ADVERTISEMENT

ಸವಿಯಿರಿ ಮೊಟ್ಟೆ ಖಾದ್ಯಗಳ ರುಚಿ

ಭೀಮಪ್ಪ
Published 1 ಫೆಬ್ರುವರಿ 2018, 4:47 IST
Last Updated 1 ಫೆಬ್ರುವರಿ 2018, 4:47 IST
ಸವಿಯಿರಿ ಮೊಟ್ಟೆ ಖಾದ್ಯಗಳ ರುಚಿ
ಸವಿಯಿರಿ ಮೊಟ್ಟೆ ಖಾದ್ಯಗಳ ರುಚಿ   

ಮೊಟ್ಟೆಯಿಂದ ಮನೆಯಲ್ಲಿ ಅಬ್ಬಬ್ಬಾ ಅಂದರೆ ಐದರಿಂದ ಆರು ಖಾದ್ಯಗಳನ್ನು ಮಾಡಬಹುದು. ಆದರೆ ಈ ಹೋಟೆಲ್‌ ಮೊಟ್ಟೆಪ್ರಿಯರಿಗಾಗಿಯೇ ಇದೆ. ಮೊಟ್ಟೆಯಿಂದ ಮಾಡಿದ 20ಕ್ಕೂ ಹೆಚ್ಚು ವಿಶಿಷ್ಟ ಖಾದ್ಯಗಳು ಇಲ್ಲಿ ಸಿಗುತ್ತವೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ತಿಂಡಿ, ರಾತ್ರಿ ಊಟ ಹೀಗೆ ಯಾವ ಸಮಯಕ್ಕಾದರೂ ಇಲ್ಲಿ ಮೊಟ್ಟೆಯಿಂದ ಮಾಡಿದ ರುಚಿ ರುಚಿಯ ಖಾದ್ಯಗಳನ್ನು ಸವಿಯಬಹುದು.

ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ‘ಎಗ್‌ ಫ್ಯಾಕ್ಟರಿ’ಯಲ್ಲಿ ವಿಶ್ವದ ಬೇರೆ ಭಾಗಗಳಲ್ಲಿ ಮೊಟ್ಟೆಯಿಂದ ಮಾಡುವ ತಿಂಡಿ, ಸ್ಟಾರ್ಟರ್‌ಗಳು ಹಾಗೂ ಖಾದ್ಯಗಳ ರುಚಿ ನೋಡಬಹುದು. ನಾವು ಎಗ್‌ ಫ್ಯಾಕ್ಟರಿ ಹೋಟೆಲ್‌ ಒಳಗೆ ಕಾಲಿಟ್ಟಾಗ ಮಟ ಮಟ ಮಧ್ಯಾಹ್ನ. ಅಲ್ಲಿನ ಖಾದ್ಯಗಳ ಘಮ ಮೂಗಿಗೆ ಬಡಿಯುತ್ತಿದ್ದಂತೆ ಚುರುಗುಟ್ಟುತ್ತಿದ್ದ ಹೊಟ್ಟೆ ಜೋರಾಗಿ ತಾಳ ಹಾಕಲು ಆರಂಭಿಸಿತು.

ಅಷ್ಟರಲ್ಲಿ ಹೋಟೆಲ್‌ ಮಾಲೀಕ ಯೋಗೇಶ್‌ ಮುಖಾಶಿ ಹಾಜರಾದರು. ‘ಮೊಟ್ಟೆ ಪಾಯಸ (ಹಂಡೇ ಕಾ ಕೀರ್‌)’ ನಮ್ಮ ಹೋಟೆಲ್‌ ವಿಶೇಷ. ರುಚಿ ನೋಡಿ ಎಂದರು. ಶ್ಯಾವಿಗೆ ಪಾಯಸ, ಸಬ್ಬಕ್ಕಿ ಪಾಯಸ ತಿಂದಿದ್ದೇವೆ. ಇದ್ಯಾವುದಪ್ಪಾ ಮೊಟ್ಟೆ ಪಾಯಸ ಅಂದುಕೊಳ್ಳುವಷ್ಟರಲ್ಲಿ ಪಾಯಸ ಎದುರಿತ್ತು. ಒಂದು ಚಮಚ ರುಚಿ ನೋಡಿದೆವು. ತುಪ್ಪದಲ್ಲಿ ಕರಿದ ಶ್ಯಾವಿಗೆ, ಹಾಲು ಮಿಶ್ರಣಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹಾಕಿ ಮಾಡಿದ ಪಾಯಸ ತಿನ್ನುತ್ತಿದ್ದಂತೆ ವಾಹ್‌ ಎನ್ನಬೇಕೆನಿಸಿತು.

