ADVERTISEMENT

ಪ್ರಾರ್ಥನೆಯೊಂದೇ ಸಾಲದು, ನಾವು ಮಾನವತೆಗೆ ಸೇವೆ ಸಲ್ಲಿಸಬೇಕು

ಕಮಲೇಶ್ ಡಿ ಪಟೇಲ್
Published 30 ಆಗಸ್ಟ್ 2021, 12:54 IST
Last Updated 30 ಆಗಸ್ಟ್ 2021, 12:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಾಂಕ್ರಾಮಿಕ ವ್ಯಾಧಿಯ ದಾಳಿಯಿಂದ ಭಾರತ ನರಳಿದೆ. ಈ ಸಂಕಷ್ಟಕರ ಪರಿಸ್ಥಿತಿಯಲ್ಲಿ ಭಾವನಾತ್ಮಕ ದೃಢತೆಗಾಗಿ ನಾವು ಅವಲೋಕನ, ಧ್ಯಾನ ಮತ್ತು ಪ್ರಾರ್ಥನೆಗಳೆಡೆಗೆ ಹೊರಳಿದ್ದೇವೆ. ಅನೇಕರು ಧ್ಯಾನಾಭ್ಯಾಸವನ್ನು ಆರಂಭಿಸಿದ್ದಾರೆ ಹಾಗು ಪ್ರಾರ್ಥನೆಯನ್ನು ನಿಯತವಾಗಿ ಮಾಡುತ್ತಿದ್ದಾರೆ.

ಮಾನವನ ಮನಸ್ಸು ನದಿಯಂತೆ. ನದೀತಳದ ಯಾವುದೇ ಘರ್ಷಣೆಯೂ ಮೇಲ್ಮೈಯಲ್ಲಿ ಅಲೆಗಳನ್ನೆಬ್ಬಿಸುತ್ತದೆ. ಅಂತೆಯೆ, ನಮ್ಮ ಮನಸ್ಸಿನೊಳಗೆ ಘರ್ಷಣೆಯಿದ್ದರೆ, ಅದು ನಮ್ಮ ಜೀವನದ ಇತರ ಅಂಶಗಳ ಮೇಲೆ ತರಂಗ ಪರಿಣಾಮವನ್ನುಂಟುಮಾಡುತ್ತದೆ. ಅದು ನಮ್ಮ ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳ ಮೇಲೆ ಪ್ರಭಾವ ಬೀರಬಹುದು, ವೃತ್ತಿಜೀವನದಲ್ಲಿ ಭಿನ್ನಾಭಿಪ್ರಾಯಗಳಾಗಿ ಪ್ರಕಟಗೊಳ್ಳಬಹುದು ಅಥವಾ ವೈಯಕ್ತಿಕ ಬೇಗುದಿಯಾಗಿ ಹೊಮ್ಮಬಹುದು.

ಈ ಘರ್ಷಣೆಗಳನ್ನು ನಿವಾರಿಸುವ ಮೂಲಕ ಕದಡಿದ ಕೆಸರು ನೀರು ನೆಲೆಗೊಂಡು ತಿಳಿಯಾಗುವಲ್ಲಿ ಧ್ಯಾನ ಮತ್ತು ಪ್ರಾರ್ಥನೆಗಳು ನಮಗೆ ನೆರವಾಗುತ್ತವೆ. ತತ್ಫಲವಾಗಿ, ನಮ್ಮ ವಿಚಾರಗಳಲ್ಲಿ ಅಧಿಕ ಸ್ಪಷ್ಟತೆಯಿರುತ್ತದೆ. ಪ್ರಾರ್ಥನಾದಾಯಕ ಮನಸ್ಸು ಸಮಸ್ಥಿತಿಯಲ್ಲಿದ್ದು, ಭಕ್ತಿಯುಕ್ತವಾಗಿರುತ್ತದೆ. ಅದು ಹೊಸ ವಿಚಾರಗಳಿಗೆ, ಹೊಸ ಅವಕಾಶಗಳಿಗೆ, ಹೊಸ ಸಾಧ್ಯತೆಗಳಿಗೆ ಮುಕ್ತವಾಗಿರುತ್ತದೆ. ಹಕ್ಕಿಯು ಒಂದೇ ರೆಕ್ಕೆಯೊಂದಿಗೆ ಹಾರಲಾರದು. ಹಾಗೆಯೆ, ನಮ್ಮ ಜೀವನದಲ್ಲಿ ಸಹ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಅಂಶಗಳ ನಡುವೆ ಸಮತೋಲನ ಅತ್ಯಗತ್ಯ.

