ADVERTISEMENT

ಸಮಾಜ ಸುಧಾರಕ ಸೇವಾಲಾಲ್‌: ಇಂದು ಸೇವಾಲಾಲ್ ಜಯಂತಿ– ವಿಶೇಷ ಲೇಖನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 3:27 IST
Last Updated 15 ಫೆಬ್ರುವರಿ 2023, 3:27 IST
   

ಬಂಜಾರ ಜನಾಂಗದಿಂದ ಪೂಜಿಸಲ್ಪಡುತ್ತಿರುವ ಸೇವಾಲಾಲರು 1739ರಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ್ ಮತ್ತು ಧರ್ಮಿಣಿಬಾಯಿಯ ವರಿಗೆ ಜನಿಸಿದರು. ಬಂಜಾರರು ಹಾಡುವ ಲಾವಣಿ ಪದಗಳಲ್ಲಿ, ಕೋಲಾಟದ ಹಾಡುಗಳಲ್ಲಿ, ವಾಜ, ಮದುವೆ–ಹಬ್ಬಹರಿದಿನಗಳಲ್ಲಿ ಹಾಡುವ ಹಾಡುಗಳಲ್ಲಿ ಜನಾಂಗದ ಇತಿಹಾಸವು ಅಡಗಿತ್ತು, ಅದನ್ನು ಸೇವಾಲಾಲರು ತಿಳಿದುಕೊಂಡಿದ್ದರು.

ಲದೇಣಿ (ಸರಕು ಸಾಗಾಣಿಕೆ) ಮೂಲಕ ಸೇವಾಲಾಲರು ಕೂಡ ಸಾವಿರಾರು ಜನರು ಇರುವ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಆಗಿನ ವಸಾಹತುಶಾಹಿಗಳಿಂದ ಎದುರಾದ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಸಾವಿರಾರು ಗೋವುಗಳೊಂದಿಗೆ ಸಂಚಾರ ಮಾಡುತ್ತಾ ಇಡೀ ದೇಶವನ್ನೇ ಸುತ್ತಿದರು. ದುಶ್ಚಟಗಳಿಗೆ ಬಲಿಯಾಗಿದ್ದ ತನ್ನ ಸಮುದಾಯದ ಜನರನ್ನು ತಿದ್ಧಿ, ಬುದ್ಧಿ ಹೇಳಿದರು. ಬಂಜಾರರ ಕುಲದೇವತೆಯಾದ ಮರಿಯಮ್ಮ ಯಾಡಿಯನ್ನು (ತಾಯಿ) ಪೂಜಿಸುತ್ತಿದ್ದರು.

ತಮ್ಮ ಧನಾತ್ಮಕ ಚಿಂತನೆಗಳೊಂದಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದ ಸೇವಾಲಾಲರು ಕೆಲವೇ ವರ್ಷಗಳಲ್ಲಿ ನಾಡಿನಾದ್ಯಂತ ಸಮುದಾಯದ ಜನರಿಗೆ ದಾರ್ಶನಿಕರಾಗಿ ಕಂಡರು. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು; ಮೌಢ್ಯ–ಕಂದಾಚಾರಗಳಿಗೆ ಬಲಿಯಾಗದೆ ನಮ್ಮ ಪೂರ್ವಿಕರಂತೆ ನಾವೂ ಪ್ರಕೃತಿಯನ್ನು ಪೋಷಿಸಬೇಕು ಮತ್ತು ಆರಾಧಿಸಬೇಕು ಎಂದು ಕರೆ ನೀಡಿದರು. ಸಕಲ ಜೀವಜಂತುಗಳಿಗೂ ಒಳಿತನ್ನೇ ಬಯಸಬೇಕು ಎನ್ನುವ ವಿಶ್ವಮಾನವತೆಯನ್ನು ಸಾರಿದರು. ಮಹಿಳೆಯರ ಮೇಲಾಗುತ್ತಿದ್ದ ದೌರ್ಜನ್ಯ, ಅಸಮಾನತೆಯನ್ನು ಖಂಡಿಸಿದರು. 1806ರಲ್ಲಿ ಸೇವಾಲಾಲರು ಮಹಾರಾಷ್ಟ್ರದ ಪೌರಾಘಡ್‌ನಲ್ಲಿ ಮರಣ ಹೊಂದಿದರು.

