ADVERTISEMENT

ಜನಸಾಮಾನ್ಯರ ಬೀದಿಗೆ ತಂದ ಸರ್ಕಾರ

ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 16:37 IST
Last Updated 5 ಸೆಪ್ಟೆಂಬರ್ 2021, 16:37 IST
ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳನ್ನು ನೇಮಿಸಿ ಗುರುತಿನ ಪತ್ರ ನೀಡಲಾಯಿತು
ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳನ್ನು ನೇಮಿಸಿ ಗುರುತಿನ ಪತ್ರ ನೀಡಲಾಯಿತು   

ತುಮಕೂರು: ಕೇಂದ್ರದ ಸಚಿವರು ಸಾವಿರಾರು ಜನರನ್ನು ಸೇರಿಸಿ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಪ್ರವಾಸ ಮಾಡಲು ಸರ್ಕಾರ ಅವಕಾಶ ನೀಡಿದೆ. ಆದರೆ, ರೈತರು, ಕಾರ್ಮಿಕರು, ಜನಸಾಮಾನ್ಯರ ಸಂತೆ, ಜಾತ್ರೆ, ಹಬ್ಬಗಳನ್ನು ರದ್ದುಪಡಿಸಿ ತಾರತಮ್ಯ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನೇಶ್ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಕಾರ್ಮಿಕ ವಿಭಾಗ ಆಯೋಜಿಸಿದ್ದ ಪದಾಧಿಕಾರಿಗಳ ನೇಮಕಾತಿ ಪತ್ರ ಮತ್ತು ಗುರುತಿನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಆದರೆ ಜನಾಶೀರ್ವಾದ ಹೆಸರಿನಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋ ಜಿಸಿ ಸಾವಿರಾರು ಜನರನ್ನು ಸೇರಿಸುತ್ತಿ ದ್ದಾರೆ ಎಂದು ಆರೋಪಿಸಿದರು.

ADVERTISEMENT

ರೈತ ಮತ್ತು ಕಾರ್ಮಿಕರು ದೇಶದ ಎರಡು ಕಣ್ಣುಗಳಿದ್ದಂತೆ. ಆದರೆ ಕೇಂದ್ರ ಸರ್ಕಾರ ರೈತ ಹಾಗೂ ಕಾರ್ಮಿಕರ ವಿರೋಧಿ ಹಲವು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಾವಿರಾರು ವರ್ಷಗಳಿಂದ ಕೃಷಿ ನಂಬಿ ಬದುಕುತಿದ್ದ ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಇದರ ವಿರುದ್ಧ ಕಾಂಗ್ರೆಸ್ ಕಾರ್ಮಿಕ ಘಟಕ, ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹೋರಾಟ ರೂಪಿಸುವ ಮೂಲಕ ಜನವಿರೋಧಿ ಬಿಜೆಪಿ ಪಕ್ಷದ ಭ್ರಷ್ಟಾಚಾರ, ಅವ್ಯವಹಾರ ಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಕಾರ್ಮಿಕ ಇಲಾಖೆಯ ಮಂತ್ರಿಗಳಾಗಿ ಬಾಬು ಜಗಜೀವನ್ ರಾಂ, ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕಾರ್ಮಿಕರ ಪರ ಹಲವು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ನೆರವಿಗೆ ನಿಂತಿದ್ದರು. ಆದರೆ ಇಂದಿನ ಬಿಜೆಪಿ ಸರ್ಕಾರ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಜನರಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಸಾವಿರಾರು ಜನ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಮಾರ್ಗಮಧ್ಯೆ ಮೃತರಾದರು. ಆದರೆ ಸರ್ಕಾರ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ, ದಾರಿತಪ್ಪಿಸುತ್ತಿದೆ ಎಂದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಡಾ.ಆನಂದ್ ಮಾತನಾಡಿ, ಸರ್ಕಾರದ ನೀತಿಗಳಿಂದ ಕಾರ್ಮಿಕರು ಯಾವುದೇ ಭದ್ರತೆಯಿಲ್ಲದೆ ಪರದಾಡುವಂತಾಗಿದೆ. ಹೊರಗುತ್ತಿಗೆ ಹೆಸರಿನಲ್ಲಿ ಇಎಸ್ಐ, ಪಿಎಫ್ ಸರಿಯಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಬಿ.ಎಸ್.ಸೈಯದ್ ದಾದಾಪೀರ್, ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಿಂಗರಾಜು, ಸುಜಾತ, ಪುರುಷೋತ್ತಮ್, ರಾಜ್ಯ ಸಂಘಟನಾ ಕಾರ್ಯದರ್ಶಿ ಉಗ್ರಪ್ಪ, ಕುಮಾರ್, ಮೂರ್ತಿ, ಖಲಿಂಪಾಷ, ಮುಸ್ತಾಪ್, ಆದೀಲ್ ಬಾಷಾ, ದೊರೆ ಭಗವಾನ್, ಭಾಗ್ಯಜೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.