ADVERTISEMENT

ಅರ್ಥ, ಧರ್ಮ, ಕಾಮ, ಮೋಕ್ಷ – ಇವು ಮಾನವ ಜೀವನದ ಪ್ರಮುಖ ಗುರಿಗಳು. ಅರ್ಥ ಎಂದರೆ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸ್ತ್ರ, ಆಶ್ರಯ ಹಾಗು ಜೀವನದ ಇನ್ನಿತರ ಐಹಿಕ ಅಂಶಗಳ ಶೋಧನೆ. ಇವುಗಳನ್ನು ಹಣದ ಬೆಂಬಲದಿಂದ ಪೂರೈಸಿಕೊಳ್ಳಬಹುದು. ಧರ್ಮ ಎಂದರೆ ನ್ಯಾಯಪರತೆಯ ಪಾಲನೆ. ಕಾಮ ಎಂದರೆ ಇಂದ್ರಿಯ ಸುಖ ಮತ್ತು ಭಾವನಾತ್ಮಕ ಹಂಬಲಗಳೆರಡೂ ಇರುತ್ತವೆ.

ಎರಡನೆಯದರಲ್ಲಿ ಸ್ನೇಹಿತರು, ಸಂಬಂಧಿಗಳು, ಸಹೋದ್ಯೋಗಿಗಳು, ನೆರೆಹೊರೆಯವರು ಹಾಗು ಸಮಾಜದೊಂದಿಗಿನ ನಮ್ಮ ಸಂಬಂಧಗಳು ಸೇರಿವೆ. ಮೋಕ್ಷವೆಂದರೆ ಮುಕ್ತಿ, ಅಪ್ಪಟ ಸ್ವಾತಂತ್ರ್ಯದ ಸ್ಥಿತಿ. ಮೋಕ್ಷದಲ್ಲಿ ನಾವು ಸ್ವಾತಂತ್ರ್ಯದ ಪರಿಕಲ್ಪನೆಯಿಂದಲೂ ಸ್ವತಂತ್ರರಾಗಿರುತ್ತೇವೆ.

ಪ್ರಾರ್ಥನೆ ಮತ್ತು ಧ್ಯಾನಗಳಂತಹ ಆಧ್ಯಾತ್ಮಿಕ ಅಭ್ಯಾಸಗಳು ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತವೆಂಬುದೇನೋ ಸರಿಯೆ, ಆದರೆ ಮೋಕ್ಷದ ಧ್ಯೇಯ ಮತ್ತು ಉಳಿದ ಮೂರು ಧ್ಯೇಯಗಳ ನಡುವೆ ವಿರೋಧಾಭಾಸವಿದ್ದರೆ ಅಷ್ಟೇ ಸಾಕಾಗದು. ಈ ನಾಲ್ಕೂ ಅಂಶಗಳ ಅನ್ವೇಷಣೆ ಸಹಜವಾದುದು ಹಾಗೂ ಅವುಗಳಿಗೆ ಮನುಷ್ಯನ ಜೀವನದಲ್ಲಿ ತಮ್ಮದೇ ಆದ ಸ್ಥಾನವಿದೆ. ಆದರೆ, ಅವು ಪರಸ್ಪರ ಸಮತೋಲನದ ಸ್ಥಿತಿಯಲ್ಲಿರಬೇಕು. ಅರ್ಥ ಮತ್ತು ಕಾಮದ ಧ್ಯೇಯಗಳು ಸಾಮಾನ್ಯವಾಗಿ ಧರ್ಮ ಮತ್ತು ಮೋಕ್ಷದ ಧ್ಯೇಯಗಳ ವಿರುದ್ಧವಾಗಿರುತ್ತವೆಂಬುದು ಸರ್ವವಿದಿತ. ಆದರೆ ಹಾಗಿರಲೇಬೇಕೆಂದಿಲ್ಲ. ಅರ್ಥ ಮತ್ತು ಕಾಮಗಳನ್ನು ರೂಪಾಂತರಿಸಿ ಧರ್ಮವನ್ನು ಅನುಸರಿಸುವಂತೆ ಮಾಡಿದರೆ, ಮೋಕ್ಷ ಸಾಧನೆಗೆ ಅವು ಯಾವ ಅಡೆತಡೆಯನ್ನೂ ಉಂಟುಮಾಡವು. ಆದ್ದರಿಂದ, ಅಧ್ಯಾತ್ಮವೆಂದರೆ ತನ್ನ ಪ್ರಾಪಂಚಿಕ ಕರ್ತವ್ಯಗಳನ್ನು ತ್ಯಜಿಸುವುದಲ್ಲ.

