ADVERTISEMENT

ನಟ ಮಂಡ್ಯ ರಮೇಶ್ ಅವರ ತಂದೆ ರಂಗಕರ್ಮಿ ಸುಬ್ರಹ್ಮಣ್ಯ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 11:03 IST
Last Updated 13 ನವೆಂಬರ್ 2020, 11:03 IST
ಎನ್.ಸುಬ್ರಹ್ಮಣ್ಯ
ಎನ್.ಸುಬ್ರಹ್ಮಣ್ಯ   

ಮೈಸೂರು: ನಟ ಮಂಡ್ಯ ರಮೇಶ್ ಅವರ ತಂದೆ ರಂಗಕರ್ಮಿ, ಕೊಬ್ಬರಿ ಕೆತ್ತನೆಯ ಕಲಾವಿದ ಎನ್.ಸುಬ್ರಹ್ಮಣ್ಯ (90) ಅವರು ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. ಇವರಿಗೆ ನಟ ಮಂಡ್ಯ ರಮೇಶ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಒಬ್ಬರು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೆರವೇರಿತು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಂತೂರಿನವರಾದ ಸುಬ್ರಹ್ಮಣ್ಯ ಮಂಡ್ಯ ಜಿಲ್ಲೆಯ ನಾಗಮಂಗಲದ ನಾಗಲಕ್ಷ್ಮೀ ಅವರನ್ನು ವಿವಾಹವಾದರು. ನಂತರ, ಉಪ ನೋಂದಣಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿ, ಮಂಡ್ಯ ಜಿಲ್ಲೆಯ ಮದ್ದೂರು, ಬೆಳ್ಳೂರು ಸೇರಿದಂತೆ ಅನೇಕ ಕಡೆ ಕಾರ್ಯನಿರ್ವಹಿಸದರು. ಉಪನೋಂದಣಿ ಅಧಿಕಾರಿಯಾಗಿ ಇವರು ನಿವೃತ್ತರಾದರು.‌

ನಿವೃತ್ತಿಯ ನಂತರ ಇವರು ಮಂಡ್ಯ ಮತ್ತು ಮೈಸೂರಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಕಷ್ಟು ಕೆಲಸ ಮಾಡಿದರು. ಕೊಬ್ಬರಿ ಕೆತ್ತನೆಯ ಕಲಾವಿದರಾಗಿದ್ದ ಇವರು ‘ನನ್ನ ಜೀವನದ ಕೈಗನ್ನಡಿ’ ಎಂಬುದು ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದರು.

ADVERTISEMENT

ಮೈಸೂರಿನಲ್ಲಿ ಪುತ್ರ ಮಂಡ್ಯ ರಮೇಶ್‌ ‘ನಟನ’ ರಂಗಮಂದಿರ ನಿರ್ಮಿಸಿದ ನಂತರ ರಂಗಮಂದಿರದ ಅಧ್ಯಕ್ಷರಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾಟಕದ ಕುರಿತ ಚರ್ಚೆ, ವಿಮರ್ಶೆಗಳಲ್ಲಿ ತಮ್ಮ ಇಳಿವಯಸ್ಸಿನಲ್ಲೂ ಪಾಲ್ಗೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.