ADVERTISEMENT

ವೇಗವಾಗಿ ಓಡುವ ಯುರೋಪ್‌ ಮೊಲ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 19:45 IST
Last Updated 15 ಜನವರಿ 2020, 19:45 IST
ಯುರೋಪಿಯನ್ ಮೊಲ
ಯುರೋಪಿಯನ್ ಮೊಲ   

ವೇಗವಾಗಿ ಓಡುವುದರಲ್ಲಿ ಪ್ರಸಿದ್ಧಿಯಾಗಿರುವ ಪ್ರಾಣಿಗಳು ಕೆಲವು ಮಾತ್ರ. ಬಹುತೇಕರ ಮುದ್ದಿನ ಪ್ರಾಣಿ ಎನಿಸಿಕೊಂಡಿರುವ ಕೆಲವು ಮೊಲ ಪ್ರಭೇದಗಳು ಕೂಡ ವೇಗವಾಗಿ ಓಡುತ್ತವೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಯುರೋಪ್‌ ಮೊಲದ (European Hare) ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಕಂದು, ಕಪ್ಪು, ಬೂದು ಹಾಗೂ ಬಿಳಿ ಬಣ್ಣದ ಕೂದಲು ಬೆಳೆದಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಬೆನ್ನಿನ ಮೇಲೆ ಬೆಳೆದಿರುವ ಕೂದಲು ಕಂದು, ಬೂದು ಮತ್ತು ಕಪ್ಪು ಮಿಶ್ರಿತ ಬಣ್ಣದಲ್ಲಿದ್ದರೆ, ಸೊಂಟ, ಎದೆ, ಭುಜ ಮತ್ತು ಕಾಲುಗಳ ಭಾಗದಲ್ಲಿ ಬೆಳೆಯುವ ಕೂದಲು ಕಂದು ಬಣ್ಣದಲ್ಲಿರುತ್ತವೆ. ಉದರ ಭಾಗ ಬಿಳಿ ಬಣ್ಣದಲ್ಲಿರುತ್ತದೆ.

ADVERTISEMENT

ಮೇಕೆ ಮತ್ತು ಕುರಿಗಳಿಗಿರುವಂತೆ ಮೂತಿ ನೀಳವಾಗಿರುತ್ತದೆ. ಹಣೆಯ ಮೇಲೆ ಕಂದು, ಕಪ್ಪು ಮಿಶ್ರಿತ ಕೂದಲು ದಟ್ಟವಾಗಿ ಬೆಳೆದಿರುತ್ತವೆ. ಬಾಯಿಯ ಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಮತ್ತು ಕಂದು ಬಣ್ಣದಲ್ಲಿರುತ್ತವೆ. ಎಲೆಯಾಕಾರಾದ ದೊಡ್ಡಗಾತ್ರದ ಕಿವಿಗಳು ನೀಳವಾಗಿರುತ್ತವೆ. ಸದಾ ಸೆಟೆದುಕೊಂಡಿರುತ್ತವೆ. ಬಾಲ ಪುಟ್ಟದಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣದ ದಟ್ಟವಾದ ಕೂದಲಿನಿಂದ ಕೂಡಿರುತ್ತದೆ. ಮುಂಗಾಲುಗಳಿಗಿಂತ ಹಿಂಗಾಲುಗಳು ದೊಡ್ಡದಾಗಿದ್ದು, ಕಾಂಗಾರುಗಳಿಗೆ ರಚನೆಯಾಗಿರುವಂತೆ ರಚನೆಯಾಗಿವೆ.

ವಾಸಸ್ಥಾನ

ಯುರೋಪ್‌ ಮತ್ತು ಏಷ್ಯಾ ಖಂಡದ ಪಶ್ಚಿಮ ಭಾಗದ ಕೆಲವು ಭೂಭಾಗಗಳು ಇದರ ಮೂಲ ನೆಲೆ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಆಸ್ಟ್ರೇಲಿಯಾ ಖಂಡಗಳಿಗೂ ಇದನ್ನು ಪರಿಚಯಿಸಲಾಗಿದೆ.