ವಾಸ್ತವದಲ್ಲಿ, ಯುಕ್ತ ಮನೋಭಾವದಿಂದ ಮಾಡುವ ಐಹಿಕ ಕರ್ತವ್ಯಪಾಲನೆ ಮುಕ್ತಿಗೆ ಹಾದಿ ಎಂಬುದು ಭಗವದ್ಗೀತೆಯ ಸಂದೇಶಗಳಲ್ಲೊಂದು. ಅದಕ್ಕಾಗಿ ಯೋಗದ ಅಭ್ಯಾಸ ಆವಶ್ಯಕವಾದುದು. ಅಧ್ಯಾತ್ಮ ಹಾಗು ಪ್ರಾಪಂಚಿಕತೆಗಳು ಪರಸ್ಪರ ಪೂರಕವಾದುವು. ಒಂದನ್ನು ತ್ಯಜಿಸಿ ಮತ್ತೊಂದನ್ನು ಎಂದಿಗೂ ಸಾಧಿಸಲಾಗದು. ಒಂದು ಹಕ್ಕಿ ಅಥವಾ ವಿಮಾನ ಯಾವ ದಿಕ್ಕಿನಲ್ಲಿ ಹಾರಬೇಕೆಂದು ಅದರ ಬಾಲ ನಿರ್ದೇಶಿಸುವಂತೆ, ಹೃದಯವೇ ನಮ್ಮ ಮಾರ್ಗದರ್ಶಿ ತತ್ತ್ವ. ನಮ್ಮ ಕಾರ್ಯ, ನಿರ್ಧಾರಗಳನ್ನು ಹೃದಯ ನಿರ್ದೇಶಿಸುತ್ತದೆ. ಹೃದಯವನ್ನು ಅನುಸರಿಸಿದಾಗ, ನಾವು ಸದಾ ಸರಿಯಾದ ಮಾರ್ಗದಲ್ಲಿ ನಡೆಯುತ್ತೇವೆ.

