ADVERTISEMENT

ಘೂಳನೂರ: ಸಿದ್ದರಾಮೇಶ್ವರ ದೇವಸ್ಥಾನದ ಉದ್ಘಾಟನೆ ನಾಳೆ

₹ 55 ಲಕ್ಷ ವೆಚ್ಚದಲ್ಲಿ ನಿರ್ಮಾಣ; ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 12:08 IST
Last Updated 5 ಜುಲೈ 2021, 12:08 IST
ಸಾರಂಗಧರ ಶ್ರೀ
ಸಾರಂಗಧರ ಶ್ರೀ   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಘೂಳನೂರ ಗ್ರಾಮದಲ್ಲಿ ಇದೇ 7ರಂದು ಮಧ್ಯಾಹ್ನ 2ಕ್ಕೆ ಶ್ರೀಗುರು ಸಿದ್ದರಾಮೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ನಡೆಯಲಿದೆ ಎಂದು ಸುಲಫಲಮಠದ ಪೀಠಾಧಿಪತಿ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀಮಠದ ಭಕ್ತರು, ಜನಪ್ರತಿನಿಧಿಗಳ ನೀಡಿದ ನೆರವಿನಿಂದ ₹ 55 ಲಕ್ಷ ವೆಚ್ಚದಲ್ಲಿ ಸಿದ್ದರಾಮೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೊನ್ನಲಿಗೆಯ ಸಿದ್ದರಾಮೇಶ್ವರರು ಇಲ್ಲಿಗೆ ಬಂದು ತಪಸ್ಸು ಮಾಡಿ ಭಕ್ತರಿಗೆ ಆಶೀರ್ವಚನ ನೀಡಿ ನಂತರ ಬಸವಾದಿ ಶರಣವನ್ನು ಸೇರಿಕೊಳ್ಳಲು ಮುಂದೆ ಸಾಗಿದ್ದರು. ಹೀಗಾಗಿ, ಇಂತಹ ಐತಿಹಾಸಿಕ ಮಹತ್ವವಿರುವ ಘೂಳನೂರ ಗ್ರಾಮದಲ್ಲಿ ಎಲ್ಲರೂ ಸೇರಿಕೊಂಡು ದೇವಸ್ಥಾನ ನಿರ್ಮಿಸಿದ್ದಾರೆ' ಎಂದರು.

ದೇವಸ್ಥಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು. ಕಳಸಾರೋಹಣವನ್ನು ಸಾಮಾನ್ಯವಾಗಿ ಸ್ವಾಮಿಗಳೇ ಮಾಡುತ್ತಾರೆ. ಆದರೆ, ಆ ಸಂಪ್ರದಾಯವನ್ನು ಮುರಿಯಲು ನಿರ್ಧರಿಸಲಾಗಿದ್ದು, ದೇವಸ್ಥಾನದ ಭಕ್ತರಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ, ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರೂ ಆದ ದತ್ತಾತ್ರೇಯ ಪಾಟೀಲ ರೇವೂರ ಕಳಸಾರೋಹಣ ನೆರವೇರಿಸುವರು.ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅಧ್ಯಕ್ಷತೆ ವಹಿಸುವರು. ಗೋಪುರಕ್ಕೇ ₹ 9 ಲಕ್ಷ ವೆಚ್ಚವಾಗಿದೆ ಎಂದರು.

ADVERTISEMENT

ಪ್ರಶಸ್ತಿ ಪ್ರದಾನ: ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ದೇವಯ್ಯ ಗುತ್ತೇದಾರ ಅವರಿಗೆ ಸುಲಫಲಶ್ರೀ ಪ್ರಶಸ್ತಿ ಹಾಗೂ ತಲಾ ₹ 10 ಸಾವಿರ ನಗದು ನೀಡಿ ಗೌರವಿಸಲಾಗುವುದು. ದೇಸಾಯಿ ಕಲ್ಲೂರ ಗ್ರಾಮದ ಎಸ್‌.ವೈ. ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪಗೌಡ ಗೌಡಗೇರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಗೌಸ್‌ಬಾಬಾ ಅವರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಲಾಗುವುದು ಎಂದರು.

ಎಚ್‌ಕೆಇ ಸೊಸೈಟಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಮಾತನಾಡಿ, ‘ಭಕ್ತರು ಮತ್ತು ಶ್ರೀಗಳ ಅಪೇಕ್ಷೆಯ ಮೇರೆಗೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಜನಪ್ರತಿನಿಧಿಗಳು, ಸಹಸ್ರಾರು ಭಕ್ತರು ಭಾಗವಹಿಸುವರು ಎಂದು ಹೇಳಿದರು.

ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.