ADVERTISEMENT

ಆಳ- ಅಗಲ: ಉಗ್ರವಾದವೇ ಈಗಲೂ ಸವಾಲು

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 20:30 IST
Last Updated 4 ಆಗಸ್ಟ್ 2021, 20:30 IST
ವಿಶೇಷ ಸ್ಥಾನಮಾನ ರದ್ದತಿಯ ಎರಡನೇ ವರ್ಷಾಚರಣೆ ಮುನ್ನಾದಿನವಾದ ಬುಧವಾರ, ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಪಡೆಗಳ ಕಣ್ಗಾವಲು ಹೆಚ್ಚಿಸಲಾಗಿತ್ತು –ಪಿಟಿಐ ಚಿತ್ರ
ವಿಶೇಷ ಸ್ಥಾನಮಾನ ರದ್ದತಿಯ ಎರಡನೇ ವರ್ಷಾಚರಣೆ ಮುನ್ನಾದಿನವಾದ ಬುಧವಾರ, ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಪಡೆಗಳ ಕಣ್ಗಾವಲು ಹೆಚ್ಚಿಸಲಾಗಿತ್ತು –ಪಿಟಿಐ ಚಿತ್ರ   

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ವರ್ಷ (ಆ.5) ಪೂರ್ಣಗೊಂಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಮತ್ತು ಭಯೋತ್ಪಾದನಾ ಸಂಘಟನೆಗಳಿಗೆ ಸ್ಥಳೀಯರ ಸೇರ್ಪಡೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದರೂ, ಕಣಿವೆ ನಾಡಿನಲ್ಲಿ ಉಗ್ರವಾದ ಇನ್ನೂ ಒಂದು ಸವಾಲಾಗಿ ಉಳಿದಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, 163 ಸ್ಥಳೀಯ ಯುವಕರು 2020ರಲ್ಲಿ ಉಗ್ರಗಾಮಿ ಗುಂಪುಗಳಿಗೆ ಸೇರ್ಪಡೆಯಾಗಿದ್ದಾರೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಇಂತಹ 80ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜನವರಿ 1ರಿಂದ ಜುಲೈ 31ರ ನಡುವಿನ ಅವಧಿಯಲ್ಲಿ ಭದ್ರತಾ ಪಡೆಗಳು 90 ಉಗ್ರರನ್ನು ಹತ್ಯೆಗೈದಿವೆ. ಈ ಪೈಕಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತಯಬಾ (ಎಲ್ಇಟಿ) ಮತ್ತು ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದವರೇ ಹೆಚ್ಚು.

ಉನ್ನತ ಕಮಾಂಡರ್‌ಗಳನ್ನು ಕಳೆದುಕೊಂಡಿದ್ದರೂ, ಈ ಎರಡು ಭಯೋತ್ಪಾದಕ ಸಂಘಟನೆಗಳು ಕಣಿವೆಯಾದ್ಯಂತ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸಲು ಶಕ್ತವಾಗಿವೆ. ಸ್ಥಳೀಯ ಹಿಜ್ಬುಲ್ ಮುಜಾಹಿದೀನ್‌ ಸಂಘಟನೆ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಎರಡು ಪ್ರಮುಖ ಭಯೋತ್ಪಾದಕ ಸಂಘಟನೆಗಳಾಗಿ ಗುರುತಿಸಿಕೊಂಡಿವೆ. ಪಾಕಿಸ್ತಾನವು ಕಾಶ್ಮೀರದ ಭಯೋತ್ಪಾದನೆಯಲ್ಲಿ ಭಾಗಿಯಾಗಿಲ್ಲ ಎಂದು ಬಿಂಬಿಸಲು ಈ ಸಂಘಟನೆಗಳು ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿವೆ. ಹೀಗೆ ಮಾಡುವುದರಿಂದ ಪಾಕಿಸ್ತಾನವು ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್) ಬೂದು ಪಟ್ಟಿಯಿಂದ ಹೊರಬರಲು ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 10 ಸ್ಥಳೀಯರು ಮತ್ತು 34 ವಿದೇಶಿ ಭಯೋತ್ಪಾದಕರು ಸೇರಿದಂತೆ ಜೆಇಎಂ ಸಂಘಟನೆಯ 44 ಸದಸ್ಯರಿದ್ದಾರೆ. ಇಬ್ಬರು ವಿದೇಶಿಯರು ಮತ್ತು ಐವರು ಸ್ಥಳೀಯರು ಸೇರಿದಂತೆ ಏಳು ಜೆಇಎಂ ಭಯೋತ್ಪಾದಕರನ್ನು ಕೊಂದಿದ್ದೇವೆ. ಸಂಘಟನೆಯ ಮೊದಲ ಮತ್ತು ಎರಡನೇ ಶ್ರೇಣಿಯ ಉಗ್ರರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದೇವೆ’ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಈ ಮೊದಲು, ಜೆಇಎಂ ದಕ್ಷಿಣ ಕಾಶ್ಮೀರದ ಪುಲ್ವಾಮಾ-ಅವಂತಿಪೋರಾ-ಟ್ರಾಲ್ ವಲಯದ ಮೇಲೆ ಹೆಚ್ಚು ಗಮನಹರಿಸಿತ್ತು. ಈಗ ಜೆಇಎಂ ಮತ್ತು ಎಲ್‌ಇಟಿ ಎರಡೂ ಶ್ರೀನಗರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ಸ್ಥಳೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಪೊಲೀಸ್ ದಾಖಲೆಗಳ ಪ್ರಕಾರ, ಈ ವರ್ಷ ನಾಲ್ಕರಿಂದ ಐದು ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳುವಲ್ಲಿ ಜೆಇಎಂ ಯಶಸ್ವಿಯಾಗಿದೆ.

