ADVERTISEMENT

ಆಂಧ್ರ: ಜಿಲ್ಲಾ ಪರಿಷತ್‌ ಚುನಾವಣೆ ವೈಎಸ್‌ಆರ್‌ ಕಾಂಗ್ರೆಸ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 18:22 IST
Last Updated 19 ಸೆಪ್ಟೆಂಬರ್ 2021, 18:22 IST

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಮಂಡಲ ಮತ್ತು ಜಿಲ್ಲಾ ಪರಿಷತ್‌ ಚುನಾವಣೆಯಲ್ಲೂ ಜಯಭೇರಿ ಬಾರಿಸಿದೆ. ಜಿಲ್ಲಾ ಪರಿಷತ್‌ನ ಒಟ್ಟು 553 ಸ್ಥಾನಗಳಲ್ಲಿ 547ಕ್ಕೂ ಹೆಚ್ಚು ಸ್ಥಾನಗಳಲ್ಲಿ ಹಾಗೂ ಮಂಡಲ ಪರಿಷತ್‌ನ ಒಟ್ಟು 8083 ಸ್ಥಾನಗಳಲ್ಲಿ 7284ಕ್ಕೂ ಹೆಚ್ಚು ಸ್ಥಾನಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಜಯಗಳಿಸಿದೆ.

ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ವಿಧಾನಸಭೆ ಕ್ಷೇತ್ರದಲ್ಲೂ ಟಿಡಿಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಏಪ್ರಿಲ್‌ನಲ್ಲಿ ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿತ್ತು. ಆದರೆ, ಆಂಧ್ರಪ್ರದೇಶ ಹೈಕೋರ್ಟ್‌ ನೀಡಿದ ಆದೇಶದ ಕಾರಣಕ್ಕೆ ಮತಗಳ ಏಣಿಕೆಯನ್ನು ತಡೆಹಿಡಿಯಲಾಗಿತ್ತು.

ADVERTISEMENT

ರಾಜ್ಯ ಚುನಾವಣಾ ಆಯೋಗವು ಚುನಾವಣೆ ನಡೆಸುವಾಗ ಸಮರ್ಪಕವಾದ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ಟಿಡಿಪಿ ಮತ್ತು ಜನ ಸೇನಾ ಪಕ್ಷಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಕಳೆದ ವಾರ ಮತ ಎಣಿಕೆ ನಡೆಸಲು ಅವಕಾಶ ಕಲ್ಪಿಸಿ ಆದೇಶ ನೀಡಿತ್ತು. ಹೀಗಾಗಿ, ಭಾನುವಾರ ಮತ ಎಣಿಕೆ ಕೈಗೊಳ್ಳಲಾಯಿತು.

ಈ ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವಿಶ್ವಾಸ ಉಳಿದಿಲ್ಲ. ರಾಜ್ಯ ಚುನಾವಣಾ ಆಯುಕ್ತರು ರಾಜ್ಯ ಸರ್ಕಾರದ ರಬ್ಬರ್‌ ಸ್ಟ್ಯಾಂಪ್‌ ಆಗಿದ್ದಾರೆ. ಹೊಸದಾಗಿ ಚುನಾವಣಾ ಅಧಿವೇಶನ ಹೊರಡಿಸಬೇಕು ಎಂದು ಆಗ್ರಹಿಸಿದ್ದ ಚಂದ್ರ ಬಾಬು ನಾಯ್ಡು ಅವರು, ಮತದಾನ ನಡೆಯುವ ಕೆಲವೇ ದಿನಗಳ ಮುನ್ನ ಪರಿಷತ್‌ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು. ಆದರೂ, ಚುನಾವಣಾ ಕಣದಲ್ಲಿ ಟಿಡಿಪಿ ಅಭ್ಯರ್ಥಿಗಳು ಉಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.