ADVERTISEMENT

ಲಗ್ಷುರಿ ಬಸ್‌ನಲ್ಲೇ ಕಳಿಸ್ತೀನಿ ಸಾರ್!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST

ಹಾಸನ: ‘ಬೇರೆ ರಾಜ್ಯಗಳ ಜನಜೀವನ ಹಾಗೂ ಸ್ಥಿತಿಗತಿ ಹೇಗಿದೆ ಅಂತ ತಿಳ್ಕೋಬೇಕು ಸಾರ್ ನೀವೆಲ್ಲ. ಒಂದ್ ಹದಿನೈದ್ ದಿನ ರಜಾ ಹಾಕ್ಕೊಳ್ಳಿ. ಲಗ್ಷುರಿ ಬಸ್‌ನಲ್ಲೇ ಕಳಿಸ್ತೀನಿ. ಸುತ್ತಾಡ್‌ಕೊಂಡ್ ಬರುವ್ರಂತೆ...’ !

ಪತ್ರಕರ್ತರಿಗೆ ಈ ಆಹ್ವಾನ ನೀಡಿದ್ದು ಶಾಸಕ ಎಚ್.ಡಿ.ರೇವಣ್ಣ. ಹಾಸನದಲ್ಲಿ ಮೆಗಾ ಡೇರಿ ಸ್ಥಾಪನೆ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆದಿದ್ದ ಅವರು,  ‘ಯಾವನ್ಯಾವನೋ ಎಷ್ಟೆಷ್ಟೋ ಕೊಳ್ಳೆ ಹೊಡಿತಾನಂತೆ, ಯಾಕ್ ಸರ್ ಹೆದರ್‌ಬೇಕು. ಹೋಗ್‌ಬನ್ನಿ ಹದಿನೈದ್ ದಿನ’ ಅಂದುಬಿಟ್ಟರು.

ಪ್ರವಾಸದ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ ಮಾಧ್ಯಮ ಮಿತ್ರರು ‘ಯಾವನ್ಯಾವನೋ’ ಅಂದಾಗ ಒಬ್ಬರ ಮುಖ ಒಬ್ಬರು ನೋಡಿಕೊಂಡರು. 
‘ಸರಿ ಸರ್ ಮುಂದೆ ಹೇಳಿ’ ಎಂದು ಪತ್ರಕರ್ತರೊಬ್ಬರು ಮಾತು ಮುಂದುವರಿಸಿದಾಗ, ತಮ್ಮ ಆಸ್ಟ್ರೇಲಿಯಾ ಪ್ರವಾಸ ಕಥನವನ್ನು ಸುಂದರವಾಗಿ ಹೆಣೆದರು.

ADVERTISEMENT

‘ಹದಿನೈದು ದಿನ ನಮಗೆ ರಜೆ ಸಿಗಲ್ಲ ಅನ್ನೋದು ರೇವಣ್ಣ ಅವರಿಗೆ ಗೊತ್ತು. ಅದಕ್ಕೇ ಈ ಆಫರ್ ಘೋಷಿಸಿದ್ದಾರೆ’ ಎಂದು ಬಳಿಕ ಮಾಧ್ಯಮ ಮಿತ್ರರೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಿಯಬಿಟ್ಟರು.  

ನಕಲಿ ವಿದ್ಯಾರ್ಥಿ ಹಿಡಿದಿದ್ದು ಯಾರು?

ದಾವಣಗೆರೆ: ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ನಕಲಿ ವಿದ್ಯಾರ್ಥಿಯೊಬ್ಬ ದ್ವಿತೀಯ ಪಿ.ಯು ಪರೀಕ್ಷೆ ಬರೆಯುತ್ತಿದ್ದಾನೆಂಬ ಮಾಹಿತಿ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಸಿಕ್ಕಿತು. ಅವರು ಕೇಂದ್ರಕ್ಕೆ ಹೋಗಿ ಪ್ರಾಂಶುಪಾಲರನ್ನು ವಿಚಾರಿಸಿದರೆ ‘ನಮ್ಮಲ್ಲಿ ಅಂತಹದ್ದು ನಡೆಯಲ್ಲ’ ಎಂದು ಮಾತು ಮುಂದುವರಿಸುವುದಕ್ಕೆ ನಿರಾಕರಿಸಿದರು.