2017-2019ರ ಅವಧಿಗೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ನಾಗರಿಕರ ಹತ್ಯೆಗಳು ಕಡಿಮೆಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ತೋರಿಸುತ್ತವೆ. ಈ ಅವಧಿಯಲ್ಲಿ 135 ನಾಗರಿಕರು ಭಯೋತ್ಪಾದನೆ ಸಂಬಂಧಿತ ವಿಧ್ವಂಸಕ ಕೃತ್ಯಗಳಲ್ಲಿ ಜೀವ ಕಳೆದುಕೊಂಡಿದ್ದರು. ಆದರೆ, 2019ರ ಆಗಸ್ಟ್‌ನಿಂದ 2021ರ ಜುಲೈವರೆಗೆ 72 ಹತ್ಯೆಗಳು ವರದಿಯಾಗಿವೆ.ಹಿಮ ಕರಗಿದ ಹೊರತಾಗಿಯೂ, ಈ ವರ್ಷ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಒಳನುಸುಳುವಿಕೆ ಪ್ರಯತ್ನ ವರದಿಯಾಗಿಲ್ಲ. ಕಳೆದ ವರ್ಷವೂ ಒಳನುಸುಳುವಿಕೆ ಪ್ರಯತ್ನಗಳಲ್ಲಿ ಗಮನಾರ್ಹ ಇಳಿಕೆಯಾಗಿತ್ತು.

ಪರಿಣಾಮ ಬೀರುತ್ತಾ ತಾಲಿಬಾನ್?: ‘ಕಾಬೂಲ್ ಅನ್ನು ತಾಲಿಬಾನ್ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಭದ್ರತಾ ಸಂಸ್ಥೆಗಳುಆತಂಕಗೊಂಡಿವೆ. ಇದು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಫ್ಗಾನಿಸ್ತಾನದಲ್ಲಿ ಜೆಇಎಂ ಸಂಘಟನೆಯು ತಾಲಿಬಾನ್ ಜೊತೆ ಹೋರಾಡು
ತ್ತಿದೆ. ಅವರಲ್ಲಿ ಕೆಲವು ಉಗ್ರರು ಮುಂದಿನ ತಿಂಗಳುಗಳಲ್ಲಿ ಕಾಶ್ಮೀರಕ್ಕೆ ನುಸುಳುವ ಸಾಧ್ಯತೆಯಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ವಾರ್ಷಿಕೋತ್ಸವ: ಕಳೆದ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಕೆಯಾಗಿದೆ ಎಂದು ಅಮೆರಿಕದಲ್ಲಿರುವ ಭಾರತೀಯ-ಅಮೆರಿಕನ್ ಸಮುದಾಯ ಹೇಳಿದೆ. ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಎರಡನೇ ವಾರ್ಷಿಕೋತ್ಸವವನ್ನು ಸಮುದಾಯವು ಆಚರಿಸಿತು.

