ADVERTISEMENT

ಕಸವಿಲ್ಲಿ ಕಾಸಾಯ್ತು, ಗ್ರಾಮ ಸ್ವಚ್ಛವಾಯ್ತು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ಡಡಡಡ
ಡಡಡಡ   

‘ನಮ್ಮೂರು ಸ್ವಚ್ಛವಾಗಿರಬೇಕು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ. ಇವತ್ತಲ್ಲ, ನಾಳೆ ಸ್ವಚ್ಛ ಭಾರತದ ಕನಸು ನನಸಾಗುವ ವಿಶ್ವಾಸವಿದೆ…’ ಊರಿನ ಸ್ವಚ್ಛತೆ ಕುರಿತು ಮಾಹಿತಿ ನೀಡುತ್ತಲೇ ಮಾತಿಗಿಳಿದರು ಕಾರ್ಕಳ ತಾಲ್ಲೂಕಿನ ಸ್ವಚ್ಛಗ್ರಾಹಿ ಮಾಧವಿ.

ಕಾರ್ಕಳ ತಾಲ್ಲೂಕಿನ ಮುಡಾರಿನಲ್ಲಿರುವ ಘನ ದ್ರವ ಸಂಪನ್ಮೂಲ ಘಟಕದ (ಎಸ್‌ಎಲ್‌ಆರ್‌ಎಂ) ಉಸ್ತುವಾರಿ ಇವರು, ಊರಿನ ಕಸವನ್ನೆಲ್ಲ ಸಂಪನ್ಮೂಲವನ್ನಾಗಿ ಬದಲಾಯಿಸುತ್ತಿದ್ದಾರೆ. ಕಸದಿಂದಲೇ ತಾವೂ ಬದುಕು ಕಟ್ಟಿಕೊಂಡು, ಐವರು ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾರಣರಾಗಿದ್ದಾರೆ.

‘ಕಸ ರಸವಾಗಿ ಬದಲಾಗಿದ್ದು ಹೇಗೆ’ ಎಂಬುದನ್ನು ಮಾಧವಿಯವರು ವಿವರಿಸುತ್ತಾ ಹೊರಟರು.ಎರಡು ವರ್ಷಗಳ ಹಿಂದೆ ಮುಡಾರು ನಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿತ್ತು. ರಸ್ತೆ ಬದಿ, ಹಳ್ಳ, ಖಾಲಿ ನಿವೇಶನ ಹೀಗೆ, ಎಲ್ಲಿ ನೋಡಿದರೂ ತ್ಯಾಜ್ಯದ ರಾಶಿಯೇ. ಪ್ರತಿಯೊಬ್ಬರೂ ಮನೆಯನ್ನು ಶುಚಿಯಾಗಿಟ್ಟುಕೊಳ್ಳುತ್ತಿದ್ದರೇ ಹೊರತು ಗ್ರಾಮಗಳ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ‘ಜನರ ಮನಸ್ಥಿತಿ ಬದಲಾಗಬೇಕು, ಗ್ರಾಮಗಳು ಸ್ವಚ್ಛವಾಗಿರಬೇಕು’ ಎಂಬ ಪರಿಕಲ್ಪನೆಯೊಂದಿಗೆ ಜಿಲ್ಲಾ ಪಂಚಾಯ್ತಿ ಎಸ್‌ಎಲ್‌ಆರ್‌ಎಂ ಘಟಕಗಳನ್ನು ಆರಂಭಿಸುವ ಯೋಜನೆ ಅನುಷ್ಠಾನ ಮಾಡಿತು.

ADVERTISEMENT

‘ಸಮಾಜಸೇವೆಯಲ್ಲಿ ತೊಡಗಿದ್ದ ನನಗೂ ಯೋಜನೆಯ ಭಾಗವಾಗುವಂತೆ ಕರೆ ಬಂತು. ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವುದು ಹೇಗೆ, ಕಸದಿಂದ ಉದ್ಯೋಗ ಸೃಷ್ಟಿಸುವುದು ಹೇಗೆ ಎಂದು ತಮಿಳುನಾಡಿನ ವೆಲ್ಲೂರು ಶ್ರೀನಿವಾಸನ್ 15 ದಿನಗಳ ತರಬೇತಿಯಲ್ಲಿ ಮನಮುಟ್ಟುವಂತೆ ಹೇಳಿಕೊಟ್ಟರು. ಈ ತರಬೇತಿ ಜೀವನದ ದಿಕ್ಕನ್ನೇ ಬದಲಿಸಿತು. ಜತೆಗೆ, ಮುಡಾರಿನಲ್ಲಿ ಸ್ವಚ್ಛತೆಯ ಕ್ರಾಂತಿಗೆ ನಾಂದಿಯಾಯಿತು’ ಎಂದು ಯೋಜನೆ ಆರಂಭವಾದ ಬಗೆ ವಿವರಿಸಿದರು ಮಾಧವಿ.

‘ಉದ್ಯೋಗದ ಅನಿವಾರ್ಯತೆ ಇದ್ದ ಐವರು ಮಹಿಳೆಯರನ್ನು ಗುರುತಿಸಿ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಉದ್ಯೋಗ ನೀಡಲಾಯಿತು. ಮುಡಾರು ಗ್ರಾಮ ಪಂಚಾಯ್ತಿಯಿಂದ ಘಟಕ ಸ್ಥಾಪನೆಗೆ ಅಗತ್ಯ ನೆರವು ಸಿಕ್ಕಿತು. ತಡಮಾಡದೆ ಮನೆಮನೆಗೂ ತೆರಳಿ ‘ಕಸವನ್ನು ರಸ್ತೆಗೆ ಬಿಸಾಡಬೇಡಿ, ನಮಗೆ ಕೊಡಿ’ ಎಂದು ಮನವಿ ಮಾಡಿದೆವು.

