ADVERTISEMENT

ಪರಿಸರ ಸ್ನೇಹಿ ಬಟ್ಟೆ ಡೈಪರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:31 IST
Last Updated 9 ಏಪ್ರಿಲ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನೆಯಲ್ಲಿ ಮೊಮ್ಮಗಳು ಬಸುರಿ ಎಂದು ತಿಳಿಯುತ್ತಿದ್ದಂತೆಯೇ ಅಜ್ಜಿ, ತನ್ನ ಮೊಮ್ಮಗಳ ಬಾಣಂತನದಲ್ಲಿ ಉಪಯೋಗಿಸಿದ ಹಳೆಯ ಕಾಟನ್‌ ಬಟ್ಟೆಗಳನ್ನು ಹೊರತೆಗೆದು ತೊಳೆದು ಶುಭ್ರ ಮಾಡಿಡಲು ಪ್ರಾರಂಭಿಸುತ್ತಾಳೆ. ಮಗುವನ್ನು ಸುತ್ತಲು (ಅಂಗಿ ರೂಪದಲ್ಲಿ), ಡೈಪರ್‌ ರೀತಿಯಲ್ಲೂ ಆ ಬಟ್ಟೆಗಳನ್ನು ಉಪಯೋಗಿಸಲಾಗುತ್ತದೆ. ಆದರೆ, ಅದನ್ನು ಪದೇ ಪದೇ ತೊಳೆಯಬೇಕು ಎನ್ನುವ ದೃಷ್ಟಿಯಿಂದ ಮೊಮ್ಮಗಳು ಬಳಸಿ ಬಿಸಾಡುವ ಡೈಪರ್‌ಗಳ ಮೊರೆ ಹೋಗಿದ್ದಾಳೆ. ಬಾಣಂತನಕ್ಕೆ ಸಂಬಂಧಿಸಿದಂತೆ ಅಜ್ಜಿ-ಮೊಮ್ಮಗಳ ನಡುವಣ ಅಂತರ ಡೈಪರ್‌ನಿಂದಲೇ ಆರಂಭವಾಗಿದೆ.

ಮಗುವಿಗೆ ಬಟ್ಟೆ ಕಟ್ಟುವುದರಿಂದ ಹೆಚ್ಚು ಅನುಕೂಲ, ಅನಾರೋಗ್ಯದ ಸಮಸ್ಯೆ ತಲೆದೋರದು ಎಂಬುದು ಅಜ್ಜಿಯ ವಾದ. ಡೈಪರ್ ಸುರಕ್ಷಿತ ಮತ್ತು ನಿರ್ವಹಣೆ ಸುಲಭ ಎಂಬುದು ಮೊಮ್ಮಗಳ ವಾದ. ಈ ವಾದಗಳ ಮಧ್ಯೆ ‘ಬಟ್ಟೆ ಡೈಪರ್‌’ (ಕ್ಲಾತ್‌ ಡೈಪರ್‌) ಎನ್ನುವ ಪರಿಕಲ್ಪನೆ ಮುನ್ನೆಲೆಗೆ ಬರುತ್ತಿದೆ. ಈ ಎರಡೂ ಪರಿಕಲ್ಪನೆಯನ್ನು ಮಿಶ್ರ ಮಾಡಿದಂತಹ ಹೈಬ್ರಿಡ್ ಪರಿಕಲ್ಪನೆ ಇದು.

ಅನುಕೂಲತೆ
ಪರಿಸರ ಸ್ನೇಹಿ: ಬಟ್ಟೆ ಡೈಪರ್‌ಗಳು ಮಣ್ಣಲ್ಲಿ ಸುಲಭವಾಗಿ ಕರಗುತ್ತವೆ. ಆದರೆ, ರಾಸಾಯನಿಕದಿಂದ ತಯಾರು ಮಾಡುವ ಡೈಪರ್‌ಗಳು ಮಣ್ಣಿನಲ್ಲಿ ಅಷ್ಟು ಸುಲಭವಾಗಿ ಕರಗುವುದಿಲ್ಲ.