ಹೊಸ ಕಾಶ್ಮೀರ ಎಂಬುದು ಹಾಸ್ಯಾಸ್ಪದ: ಗುಪ್ಕಾರ್

ಬಿಜೆಪಿಯ ಹೊಸ ಕಾಶ್ಮೀರ ಘೋಷಣೆಯು ಈಗ ಜನರಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಒಕ್ಕೂಟ ‘ಗುಪ್ಕಾರ್’ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರವು2019ರಆಗಸ್ಟ್ 5ರಂದು ತೆಗೆದುಕೊಂಡ ಜಮ್ಮು ಮತ್ತು ಕಾಶ್ಮೀರವನ್ನು ನಾಶ ಮಾಡುವ ನಿರ್ಧಾರದಿಂದಏನು ಸಾಧಿಸಲಾಯಿತು ಎಂದುಜನರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ ಎಂದಿದೆ.

ಜಮ್ಮು ಮತ್ತು ಕಾಶ್ಮೀರದ ಜನರನ್ನು ಒಗ್ಗಟ್ಟಾಗಿ ನಿಲ್ಲುವಂತೆ ಮನವಿ ಮಾಡಿರುವ ಸಂಘಟನೆ, ‘ನಾವು ಶರಣಾಗುವುದಿಲ್ಲ. ಆದರೆ ನಮ್ಮ ಹಕ್ಕುಗಳ ರಕ್ಷಣೆಗಾಗಿ ಶಾಂತಿಯುತ ಮತ್ತು ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ’ ಎಂದಿದೆ.

‘370ನೇ ವಿಧಿ ರದ್ದತಿಯುಭಾರತದ ಸಂವಿಧಾನದ ಮೇಲಿನ ದಾಳಿ. ಈ ಕ್ರಮವು ಭಾರತದ ಒಕ್ಕೂಟದೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಿದೆ. ಕಾಶ್ಮೀರದ ಸಂವಿಧಾನವನ್ನು ಕೆಡಹುವ ಮೂಲಕ, ಕೇಂದ್ರ ಸರ್ಕಾರವು ಸಂವಿಧಾನದ ಎಲ್ಲ ಮಿತಿಗಳನ್ನು ಮೀರಿದೆ’ ಎಂದು ಗುಪ್ಕಾರ್ ವಕ್ತಾರ ಮತ್ತು ಸಿಪಿಎಂ ಹಿರಿಯ ನಾಯಕ ಎಂ.ವೈ.ತಾರಿಗಾಮಿ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ನಾಯಕರ ಜತೆ ಪ್ರಧಾನಿಇತ್ತೀಚೆಗೆ ಮಾತುಕತೆ ನಡೆಸಿದ್ದನ್ನು ಹೊರತುಪಡಿಸಿದರೆ, ಕಣಿವೆ ಜನರ ಚೂರುಚೂರಾದ ಆತ್ಮವಿಶ್ವಾಸವನ್ನು ಪುನರ್‌ ನಿರ್ಮಿಸಲು ಅಗತ್ಯವಿರುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಾರಿಗಾಮಿ ದೂರಿದರು.

‘ಪತ್ರ ನಕಲಿ’

ಹುರಿಯತ್ ನಾಯಕ ಸೈಯದ್ ಅಲಿ ಗಿಲಾನಿ ಅವರ ಹೆಸರಿನಲ್ಲಿ ಹೊರಡಿಸಲಾಗಿರುವ ಪತ್ರಿಕಾ ಪ್ರಕಟಣೆಯು ನಕಲಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಹೇಳಿದ್ದಾರೆ. ಇದೇ 5 ಮತ್ತು 15ರಂದು ಕಾಶ್ಮೀರದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂಬ ಉಲ್ಲೇಖವು ಈ ಪ್ರಕಟಣೆಯಲ್ಲಿ ಇತ್ತು.ಗಿಲಾನಿ ಅವರ ಕುಟುಂಬದ ಮೂಲಗಳನ್ನು ಉಲ್ಲೇಖಿಸಿಪೊಲೀಸ್ ವಕ್ತಾರರು ಈ ಸ್ಪಷ್ಟನೆ ನೀಡಿದ್ದಾರೆ.