ಪ್ರಸ್ತುತದ ನಮ್ಮ ಸಮಾಜದಲ್ಲಿ ಪ್ರಕ್ಷುಬ್ಧತೆ ತಾಂಡವವಾಡುತ್ತಿದೆ. ಸಾಮುದಾಯಿಕವಾಗಿ, ನಾವು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ಸಾಂಕ್ರಾಮಿಕವು ನಮ್ಮ ಆರೋಗ್ಯವ್ಯವಸ್ಥೆಯ ಮೇಲೆ ಮಿತಿಮೀರಿದ ಹೊರೆಯನ್ನುಂಟುಮಾಡಿದೆ. ಸಂಕಷ್ಟಕರ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಮಾಧಾನ ನೀಡುವ ಪ್ರಾರ್ಥನೆ ನಮಗೆ ನೆರವಾದರೂ ಸಹ, ಮಾಹಾಮಾರಿಯನ್ನು ಗೆಲ್ಲಲು ಅದೊಂದೇ ಸಾಲದು. ತನ್ನ ದೇಶವಾಸಿಗಳ ಯಾತನೀಯ ದಾರುಣಸ್ಥಿತಿಯನ್ನು ಕಂಡ ಮಹಾತ್ಮ ಸ್ವಾಮಿ ವಿವೇಕಾನಂದರು, ಈ ಕ್ಷಣದಲ್ಲಿ ಜನರಿಗೆ ದೇವರು ಬೇಕಿಲ್ಲ, ಅಗತ್ಯವಿರುವುದು ಆಹಾರ, ಆಶ್ರಯಗಳು ಎಂದು ಹೇಳಿದ್ದಾರೆ. ಇಂದಿನ ಸ್ಥಿತಿಯಲ್ಲಿ, ಭಾರತದ ಜನತೆಗೆ ಸಂಪನ್ಮೂಲಗಳು, ಚಿಕಿತ್ಸೆ, ವೈದ್ಯಕೀಯ ಸೌಲಭ್ಯ, ಕೋವಿಡ್ ಪರಿಹಾರ ಸಾಮಗ್ರಿ ಪೂರೈಕೆ, ಆಹಾರ ಮತ್ತು ಕ್ವಾರಂಟೈನ್ ಮಾಡಿಕೊಳ್ಳಲು ಆಗದವರಿಗೆ ಆಶ್ರಯದ ಅವಶ್ಯಕತೆಯಿದೆ. ಮಾನವತೆಗೆ ಸೇವೆ ಸಲ್ಲಿಸದೆ, ಕೇವಲ ಪ್ರಾರ್ಥನೆಯಿಂದಲೇ ನಾವು ತೃಪ್ತಿಗೊಂಡರೆ ಅದು ನಮ್ಮ ದೌರ್ಬಲ್ಯದ ಲಕ್ಷಣ. ಪ್ರಾರ್ಥನೆ ಅಂತಿಮ ಉಪಾಯವಾಗಬೇಕು. ಸಂಕಷ್ಟಕರ ಪರಿಸ್ಥಿತಿಯಲ್ಲಿ ನಾವು ಜನತೆಯೊಂದಿಗೆ ಬಾಂಧವ್ಯವನ್ನೇರ್ಪಡಿಸಿಕೊಂಡು, ಅಗತ್ಯ ಸಹಾಯ ನೀಡಬೇಕು. ಎಲ್ಲಿ ಸಾಧ್ಯವಿದೆಯೊ ಅಲ್ಲಿ, ಜನರಿಗೆ ನೆರವು ನೀಡುವ ಅವಕಾಶ ನಮ್ಮದಾಗಿದೆ. ಸೇವೆಯು ಆರಾಧನೆಯ ಅತ್ಯಂತ ನಿಸ್ವಾರ್ಥ ರೂಪಗಳಲ್ಲೊಂದು.