ADVERTISEMENT

‘ಮಲ–ಮೂತ್ರಗಳನ್ನು ದಿನವೂ ಒಂದೇ ಸಮಯಕ್ಕೆ ಮಾಡಲು ಕಲಿಸಲು ಬಟ್ಟೆ ಡೈಪರ್ ಪರಿಣಾಮಕಾರಿ. ಮಗುವಿಗೆ ಒದ್ದೆಯ ಅನುಭವ ಆಗುವುದರಿಂದ ಮಕ್ಕಳು ಬಹಳ ಬೇಗ ಕಮೋಡ್‌ಗಳನ್ನು ಬಳಸಲು ಪ್ರಾರಂಭಿಸುತ್ತಾರೆ’ ಎಂದು ಅಭಿಪ್ರಾಯಪಡುತ್ತಾರೆ ಇಬ್ಬರು ಪುಟ್ಟ ಮಕ್ಕಳ ತಾಯಿ, ಖಾಸಗಿ ಕಂಪನಿ ಉದ್ಯೋಗಿ ರಾಜಶ್ರೀ ಕೃಷ್ಣನ್‌. ರಾಸಾಯನಿಕ ಪದಾರ್ಥದ ಬಳಕೆ ಇಲ್ಲ: ಬಟ್ಟೆ ಡೈಪರ್‌ಗಳು ಮಗುವಿನ ಚರ್ಮಕ್ಕೆ ಉತ್ತಮವಾದವು ಆಗಿದೆ. ರ‍್ಯಾಷಸ್‌ ಆಗುವುದಿಲ್ಲ.

ಅನಾನುಕೂಲತೆ
1. ಮಾಮೂಲಿ ಡೈಪರ್‌ಗಳಿಗಿಂತ ಬಟ್ಟೆ ಡೈಪರ್‌ಗಳ ಉಪಯೋಗ ಕಷ್ಟಕರ. ಒಂದು ಮಗುವಿಗೆ ದಿನಕ್ಕೆ 10ರಿಂದ 12 ಡೈಪರ್‌ಗಳು ಬೇಕಾಗಬಹುದು. ಈ ಎಲ್ಲವನ್ನು ತೊಳೆದು ಶುದ್ಧ ಮಾಡಿ, ಒಣಗಿಸಿ ಇಟ್ಟುಕೊಳ್ಳಬೇಕು. ಇದೇ ಒಂದೊಪ್ಪತ್ತಿನ ಕೆಲಸವಾಗುತ್ತದೆ.

2. ಬಟ್ಟೆ ಡೈಪರ್‌ಗಳನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಎಸೆಯಲು ಸಾಧ್ಯವಿಲ್ಲ. ನೀವು ಎಲ್ಲಾದರು ಹೊರಗೆ ಹೋಗಿದ್ದು ಮಗುವಿಗೆ ಬಟ್ಟೆ ಡೈಪರ್‌ ಹಾಕಿದ್ದರೆ, ಬದಲಿ ಮಾಡಬೇಕಾದರೆ ಅದನ್ನು ಕೊಳಕು ಇರುವಾಗಲೇ, ತೊಳೆಯದೇ ಹಾಗೆಯೇ ತೆಗೆದುಕೊಂಡು ಹೋಗಬೇಕಾಗುತ್ತದೆ.

ಏನಿದು ಬಟ್ಟೆ ಡೈಪರ್‌?
ಡೈಪರ್‌ ಬದಲಿಗೆ ಉಪಯೋಗಿಸುವ ಬಟ್ಟೆಯ ಆರೋಗ್ಯ ಮತ್ತು ಡೈಪರ್‌ನ ಅನುಕೂಲತೆಗಳನ್ನು ಹೊಂದಿರುವುದೇ ಬಟ್ಟೆ ಡೈಪರ್‌. ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ. ಹತ್ತಿ ಬಟ್ಟೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಈ ರೀತಿಯ ಡೈಪರ್‌ಗಳನ್ನು ತಯಾರು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಣ್ಣಗಳಲ್ಲಿ, ಹಲವು ಗಾತ್ರಗಳಲ್ಲಿ, ಹಲವು ವಿಧಗಳಲ್ಲಿ ಸಿಗುತ್ತವೆ; ತುಂಬಾ ಆಕರ್ಷಕವಾಗಿ ಅವನ್ನು ವಿನ್ಯಾಸ ಮಾಡಲಾಗಿದೆ ಕೂಡ.

ಯಾವುದೇ ವಿಧದ ಬಟ್ಟೆ ಡೈಪರ್‌ಗಳಿರಲಿ, ಅವುಗಳಲ್ಲಿ ಎರಡು ಪದರಗಳಿರುತ್ತವೆ– ಒಂದು ಪದರ ಹೀರಿಕೊಂಡರೆ ಇನ್ನೊಂದು ವಾಟರ್‌ಪ್ರೂಫ್‌ ಪದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.