ವಿಶೇಷಾಧಿಕಾರ ರದ್ದತಿ ಬಳಿಕ...

2019, ಆ.3: ಭಾರತ–ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರ ಕೃತ್ಯ ನಡೆಯುವ ಸಾಧ್ಯತೆಯಿದ್ದು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಕಾಶ್ಮೀರವನ್ನು ತೊರೆಯಬೇಕು ಎಂದು ಆದೇಶ; ಕಣಿವೆಗೆ ಗಲಭೆ ನಿಯಂತ್ರಿಸುವ ಬ್ಯಾರಿಕೇಡ್, ವಾಹನಗಳು, 45 ಸಾವಿರ ಸೈನಿಕರ ನಿಯೋಜನೆ

ಆ. 4: ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಾದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಸಜ್ಜದ್ ಲೋನ್ ಮೊದಲಾದವರಿಗೆ ಗೃಹಬಂಧನ; ನಿಷೇಧಾಜ್ಞೆ ಜಾರಿ; ಇಂಟರ್ನೆಟ್ ಹಾಗೂ ಮೊಬೈಲ್ ಸಂಪರ್ಕ ಕಡಿತ

ಆ.5: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ನಿಬಂಧನೆಗಳನ್ನು ತೆಗೆದುಹಾಕುವ ನಿರ್ಣಯ ಸಂಸತ್ತಿನಲ್ಲಿ ಅಂಗೀಕಾರ. ಜಮ್ಮು ಕಾಶ್ಮೀರ ವಿಭಜನೆ. ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ; ಕಾಶ್ಮೀರ ಸೇರಿ ದೇಶದಾದ್ಯಂತ ಪ್ರತಿಭಟನೆ

ಅ.14: ಕಾಶ್ಮೀರದ ಕೆಲವೆಡೆ ಮೊಬೈಲ್ ಫೋನ್ ಸೇವೆ ಹಂತಹಂತವಾಗಿ ಪುನರಾರಂಭ; ವ್ಯಾಪಾರ ಚಟುವಟಿಕೆ ಶುರು

ಅ. 23: ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೇ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿ; ತಮ್ಮ ಪಕ್ಷಗಳ ನಾಯಕರು ಗೃಹಬಂಧನದಲ್ಲಿ ಇರುವಾಗ ಚುನಾವಣೆ ನಡೆಸುವುದು ಕಾನೂನಬಾಹಿರ ಎಂದು ಪ್ರತಿಪಾದಿಸಿದ ರಾಜಕೀಯ ಪಕ್ಷಗಳು

ಅ. 28: ವಿದೇಶಿ ಮಾಧ್ಯಮ ಪ್ರತಿನಿಧಿಗಳ ನಿಯೋಗದಿಂದ ಕಾಶ್ಮೀರ ಭೇಟಿ; ದೇಶದ ರಾಜಕೀಯ ಪಕ್ಷಗಳು ಮತ್ತು ಪತ್ರಕರ್ತರ ಭೇಟಿಗೆ ಅವಕಾಶ ನೀಡದ ಸರ್ಕಾರವು ವಿದೇಶಿ ನಿಯೋಗಕ್ಕೆ ಅವಕಾಶ ನೀಡಿದ್ದು ಏಕೆ ಎಂಬ ಪ್ರಶ್ನೆ

2020, ಜ.10: ಕಾಶ್ಮೀರದಲ್ಲಿ ಅನಿರ್ದಿಷ್ಟ ಅವಧಿಗೆ ಅಂತರ್ಜಾಲ ಸ್ಥಗಿತ ಕಾನೂನುಬಾಹಿರ ಎಂದ ಸುಪ್ರೀಂ ಕೋರ್ಟ್; ಬಂಧಿತ ನಾಲ್ವರು ರಾಜಕೀಯ ನಾಯಕರ ಬಿಡುಗಡೆಗೆ ಆದೇಶ