ರಿಜಿಸ್ಟರ್ ನಂಬರ್ ಕೊಟ್ಟಾಗ, ‘ಇದು ನೀವು ಹೇಳಿದ ರೂಮ್‌ನಲ್ಲಿ ಬರುವುದಿಲ್ಲ. ಆದರೆ, ಪರಿಶೀಲಿಸುವೆ’ ಎಂದು ಉಪನ್ಯಾಸಕರೊಬ್ಬರನ್ನು ಕಳುಹಿಸಿದರು. ಅವರು, ‘ಈ ನಂಬರ್‌ನಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದಾಳೆ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಸಾಗಹಾಕಲು ಮುಂದಾದರು.

ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯ ಹೆಸರು, ಅವನ ಬದಲಿಗೆ ಬರೆಯುತ್ತಿದ್ದ ವಿದ್ಯಾರ್ಥಿಯ ಹೆಸರು, ಪರೀಕ್ಷಾ ಕೊಠಡಿ ಸಂಖ್ಯೆ ಹೇಳಿದರೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ಇದೇ ವೇಳೆಗೆ, ಇದೇ ಮಾಹಿತಿ ಹಿಡಿದು ಪೊಲೀಸರು ಬಂದರು. ಅವರಿಗೂ ಪ್ರಾಂಶುಪಾಲರು, ಉಪನ್ಯಾಸಕರಿಂದ ಇದೇ ಉತ್ತರ ಬಂತು.

‘ರಿಜಿಸ್ಟರ್ ನಂಬರ್ ಹಿಂದೆಮುಂದೆ ಆಗಿರಬಹುದು. ನಕಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿರುವುದಂತೂ ಖಚಿತ. ಮತ್ತೊಮ್ಮೆ ಪರಿಶೀಲಿಸಿ’ ಎಂದು ಪಟ್ಟು ಹಿಡಿದಾಗ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೋಗಿ ಆ ನಕಲಿ ವಿದ್ಯಾರ್ಥಿಯನ್ನು ಹಿಡಿದು ತಂದರು. ಆತ ಎಲ್ಲರ ಕಾಲಿಗೆ ಬೀಳುತ್ತಿದ್ದ. ತಕ್ಷಣಕ್ಕೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೂ ಕೇಂದ್ರಕ್ಕೆ ಬಂದರು.

‘ಈಗ ಈ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಬೇಕು. ಮೊದಲು ಈತನನ್ನು ಹಿಡಿದವರು ಯಾರು?’ ಎಂದು ಅಧಿಕಾರಿ ಕೇಳಿದರು. ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಆಗ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಯತ್ತ ಕೈತೋರಿಸಿದರು. ‘ದೂರಿನಲ್ಲಿ ಇವರನ್ನೇ ಸೇರಿಸಿ’ ಎಂದರು ಆ ಅಧಿಕಾರಿ. ಕಕ್ಕಾಬಿಕ್ಕಿಯಾಗುವ ಸರದಿ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಯದಾಗಿತ್ತು. 
 

ಕುರ್ಚಿಗಾಗಿ ಪತ್ರಕರ್ತರ ಪರದಾಟ!