ಸಂಕಷ್ಟಕಾಲಗಳು ನಮ್ಮನ್ನು ಬಲಗೊಳಿಸುತ್ತವೆ. ಒಂದು ಸಮುದಾಯವಾಗಿ, ಇಂತಹ ಸಾಂಕ್ರಾಮಿಕವ್ಯಾಧಿಯ ಅನುಭವಗಳಿಂದ ನಾವು ಮತ್ತಷ್ಟು ಶಕ್ತಿಶಾಲಿಗಳಾಗುತ್ತೇವೆ. ನಮ್ಮ ಸುತ್ತಲೂ ಜನರಿರುವ ಸಂದರ್ಭವಿದ್ದಾಗ ಪರಿಸ್ಥಿತಿಗಳನ್ನು ನಿರ್ವಹಿಸಿದಾಗ ನಮ್ಮೆಲ್ಲರಿಗೂ ಜೀವನಯಾತ್ರೆ ಸುಗಮವಾಗುತ್ತದೆ. ನಿಸ್ವಾರ್ಥಸೇವೆಯಿಂದ ಬಂಧು-ಮಿತ್ರರು, ನೆರೆಹೊರೆಯವರು, ಸಹೋದ್ಯೋಗಿಗಳು, ಹಿತೈಷಿಗಳನ್ನೊಳಗೊಂಡ ನಮ್ಮ ಪರಿಧಿ ವಿಸ್ತೃತಗೊಳ್ಳುತ್ತದೆ. ಒಂದು ಫೋನ್ ಕರೆ ಅಥವಾ ಮನೆಗೆ ಹೋಗಲು ವಾಹನಸೇವೆಯಂತಹ ಸಣ್ಣ ವಿಷಯಗಳನ್ನೇ ತೆಗೆದುಕೊಳ್ಳಿ, ಸಾಮಾನ್ಯವಾಗಿ ನಮಗೆ ಸಹಾಯದ ಅಗತ್ಯವಿದ್ದಾಗ ಅಪರಿಚಿತರೇ ನೆರವಾಗುವುದನ್ನು ನಾವು ಎಷ್ಟು ಸಂದರ್ಭಗಳಲ್ಲಿ ನೋಡಿಲ್ಲ! ಆರೋಗ್ಯ ಸಂಬಂಧಿ ವೃತ್ತಿಪರರು, ಲಾಭರಹಿತ ಸಂಸ್ಥೆಗಳು ಹಾಗು ಅನೇಕ ದಯಾಳುಗಳು ಅಗತ್ಯವಿರುವವರಿಗೆ ನೆರವು ನೀಡುವುದರಲ್ಲಿ ಆನಂದ ಕಂಡುಕೊಳ್ಳುತ್ತಾರೆ. ಅದಕ್ಕೆ ಬದಲಾಗಿ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ಪಡೆಯುತ್ತಾರೆ. ಕೃತಜ್ಞತೆಯು ನಮ್ಮ ಮಾನಸಿಕ ಆರೋಗ್ಯಕ್ಕೆ ಯಾವ ಆಸ್ತಿಪಾಸ್ತಿಗಿಂತಲೂ ಅಧಿಕ ಮೌಲ್ಯವನ್ನು ಒದಗಿಸುತ್ತದೆ. ನಾವು ಆರ್ಥಿಕವಾಗಿ ಮಾತ್ರವೇ ನೆರವು ನೀಡಬೇಕೆಂದಿಲ್ಲ. ಸಾವಿರಾರು ಜನರಿಗೆ ಅನ್ನದಾನ ಮಾಡುವಂತಹ ಬೃಹತ್ ಕಾರ್ಯವಷ್ಟೇ ಸೇವೆಯೆಂಬುದು ತಪ್ಪು ತಿಳಿವಳಿಕೆ. ಒಂದು ಹೊತ್ತಿನ ಊಟವನ್ನು ಒದಗಿಸಿದರೂ ಅದು ಮಾನವತೆಯ ಸೇವೆ. ಆದ್ದರಿಂದ ನಮಗೆ ಸಾಧ್ಯವಿರುವ ಯಾವುದೇ ವಿಧದಲ್ಲಾದರೂ ನಾವು ಸೇವೆ ಸಲ್ಲಿಸಬೇಕು, ನೆರವು ನೀಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ನಾವೆಲ್ಲರೂ ಜೊತೆಗೂಡಿ ಸೇವೆಗಾಗಿ ಕಂಕಣಬದ್ಧರಾದರೆ, ಈ ಮಹಾಮಾರಿಯೊಂದಿಗೆ ಹೋರಾಡುವುದಷ್ಟೇ ಅಲ್ಲ, ಭಾರತ ಎದುರಿಸುತ್ತಿರುವ ಇನ್ನೂ ಅನೇಕ ಸಮಸ್ಯೆಗಳನ್ನು ನಾವು ಪರಿಹರಿಸಬಹುದು. ಸ್ವತಃ ತಮಗೆ ನೆರವಾಗುವವರಿಗೆ ಭಗವಂತನೂ ನೆರವಾಗುತ್ತಾನೆ ಎಂಬ ಗಾದೆಯಿದೆ. ಈ ಕದನದಲ್ಲಿ ವಿಜಯಿಯಾಗಲು ಮಾನವತೆಗೆ ಮಾನವತೆಯೇ ನೆರವಾಗಲು ಇದು ಸೂಕ್ತ ಸಮಯ. ಯೋಗ್ಯ ಸಮಯದಲ್ಲಿ ಸೇವೆ ನೀಡುವುದೇ ಕೀಲಿಕೈ. ಅದು ಈಗಲೇ.

ಲೇಖಕರು: ಕಮಲೇಶ್ ಪಟೇಲ್ (ದಾಜಿ) ಹಾರ್ಟ್‌ಫುಲ್‌ನೆಸ್ (heartfulness.org) ಸಂಸ್ಥೆಯ ಮಾರ್ಗದರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.