನ ಕಾರಣದಿಂದಾಗಿಯೇ ಸ್ತ್ರೀಯರನ್ನು ಭಾರತೀಯ ಸಮಾಜವು ಸಂಕೋಲೆಗಳನ್ನು ವಿಧಿಸಿತು. ಲಿಂಗ ಭೇದವನ್ನು ಹೋಗಲಾಡಿಸಲು ವಚನಕಾರರು ಹಾಗೂ ವಿವಿಧ ಭಕ್ತಿ ಪಂಥಿಗಳು ಹೋರಾಡಿವೆ’ ಎಂದು ಹೇಳಿದರು.

ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ, ಸಹಾಯಕ ಫೆಲೋ ಡಾ.ಎನ್.ಎಸ್.ಅನ್ನಪೂರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.