ದಟ್ಟವಾಗಿ ಮತ್ತು ನೀಳವಾಗಿ ಹುಲ್ಲು ಬೆಳೆದಿರುವ ಪ್ರದೇಶಗಳು, ಪೊದೆ ಗಿಡಗಳು ಬೆಳೆಯುವ ಪ್ರದೇಶಗಳು, ಕೃಷಿಭೂಮಿ ಮತ್ತು ತೋಟಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಚಳಿಗಾಲದಲ್ಲಿ ಮಾತ್ರ ಹಗಲಿನಲ್ಲೂ ಚುರುಕಾಗಿರುತ್ತದೆ. ಒಂಟಿಯಾಗಿ ಜೀವಿಸಲು ಇಷ್ಟಪಟ್ಟರೂ ಪುಟ್ಟ ಗುಂಪು ರಚಿಸಿಕೊಂಡಿರುತ್ತದೆ. ಆದರೆ ಯಾವ ಮೊಲವೂ ಗಡಿ ಗುರುತಿಸಿಕೊಂಡಿರುವುದರಿಲ್ಲ, ಒಂದರ ಗಡಿಯಲ್ಲೊಂದು ಕೂಡಿ ಬಾಳುತ್ತವೆ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತದೆ. ಕಿವಿಗಳ ಚಲನೆಯ ಮೂಲಕವೇ ಭಾವಗಳನ್ನು ವ್ಯಕ್ತಪಡಿಸುತ್ತದೆ. ಅಪಾಯ ಎದುರಾದಾಗ ಕಿವಿಗಳನ್ನು ಕೆಳಗಿಳಿಸಿ, ಹಿಂಗಾಲನ್ನು ಹಿಂದಕ್ಕಿಟ್ಟು ಇತರೆ ಮೊಲಗಳನ್ನು ಎಚ್ಚರಿಸುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣು ಮೊಲಗಳೊಂದಿಗೆ ಸಂವಹನ ನಡೆಸಲು ಕೆಲವು ಬಗೆಯ ಸದ್ದುಗಳನ್ನೂ ಮಾಡುತ್ತದೆ. ದೇಹಕ್ಕೆ ಬೇಕಾಗುವಷ್ಟು ಆಹಾರ ದೊರತರೆ ಸುರಕ್ಷಿತ ಪ್ರದೇಶಗಳಲ್ಲಿ ಒಂದೇ ಕಡೆ ಕುಳಿತು ಕಾಲಹರಣ ಮಾಡುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು ಇದರ ಪ್ರಮುಖ ಆಹಾರ. ಋತುವಿಗೆ ತಕ್ಕಂತೆ ಇದು ವಿವಿಧ ಬಗೆಯ ಆಹಾರ ಸೇವಿಸುತ್ತದೆ. ಹೂ, ಹಣ್ಣು, ಎಲೆ, ಗೆಡ್ಡೆಗಳುನ್ನು ಹೆಚ್ಚಾಗಿ ಸೇವಿಸುತ್ತದೆ. ಬೀಟ್‌ರೂಟ್‌ ಮತ್ತು ಕ್ಯಾರೆಟ್‌ ಇದರ ನೆಚ್ಚಿನ ಆಹಾರ.