ADVERTISEMENT

ಪ್ರತಿಯೊಂದು ಬಂಜಾರ ತಾಂಡಗಳಲ್ಲೂ ಸೇವಾಲಾಲ್ ಹಾಗೂ ಮರಿಯಮ್ಮದೇವಿಯ ದೇವಸ್ಥಾನವಿರುತ್ತದೆ. ಎರಡೂವರೆ ಶತಮಾನಗಳು ಕಳೆದರೂ ಸೇವಾಲಾಲ್ ಅವರನ್ನು ಇಡೀ ಬಂಜಾರ ಜನಾಂಗ ಈಗಲೂ ಪೂಜಿಸುತ್ತಿದ್ದಾರೆ. ಅನೇಕ ಲಾವಣಿ ಪದಗಳು, ಲಂಬಾಣಿ ಶೈಲಿಯ ನೃತ್ಯಗಳು, ವಾಜ(ಭಜನೆ) – ಹೀಗೆ ಅನೇಕ ಬಂಜಾರ ಸಂಸ್ಕೃತಿಯ ಮೂಲಕ ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ. ಪ್ರಮಾನವತಾವಾದಿ ಚಿಂತನೆಗಳು, ಪ್ರಗತಿಪರ ಆಲೋಚನೆಗಳು, ಎಲ್ಲ ಜೀವಿಗಳಲ್ಲೂ ದೇವರನ್ನು ಕಾಣಬೇಕು ಎನ್ನುವ ಅವರ ತತ್ವಗಳ ಅನುಸಂಧಾನದ ಮೂಲಕ ನಾವು ಸೇವಾಲಾಲಾರನ್ನು ಸ್ಮರಿಸಬೇಕು.

ಈಗಿನ ಪೀಳಿಗೆ ಸೇವಾಲಾಲರನ್ನು ನಿಜವಾಗಿಯೂ ಪೂಜಿಸುವುದಾದರೆ ಅವರು ಅನುಸರಿಸಿದ ತತ್ವಗಳನ್ನು ಪಾಲಿಸಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಅವರು ಸಾರಿದ ಸಂದೇಶವನ್ನು, ಮೌಢ್ಯ–ಕಂದಾಚಾರಗಳಿಗೆ ಬಲಿಯಾಗದಂತೆ ಎಚ್ಚರಿಸಿದ ವೈಜ್ಞಾನಿಕ ಮನೋಭಾವವನ್ನು, ಸಕಲ ಚರಾಚರ ಜೀವಿಗಳಿಗೂ ಒಳಿತಾಗಲಿ ಎಂಬ ವಿಶ್ವಮಾನವ ತತ್ವವನ್ನು ಅನುಸರಿಸಬೇಕು. ಹೆಣ್ಣುಮಕ್ಕಳಿಗೆ ಸಮಾನ ಗೌರವ ಮತ್ತು ಸ್ವಾತಂತ್ರ್ಯ ದಕ್ಕಬೇಕು ಎಂದು ಅವರು ಹೇಳಿದ ಸಮಾನತೆಯ ಅಂಶಗಳನ್ನು ಪಾಲಿಸುವವರಾಗಬೇಕು. ಪರರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಗೌರವಿಸುವುದನ್ನು ಕಲಿಯಬೇಕು. ಅದೇ ನಾವು ಸೇವಾಲಾಲರನ್ನು ಪೂಜಿಸುವ ವಿಧಾನ.

‘ಕಾಮ ಕ್ರೋಧೇರಿ ಧೂಣಿ ಬಾಳೋ, ಸತ್ಯ ಧರ್ಮೇನಾ ಅಂಗ ಚಲವೋ. ಭೂಕ ಜೇನ ಅನ್ ಖರಾಯೋ, ತರಸ ಜೇನ ಪಾಣಿಪರಯೋ’ – ಎಂದರೆ ‘ಜೀವನದಲ್ಲಿ ಅರಿಷಡ್ವರ್ಗಗಳನ್ನು ಸುಟ್ಟುಹಾಕಿ, ಸತ್ಯಧರ್ಮವನ್ನು ಮುನ್ನಡೆಸಿ, ಹಸಿದವರಿಗೆ ಅನ್ನ ನೀಡಿ, ಬಾಯಾರಿದವರಿಗೆ ನೀರು ಕೊಡಿ.’ ಇದು ಸೇವಾಲಾಲರ ಹಲವು ಸಂದೇಶಗಳಲ್ಲಿ ಒಂದು. ಇಂತಹ ನೀತಿಗಳ ಅನುಸರಣೆಯಲ್ಲಿಯೇ ಸೇವಾಲಾಲರ ಪ್ರಸ್ತುತತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.