ADVERTISEMENT

ಕಾಂಗ್ರೆಸ್‌ ವಿರುದ್ಧವೇ ಸಿದ್ದರಾಮಯ್ಯ ಸಂಚು; ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 14:48 IST
Last Updated 13 ಅಕ್ಟೋಬರ್ 2021, 14:48 IST
   

ರಾಮನಗರ: ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದೇ ಹೋದರೆ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಜೆಡಿಎಸ್‌ನಲ್ಲಿ ಇದ್ದುಕೊಂಡೇ, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಮುಖಂಡರನ್ನು ಸೇರಿಸಿಕೊಂಡು ‘ಅಹಿಂದ’ ಹೆಸರಿನಲ್ಲಿ ಸಂಘಟನೆ ಮಾಡಿದ್ದರು. ಈ ಮೂಲಕ ಜೆಡಿಎಸ್‌ ಅನ್ನೇ ಮುಗಿಸಲು ಹೊರಟಿದ್ದರು. ಈಗ ಮತ್ತೆ ಅದೇ ಕೆಲಸ ಆರಂಭಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮ ಕಾಂಗ್ರೆಸ್‌ನದ್ದೋ ಇಲ್ಲ ಅಹಿಂದ ವರ್ಗದ್ದೋ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಚರ್ಚೆಗೆ ಬನ್ನಿ ಎಂಬ ಸಿದ್ದರಾಮಯ್ಯ ಅವರ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನ್ನ ತಂದೆ ನನಗೂ ರಾಜಕೀಯ ಕಳುಹಿಸಿದ್ದಾರೆ. ಪಲಾಯನ ಮಾಡುವುದಿಲ್ಲ. ನೀವು ಈ ಚರ್ಚೆಗೆ ಮಂಗಳ ಹಾಡಿದರೆ ನಾನೂ ಸುಮ್ಮನಿರುತ್ತೇನೆ. ಇಲ್ಲವಾದರೆ ಮಾತನಾಡಲು ನನಗೂ ಬಹಳಷ್ಟು ವಿಷಯಗಳಿವೆ’ ಎಂದರು.

ADVERTISEMENT

ಉಪಚುನಾವಣೆಗೆ ಹಣ: ಯಡಿಯೂರಪ್ಪ ಅವರನ್ನು ಭೇಟಿಯೇ ಮಾಡಿಲ್ಲ ಎನ್ನುತ್ತೀರಿ. ಹಾಗಿದ್ದರೆ ಎಂಟು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಸೋಲಿಸಲು ಯಾರನ್ನು ಕಳುಹಿಸಿ ಯಡಿಯೂರಪ್ಪ ಅವರ ಹತ್ತಿರ ದುಡ್ಡು ತರಿಸಿಕೊಂಡಿದ್ದೀರಿ? ಆಗ ಮಧುಗಿರಿ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಎಷ್ಟು ಪ್ರಯತ್ನ ಪಟ್ಟಿದ್ದೀರಿ? ನೀವೆಷ್ಟು ನೇರ ರಾಜಕಾರಣ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ ಎಂದು ಟೀಕಿಸಿದರು.

ಮಂಡ್ಯದಲ್ಲಿ ಜೆಡಿಎಸ್ ಸಂಪೂರ್ಣ ವೀಕ್‌ ಆಗಿದೆ ಎನ್ನುತ್ತೀರಿ? ನಿಮಗೇಕೆ ನಮ್ಮ ಪಕ್ಷದ ಚಿಂತೆ? ಏಕೆ ಪದೇ ಪದೇ ನಮ್ಮನ್ನು ಕೆಣಕುತ್ತೀರಿ? ಮುಂದಿನ ಚುನಾವಣೆಯಲ್ಲಿ ಮಂಡ್ಯ ಜನತೆ ಯಾವು ಯಾರ ಪರ ಎಂಬುದನ್ನು ಅಲ್ಲಿನ ಜನತೆ ತೋರಿಸಲಿದ್ದಾರೆ ಎಂದು ಹೇಳಿದರು. 2013ರಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದಿದ್ದೀರಿ. ಆದರೂ ಇನ್ನೂ ನಿಮ್ಮ ಮುಖ್ಯಮಂತ್ರಿ ಆಸೆ ಹೋಗಿಲ್ಲ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ಕುರಿತು ಉಗ್ರಪ್ಪ ಹೇಳಿಕೆ ಆಡಿಯೊ ಬಗ್ಗೆ ಪ್ರಸ್ತಾಪಿಸಿದ ಅವರು ‘ಸಿದ್ದರಾಮಯ್ಯ ಶಿಷ್ಯರೇ ಈ ಬಗ್ಗೆ ಮಾತನಾಡಿದ್ದು, ಇದರ ಹಿಂದೆ ಯಾವ ಉದ್ದೇಶ ಇದೆಯೋ ಗೊತ್ತಿಲ್ಲ. ಶಿವಕುಮಾರ್‌ ಒಮ್ಮೆಯಾದರೂ ಮುಖ್ಯಮಂತ್ರಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಅವರನ್ನು ಮನೆಗೆ ಕಳುಹಿಸಿಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಅಗೌರವ ತೋರಿಲ್ಲ: ವಿಪಕ್ಷ ನಾಯಕ ಸ್ಥಾನದ ಕುರಿತು ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ‘ಎಚ್‌.ಡಿ, ದೇವೇಗೌಡರು, ಶಾಂತವೇರಿ ಗೋಪಾಲಗೌಡರಂತಹ ನಾಯಕರು ವಿಪಕ್ಷ ನಾಯಕರಾಗಿ ಆ ಹುದ್ದೆಗೆ ಘನತೆ ತಂದಿದ್ದರು. ಆದರೆ ಆ ಮಟ್ಟದ ಕೆಲಸ ಮಾಡಲು ಸಿದ್ದರಾಮಯ್ಯರಂಥ ವ್ಯಕ್ತಿಯಿಂದ ಸಾಧ್ಯವಿಲ್ಲ. ಇಂತಹವರಿಂದಲೇ ಆ ಹುದ್ದೆ ಘನತೆಗೆ ಕುಂದು ಉಂಟಾಗಿದೆ ಎಂದಷ್ಟೇ ಹೇಳಿದ್ದೇನೆ ಹೊರತು ಸಂವಿಧಾನಿಕ ಹುದ್ದೆ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.