‘2ನೇ ಹಂತದಲ್ಲಿ ಹಸಿ–ಒಣಕಸ ವಿಲೇವಾರಿ ಹೇಗೆ ಎಂಬ ಪ್ರಾತ್ಯಕ್ಷಿಕೆ ನೀಡಲಾಯಿತು. ಆರಂಭದಲ್ಲಿ ಕೆಲವರು ಕಸ ಕೊಡಲು ಒಪ್ಪಲಿಲ್ಲ. ಹಾಗೆಂದು ಪ್ರಯತ್ನವನ್ನೂ ಬಿಡಲಿಲ್ಲ. ಬಳಿಕ ಕಸ ಕೊಟ್ಟರು; ದುಡ್ಡು ಕೊಡಲಿಲ್ಲ. ಜನರ ಮನಸ್ಥಿತಿ ಬದಲಾಗುತ್ತಾ ಹೋಯಿತು. ಈಗ ಶೇ 70ರಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಕಸದ ಜತೆಗೆ ತಿಂಗಳಿಗೆ ಇಂತಿಷ್ಟು ಎಂದು ಹಣವನ್ನೂ ಕೊಡುತ್ತಿದ್ದಾರೆ’ ಎನ್ನುತ್ತಾ ಯೋಜನೆ ಸಾಕಾರಗೊಂಡ ಬಗೆಯನ್ನು ವಿವರಿಸಿದರು.

ಪ್ರತಿನಿತ್ಯ ಮುಡಾರು ಹಾಗೂ ನಲ್ಲೂರು ಗ್ರಾಮ ಪಂಚಾಯ್ತಿಯ 500 ಮನೆಗಳಿಂದ, 200 ಅಂಗಡಿಗಳಿಂದ ಹಸಿ–ಒಣಕಸ ಸಂಗ್ರಹಿಸಲಾಗುತ್ತಿದೆ. ಬೆಳಿಗ್ಗೆ ತಂದ ಕಸವನ್ನೆಲ್ಲ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಬೇರ್ಪಡಿಸಲಾಗುತ್ತದೆ. ‘ಒಂದೊಂದು ಬಗೆಯ ಪ್ಲಾಸ್ಟಿಕ್‌ಗೂ ಒಂದೊಂದು ದರವಿದ್ದು, ಗುಜರಿ ಹಾಗೂ ಖಾಸಗಿ ಸಂಸ್ಥೆಗಳು ಘಟಕಕ್ಕೇ ಬಂದು ಖರೀದಿ ಮಾಡುತ್ತವೆ. ಇದರಿಂದ ಒಂದಷ್ಟು ಹಣ ಸಿಗುತ್ತದೆ. ಹಸಿ ಕಸವನ್ನು ಕಾಂಪೊಸ್ಟ್‌ ಗೊಬ್ಬರ ತಯಾರಿಸಿ ರೈತರಿಗೆ ನೀಡಲಾಗುತ್ತದೆ’ ಎಂದು ವಿವರಿಸಿದರು ಮಾಧವಿ.

ಪ್ರತಿ ತಿಂಗಳು ಮನೆಗಳಿಂದ ₹10,000, ಅಂಗಡಿಗಳಿಂದ ₹28,000 ಸಂಗ್ರಹವಾಗುತ್ತದೆ. ಸಿಬ್ಬಂದಿ ವೇತನ, ಘಟಕದ ನಿರ್ವಹಣೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯ್ತಿಯಿಂದಲೂ ಆರ್ಥಿಕ ನೆರವು ಸಿಗುತ್ತಿದೆ. ‘ಆರಂಭದಲ್ಲಿ ಕಸ ಕೊಡಲು ಹಿಂದೇಟು ಹಾಕುತ್ತಿದ್ದವರು ಈಗ ಕಸ, ಹಣ ಎರಡನ್ನೂ ಕೊಡುತ್ತಿದ್ದಾರೆ. ಆರಂಭದಲ್ಲಿ ಹೇಳಿದಂತೆ ಜನರ ಮನಸ್ಥಿತಿ ಬದಲಾದರೆ ಸ್ವಚ್ಛ ಭಾರತ ನಿರ್ಮಾಣವಾದಂತೆ’ ಎಂದು ಮತ್ತೊಮ್ಮೆ ಆತ್ಮವಿಶ್ವಾಸದಿಂದ ಹೇಳಿದರು ಮಾಧವಿ.

ವಿಶಾಲಾಕ್ಷಿಯವರ ಸ್ವಚ್ಛ ಗ್ರಾಮದ ಕನಸು

ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್‌ ಪುತ್ರನ್,ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಹೆಚ್ಚು ಒತ್ತು ನೀಡಿದ್ದಾರೆ. ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಇವರು, ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದು, ಹೆಜಮಾಡಿಯಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ನಿಯಮಿತವಾಗಿ ಗ್ರಾಮಸಭೆಗಳನ್ನು ನಡೆಸುತ್ತಾ, ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಹೆಜಮಾಡಿಯನ್ನು ಸಂಪೂರ್ಣ ಕಸಮಕ್ತಗೊಳಿಸುವುದು ಅವರ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.