ADVERTISEMENT

‘ಇದು ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಒದಗಿಸುತ್ತದೆ. ಮೊದಲು ಶ್ಯಾವಿಗೆಯನ್ನು ತುಪ್ಪದಲ್ಲಿ ಕರಿಯಬೇಕು. ನಂತರ ಹಾಲನ್ನು ಬಿಸಿ ಮಾಡಬೇಕು. ನಂತರ ಹಾಲನ್ನು ಕೆಳಗಿಳಿಸಿ. ಬಿಸಿ ಕಡಿಮೆಯಾದ ಮೇಲೆ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹಾಲಿನಲ್ಲಿ ಹಾಕಿ ಸ್ವಲ್ಪ ಬೇಯಿಸಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ, ಏಲಕ್ಕಿ ಹಾಕಬೇಕು. ಕೊನೆಗೆ ಶ್ಯಾವಿಗೆ ಹಾಕಿದರೆ ಮೊಟ್ಟೆ ಪಾಯಸ ಸಿದ್ಧ. ಇದನ್ನು ಬಿಸಿಯಾಗಿಯೇ ತಿನ್ನಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟು ಮರುದಿನ ತಿಂದರೆ ಇನ್ನೂ ರುಚಿಕರವಾಗಿರುತ್ತೆ’ ಎಂದು ವಿವರಣೆ ನೀಡಿದರು ಯೋಗೇಶ್‌ ಮುಖಾಶಿ.

ಬಳಿಕ ರುಚಿ ನೋಡಿದ್ದು ಕುತ್ತು ಪರೋಟ. ಇದು ತಮಿಳುನಾಡಿನ ವಿಶಿಷ್ಟ ಖಾದ್ಯ. ಕ್ಯಾರೆಟ್‌, ಹೂಕೋಸು, ಚಿಕನ್‌ ಅನ್ನು ಪುಟ್ಟದಾಗಿ ಕತ್ತರಿಸಿ ಕಡಾಯಿಯಲ್ಲಿನ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು. ಇದರಲ್ಲಿ ಪರೋಟವನ್ನು ಚಿಕ್ಕಚಿಕ್ಕದಾಗಿ ಕಟ್‌ಮಾಡಿ ಹಾಕಿ. ನಂತರ ಕುತ್ತು ಪರೋಟದ ಗ್ರೇವಿಯನ್ನು ಮಿಶ್ರ ಮಾಡಬೇಕು. ಕೊನೆಗೆ ಮೊಟ್ಟೆ ಒಡೆದು ಹಾಕಿದರೆ ರುಚಿ ಅದ್ಭುತವಾಗಿರುತ್ತದೆ ಎಂದು ವಿವರಣೆ ನೀಡಿದರು. ರುಚಿ ನೋಡಿದ ನಮಗೂ ಮತ್ತೊಮ್ಮೆ ರುಚಿ ಸವಿಯಬೇಕು ಎಂದು ನಾಲಿಗೆ ತವಕವಾಯಿತು.

ಇದಲ್ಲದೇ ಇಲ್ಲಿ ಗುಜರಾತ್‌ನ ವಿಶಿಷ್ಟ ಖಾದ್ಯ ಅಂಡೆ ಗೊಟಲ್‌, ಬಂಗಾಳದ ಮಲಾಯ್‌ ಕರಿ, ಮಸಾಲಾ ಆಮ್ಲೆಟ್‌, ಮಲೇಷ್ಯಾದ ಟೆಲ್ಲೂರ್ ಗೋಯಂಗ್ (ಬೆಳ್ಳುಳ್ಳಿ ಬ್ರೆಡ್‌ನಲ್ಲಿ ಹುರಿದ ಮೊಟ್ಟೆ) ಮತ್ತು ಇಸ್ರೇಲಿ ಷಕ್ಷುಕ (ಟೊಮೆಟೊ, ಈರುಳ್ಳಿ ಮತ್ತು  ಕಾಳು ಮೆಣಸಿನ ಮಿಶ್ರಣದಲ್ಲಿ ಬೇಯಿಸಿದ ಮೊಟ್ಟೆ) ಮೆಕ್ಸಿಕನ್ ಆಮದು, ಹುಯೊವೊಸ್ ರಂಚೆರೋಸ್ (ಗರಿಗರಿಯಾದ ಟೋರ್ಟಿಲ್ಲಾಗಳ ಮೇಲೆ ಹುರಿದ ಮೊಟ್ಟೆಗಳು) ರುಚಿ ನೋಡಬಹುದು. ಆಹಾರ ಪ್ರಿಯರಿಗೆ ಅಮೆರಿಕನ್, ಸಿಂಗಾಪುರ್ ಮತ್ತು ಇಂಡಿಯನ್-ಬ್ರಿಟಿಷ್ ಉಪಾಹಾರಗಳು ಇಲ್ಲಿವೆ.

ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಅಲ್ಲೇ ತಯಾರಿಸಿ ಕೊಡುವ ವಿವಿಧ ಬಗೆಯ ಐಸ್‌ಕ್ರೀಮ್‌ಗಳು ಹಾಗೂ ಸ್ವಾದಿಷ್ಟ ಪೇಯಗಳು. ಸಿಹಿ ಇಷ್ಟಪಡುವವರು ತೆಂಗಿನಕಾಯಿ ಕಸ್ಟರ್ಡ್ ಕೇಕ್, ಟೋಸ್ಟ್, ತೆಂಗಿನಕಾಯಿಯ ಸಾಂಗ್ಕಾಯಾ, ಥಾಯ್ ಶೈಲಿಯ ಕಸ್ಟರ್ಡ್ ಅನ್ನು ಸವಿಯಬಹುದು. ಕೋರಮಂಗಲ, ವೈಟ್‌ಫೀಲ್ಡ್‌,  ಜೆ.ಪಿ.ನಗರ, ಆರ್‌ಎಮ್‌ವಿ 2ನೇ ಘಟಕದಲ್ಲಿ ‘ಎಗ್‌ ಫ್ಯಾಕ್ಟರಿ’ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.