ADVERTISEMENT

ಕರ್ನಾಟಕ ಸೇರಿ 13 ಹೈಕೋರ್ಟ್‌ಗಳಿಗೆ ಹೊಸ ಸಿಜೆ: ಕೇಂದ್ರಕ್ಕೆ ಕೊಲಿಜಿಯಂ ಶಿಫಾರಸು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 9:12 IST
Last Updated 21 ಸೆಪ್ಟೆಂಬರ್ 2021, 9:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕರ್ನಾಟಕ ಸೇರಿದಂತೆ ರಾಷ್ಟ್ರದ 13 ಹೈಕೋರ್ಟ್‌ಗಳು ಹೊಸ ಮುಖ್ಯ ನ್ಯಾಯಮೂರ್ತಿ(ಸಿಜೆ)ಗಳನ್ನು ಪಡೆಯಲಿವೆ.

ಕಲ್ಕತ್ತ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಿಂದಾಲ್‌ ಅವರನ್ನು ಒಳಗೊಂಡಂತೆ ಎಂಟು ಹೆಸರುಗಳನ್ನು ಮತ್ತು ಐವರು ಹಾಲಿ ಮುಖ್ಯನ್ಯಾಯಮೂರ್ತಿಗಳನ್ನು ಇತರ ಹೈಕೋರ್ಟ್‌ಗಳಿಗೆ ವರ್ಗ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ಎನ್‌.ವಿ. ರಮಣ ಅವರ ನೇತೃತ್ವದ ಸುಪ್ರೀಂಕೋರ್ಟ್‌ ಕೊಲಿಜಿಯಂಶಿಫಾರಸು ಮಾಡಿದೆ.

ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಹಿರಿಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.

ADVERTISEMENT

ಕೊಲಿಜಿಯಂ ನಿರ್ಧಾರವನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಪ್ರಕಟಿಸಲಾಗಿದೆ.

ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಕೊಂಡರೆ ನ್ಯಾಯಮೂರ್ತಿ ಬಿಂದಾಲ್‌ ಅವರು ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗುವರು.ಕೊಲಿಜಿಯಂ, ಮುಖ್ಯ ನ್ಯಾಯಮೂರ್ತಿ ರಮಣ ಜೊತೆ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನೂಒಳಗೊಂಡಿದೆ.

ನ್ಯಾಯಮೂರ್ತಿಗಳಾದ ರಂಜಿತ್‌ ವಿ ಮೋರೆ, ಸತೀಶ್‌ ಚಂದ್ರ ಶರ್ಮಾ, ಪ್ರಕಾಶ್‌ ಶ್ರೀವಾಸ್ತವ, ಆರ್‌.ವಿ. ಮಳೀಮಠ್‌, ರಿತುರಾಜ್‌ ಅವಸ್ಥಿ, ಅರವಿಂದ್‌ ಕುಮಾರ್‌ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿಗೆ ಅನುಕ್ರಮವಾಗಿ ಮೇಘಾಲಯ, ತೆಲಂಗಾಣ, ಕಲ್ಕತ್ತಾ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್‌ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಶಿಫಾರಸು ಮಾಡಲಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮತ್ತೊಂದು ಪಟ್ಟಿಯಲ್ಲಿ ಐವರು ಮುಖ್ಯ ನ್ಯಾಯಮೂರ್ತಿಗಳನ್ನು ಇತರ ಹೈಕೋರ್ಟ್‌ಗಳಿಗೆ ವರ್ಗ ಮಾಡಲು ಶಿಫಾರಸು ಮಾಡಲಾಗಿದೆ.

ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎ. ಖುರೇಷಿ ಅವರನ್ನು ರಾಜಸ್ತಾನ ಹೈಕೋರ್ಟ್‌ ಸಿ.ಜೆಯಾಗಿ, ರಾಜಸ್ತಾನ ಹೈಕೋರ್ಟ್‌ನ ಸಿ.ಜೆ ನ್ಯಾಯಮೂರ್ತಿ ಇಂದ್ರಜಿತ್‌ ಮಹಾಂತಿ ಅವರನ್ನು ತ್ರಿಪುರಾ ಹೈಕೋರ್ಟ್‌ ಸಿ.ಜೆ.ಯಾಗಿ ನೇಮಿಸಲು ಸೂಚಿಸಿದೆ.ಈ ವರ್ಷದ ಏಪ್ರಿಲ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ರಮಣ ಅವರು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಹೈಕೋರ್ಟ್‌ಗಳಿಗೆ ಸುಮಾರು ನೂರು ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ ಅಲ್ಲದೆ ಸುಪ್ರೀಂಕೋರ್ಟ್‌ನಲ್ಲಿ ಖಾಲಿ ಇದ್ದ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನಗಳಿಗೂ ನೇಮಕ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.