ಮಾ.13: ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಬಿಡುಗಡೆ; ವಾರದ ಬಳಿಕ ಅವರ ಮಗ ಒಮರ್ ಅಬ್ದುಲ್ಲಾಗೆ ಗೃಹಬಂಧನದಿಂದ ಮುಕ್ತಿ; ಪ್ರಮುಖ ರಾಜಕೀಯ ಪಕ್ಷಗಳಿಂದ ‘ಗುಪ್ಕಾರ್’ ಎಂಬ ಮೈತ್ರಿಕೂಟ ರಚನೆ; ಕಾಶ್ಮೀರದ ವಿಶೇಷಾಧಿಕಾರ ಮರುಸ್ಥಾಪನೆಗೆ ಹೋರಾಡುವುದು ಪ್ರಮುಖ ಉದ್ದೇಶ

ಏ. 1: ಕನಿಷ್ಠ 15 ವರ್ಷದಿಂದ ವಾಸಿಸುತ್ತಿರುವ ವ್ಯಕ್ತಿ ಕಾಶ್ಮೀರದ ಕಾಯಂ ನಿವಾಸಿಯಾಗಲು ಅರ್ಹ ಎಂಬುದು ಸೇರಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ನಿಯಮ ಜಾರಿ

2021 ಜೂನ್‌ 23: ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಪ್ರಕ್ರಿಯೆ ಚುರುಕುಗೊಳ್ಳುವ ಮುನ್ಸೂಚನೆ; ಕಾಶ್ಮೀರದ ರಾಜಕೀಯ ಪಕ್ಷಗಳ ಸಭೆ ಕರೆದ ಪ್ರಧಾನಿ; ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಗುಪ್ಕಾರ್ ಕೂಟದ ಪಕ್ಷಗಳ ನಿರ್ಧಾರ. ಸರ್ಕಾರದ ಎದುರು ತಮ್ಮ ಬೇಡಿಕೆ ಮಂಡಿಸಲು ಸಿದ್ಧತೆ

ಜೂನ್‌ 24: ವಿಶೇಷಾಧಿಕಾರ ರದ್ದತಿ ಬಳಿಕ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಪ್ರಮುಖ 14 ರಾಜಕೀಯ ಪಕ್ಷಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ. ವಿಶೇಷಾಧಿಕಾರ ಮರುಸ್ಥಾಪನೆಗೆ ಬಹುತೇಕ ಪಕ್ಷಗಳ ಒತ್ತಾಯ; ವಿಶೇಷ ಸ್ಥಾನಮಾನ ನೀಡಿದ ಬಳಿಕವೇ ವಿಧಾನಸಭೆ ಚುನಾವಣೆ ನಡೆಸುವಂತೆ ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯ

ಜುಲೈ 6: ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗದ ಎದುರು ಹಾಜರಾಗದಿರಲು ಪಿಡಿಪಿ ನಿರ್ಧಾರ; ಪಿಡಿಪಿ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳಿಂದ ಆಯೋಗದ ಭೇಟಿಗೆ ತೀರ್ಮಾನ; 2011ರ ಜನಗಣತಿ ಪ್ರಕಾರವೇ ಕ್ಷೇತ್ರ ಮರುವಿಂಗಡಣೆ ಎಂದ ಆಯೋಗ

***

ನಾನು ತೀವ್ರ ನಿರಾಶೆಗೊಂಡಿದ್ದೇನೆ. ಆದರೆ ನಿಮಗೆ ಕಾಮನಬಿಲ್ಲು ಬೇಕಾದರೆ, ನೀವು ಮಳೆಯನ್ನು ಸಹಿಸಿಕೊಳ್ಳಬೇಕು. ಜನರಿಗಾಗಿ ನನ್ನ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ

-ಒಮರ್ ಅಬ್ದುಲ್ಲಾ, ಎನ್‌ಸಿ ನಾಯಕ

***

ಜಮ್ಮು ಕಾಶ್ಮೀರವು ದೆಹಲಿ ಮತ್ತು ಭಾರತದ ಹೃದಯದಿಂದ (ದಿಲ್) ಹಿಂದೆಂದಿಗಿಂತಲೂ ದೂರದಲ್ಲಿದೆ. ಈ ದೂರ ಮತ್ತಷ್ಟು ಹೆಚ್ಚುತ್ತಿದೆ

-ಎಂ.ವೈ.ತಾರಿಗಾಮಿ, ಗುಪ್ಕಾರ್ ವಕ್ತಾರ, ಸಿಪಿಎಂ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.