ADVERTISEMENT

ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ಐವರಲ್ಲಿ ಪಿತ್ತಕೋಶ ಗ್ಯಾಂಗ್ರಿನ್‌ ಪತ್ತೆ

ದೇಶದಲ್ಲೇ ಮೊದಲ ಪ್ರಕರಣ, ಎಲ್ಲರಿಗೂ ಯಶಸ್ವಿ ಶಸ್ತ್ರಚಿಕಿತ್ಸೆ

ಪಿಟಿಐ
Published 16 ಸೆಪ್ಟೆಂಬರ್ 2021, 13:09 IST
Last Updated 16 ಸೆಪ್ಟೆಂಬರ್ 2021, 13:09 IST
.
.   

ನವದೆಹಲಿ: ಕೋವಿಡ್‌ ಪಿಡುಗಿನಿಂದ ಚೇತರಿಸಿಕೊಂಡಿದ್ದ ಐವರು ರೋಗಿಗಳಲ್ಲಿ ಪಿತ್ತಕೋಶದ ಗ್ಯಾಂಗ್ರಿನ್‌ ಪತ್ತೆಯಾಗಿದ್ದು, ಅವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ಜೂನ್‌ ಮತ್ತು ಆಗಸ್ಟ್‌ ತಿಂಗಳಲ್ಲಿ ಈ ಐವರಿಗೂ ಇಲ್ಲಿನ ಸರ್‌ ಗಂಗಾ ರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಯಕೃತ್‌, ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಅರೋರಾ ತಿಳಿಸಿದ್ದಾರೆ.

ಈ ರೋಗಿಗಳಿಗೆ ಪಿತ್ತಕೋಶದಲ್ಲಿ ತೀವ್ರವಾದ ಉರಿಯೂತ ಉಂಟಾಗಿತ್ತು. ಇದು ಗ್ಯಾಂಗ್ರಿನ್‌ ಆಗಿ ಬೆಳೆದಿತ್ತು. ಇದಕ್ಕೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೋವಿಡ್ ಪಿಡುಗಿನಿಂದ ಚೇತರಿಸಿಕೊಂಡವರಲ್ಲಿ ಪಿತ್ತಕೋಶದ ಗ್ಯಾಂಗ್ರಿನ್‌ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಐವರು ರೋಗಿಗಳಲ್ಲಿ ನಾಲ್ವರು ಪುರುಷರಾಗಿದ್ದು, ಒಬ್ಬರು ಮಹಿಳೆ. ಅವರು 37ರಿಂದ 75ರ ನಡುವಿನ ವಯಸ್ಸಿವರು. ಎಲ್ಲಾ ರೋಗಿಗಳೂ ಜ್ವರ, ಹೊಟ್ಟೆಯ ಬಲ ಮೇಲ್ಭಾಗದಲ್ಲಿ ನೋವು ಅನುಭವಿಸಿದ್ದರು. ಅಲ್ಲದೇ ಅವರಿಗೆ ವಾಂತಿಯೂ ಆಗಿತ್ತು. ಅವರಲ್ಲಿ ಇಬ್ಬರು ಮಧುಮೇಹ ಮತ್ತು ಒಬ್ಬರು ಹೃದ್ರೋಗದಿಂದ ಬಳಲುತ್ತಿದ್ದರು. ಕೋವಿಡ್‌ ರೋಗಲಕ್ಷಣಗಳ ನಿರ್ವಹಣೆಗಾಗಿ ಮೂವರು ಸ್ಟೀರಾಯ್ಡ್‌ಗಳನ್ನು ಪಡೆದಿದ್ದರು ಎಂದು ಅರೋರಾ ವಿವರಿಸಿದ್ದಾರೆ.

ಈ ಎಲ್ಲಾ ರೋಗಿಗಳಿಗೆ ‘ಲ್ಯಾಪ್ರೊಸ್ಕೋಪಿಕ್‌ ನೆಕ್ರೋಟಿಕ್’ ವಿಧಾನದ ಮೂಲಕ ಪಿತ್ತಕೋಶದಲ್ಲಿನ ಗ್ಯಾಂಗ್ರೀನ್‌ ಭಾಗವನ್ನು ತೆಗೆಯಲಾಯಿತು ಎಂದು ಡಾ ಅರೋರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.