ಸಂತಾನೋತ್ಪತ್ತಿ

ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಗಂಡು ಮೊಲ ತನ್ನ ವ್ಯಾಪ್ತಿಯಲ್ಲಿರುವ ಹಲವು ಹೆಣ್ಣು ಮೊಲಗಳೊಂದಿಗೆ ಜೊತೆಯಾಗುತ್ತದೆ. ಈ ಅವಧಿಯಲ್ಲಿ ಹೆಣ್ಣುಮೊಲ ನೆಲದಡಿಯಲ್ಲಿ ಬಿಲ ತೋಡುತ್ತದೆ. ಸುಮಾರು 40 ದಿನ ಗರ್ಭಧರಿಸಿ 1ರಿಂದ 8 ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳಿಗೆ ತುಪ್ಪಳ ಬೆಳೆದಿದ್ದು, ಜನಿಸಿದ ಕೆಲವೇ ಗಂಟೆಗಳಲ್ಲಿ ಬಿಲ ಬಿಟ್ಟು ಓಡಾಡಲು ಆರಂಭಿಸುತ್ತದೆ. ಆದರೂ ಮರಿಗಳನ್ನು ತಾಯಿಮೊಲ ಗೂಡಿನಲ್ಲಿ ಬಚ್ಚಿಟ್ಟು ಜೋಪಾನ ಮಾಡುತ್ತದೆ. ದಿನವೆಲ್ಲಾ ಆಹಾರ ಹುಡುಕಿ ಸೇವಿಸಿ, ಸಂಜೆಯಲ್ಲಿ ಹಾಲುಣಿಸುತ್ತದೆ. ಎರಡು ವಾರಗಳ ನಂತರ ಮರಿಗಳು ಘನ ಆಹಾರ ಸೇವಿಸಲು ಆರಂಭಿಸುತ್ತವೆ. ನಾಲ್ಕು ವಾರಗಳ ನಂತರ ಹಾಲು ಕುಡಿಯುವುದನ್ನು ನಿಲ್ಲಿಸುತ್ತವೆ. 6ರಿಂದ 8 ತಿಂಗಳಲ್ಲಿ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಇದರ ಕಣ್ಣುಗಳು ವಿಶಿಷ್ಟವಾಗಿ ರಚನೆಯಾಗಿದ್ದು, ಕತ್ತನ್ನು ತಿರುಗಿಸದೆಯೇ 360 ಡಿಗ್ರಿವರೆಗೆ ತಿರುಗಿಸಬಲ್ಲ ಸಾಮರ್ಥ್ಯ ಹೊಂದಿವೆ.

* ಕೆಲವು ದೇಶಗಳಲ್ಲಿ ಈ ಮೊಲವನ್ನು ಫಲವತ್ತತೆ ಹಾಗೂ ಸೃಷ್ಟಿಗೆ ಪ್ರತೀಕವಾಗಿ ಭಾವಿಸುತ್ತಾರೆ.

* ಇದು ಗುಂಪಿನಲ್ಲಿ, ಒಂಟಿಯಾಗಿ ಎರಡೂ ರೀತಿಯಲ್ಲಿ ಗಂಟೆಗಟ್ಟಲೆ ಸುತ್ತಾಡುತ್ತದೆ.

* ಆಹಾರ ಹೆಚ್ಚಾಗಿ ದೊರೆಯುವ ಪ್ರದೇಶಗಳಲ್ಲಿ ಎಲ್ಲವೂ ಕೂಡಿ ಸಮಾಧಾನಚಿತ್ತದಿಂದ ಆಹಾರ ಸೇವಿಸುತ್ತವೆ. ಕಡಿಮೆ ಪ್ರಮಾಣದಲ್ಲಿದ್ದರೆ ಬಲಿಷ್ಠ ಮೊಲಗಳು ಮಾತ್ರ ಹೆಚ್ಚು ಆಹಾರ ಸೇವಿಸುತ್ತದೆ.

* ಮೂರು ಯುರೋಪ್ ಮೊಲಗಳು, ದೈತ್ಯ ಕುರಿ ಒಂದು ದಿನದಲ್ಲಿ ಸೇವಿಸುವ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತವೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ಉದ್ದ-60ರಿಂದ 75 ಸೆಂ.ಮೀ

ದೇಹದ ತೂಕ-3 ರಿಂದ 5 ಕೆ.ಜಿ.

ಓಡುವ ವೇಗ- 70 ಕಿ.ಮೀ/ಗಂಟೆಗೆ

ಜೀವಿತಾವಧಿ-12 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.