ಯಾದಗಿರಿ: ಪ್ರೆಸ್‌ ಗ್ಯಾಲರಿ ಇಲ್ಲದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ, ಸಾಮಾನ್ಯ ಸಭೆಗಳು ನಿಗದಿಗೊಂಡರೆ ಅರ್ಧತಾಸು ಮುಂಚಿತವಾಗಿ ಹೋದವರಿಗೆ ಮಾತ್ರ ಕುರ್ಚಿ ಕಾಯಂ. ಇಲ್ಲದಿದ್ದರೆ ಕುರ್ಚಿಗಾಗಿ ಪತ್ರಕರ್ತರಿಗೆ ಪರದಾಟ ತಪ್ಪಿದ್ದಲ್ಲ. ಸಭೆಗಳು ನಡೆದಾಗಲೆಲ್ಲಾ ಪತ್ರಕರ್ತರು ಇರುಸುಮುರುಸು ಅನುಭವಿಸುತ್ತಲೇ ಇರುತ್ತಾರೆ. ಪತ್ರಕರ್ತರಿಗಾಗಿ ಹಾಕಿದ ಕುರ್ಚಿಯಲ್ಲಿ ಅಧಿಕಾರಿಗಳು ಆಸೀನರಾಗಿ ಪತ್ರಕರ್ತರು ಮೂಲೆಗುಂಪಾಗುವುದು ಕೂಡ ಇಲ್ಲಿ ಸಾಮಾನ್ಯ.

ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಪತ್ರಕರ್ತರಿಗೆ ಹಾಕಿದ್ದ ಕುರ್ಚಿಗಳನ್ನು ಎಳೆದುಕೊಂಡು ಅಧಿಕಾರಿಗಳು, ಅವರ ಸಹಾಯಕ ಸಿಬ್ಬಂದಿ ಸುಖಾಸೀನರಾಗಿದ್ದರು. ಸಭೆಗೆ ಬಂದ ಪತ್ರಕರ್ತರು ಕುರ್ಚಿಗಳಿಲ್ಲದೇ ಪರದಾಡಬೇಕಾಯಿತು.

ಗತಿಯಿಲ್ಲದೆ ತೀರಾ ಹಿಂದೆ ನಿಂತುಕೊಂಡೇ ವರದಿ ಬರೆದುಕೊಳ್ಳತೊಡಗಿದರು. ಸಭೆ ಆರಂಭಗೊಂಡು ಒಂದು ತಾಸಿನ ನಂತರ ಅಧಿಕಾರಿಯೊಬ್ಬರು ನಾಪತ್ತೆಯಾಗಿ ಕುರ್ಚಿ ಖಾಲಿಯಾಯಿತು. ನಿಂತುಕೊಂಡೇ ಇದ್ದ  ಹಿರಿಯ ಪತ್ರಕರ್ತರೊಬ್ಬರು ಖಾಲಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ, ಜಿಲ್ಲಾ ಪಂಚಾಯಿತಿ ಸಿಇಒ ಆಕ್ರೋಶ ವ್ಯಕ್ತಪಡಿಸಿದರು. ‘ಗೋ ಅಹೆಡ್... ಗೋ ಅಹೆಡ್‌... ’ ಎಂದು ಕೂಗಲಾರಂಭಿಸಿದರು.

ಆ ಬಡಪಾಯಿ ಪತ್ರಕರ್ತರು, ‘ಪ್ರೆಸ್‌ ಗ್ಯಾಲರಿ ಎಲ್ಲಿದೆ? ಪತ್ರಕರ್ತರ ಕುರ್ಚೀನ ಅಧಿಕಾರಿಗಳು ಕಬಳಿಸಿದಾಗ ಸುಮ್ನೆ ಇರ್ತೀರಿ... ನಾವ್‌ ಕೂತ್ರೆ ದಬಾಯಿಸ್ತೀರಿ...’ ಎಂದು ನೋವು ತೋಡಿಕೊಂಡರು. ಬಳಿಕ ಅವರನ್ನು ಬೆಂಬಲಿಸಿ ಎಲ್ಲ ಪತ್ರಕರ್ತರೂ ಸಭೆಯಿಂದ ಹೊರ ನಡೆದರು.

ಪತ್ರಕರ್ತರ ನಿರ್ಗಮನ ಕೆಲ ಅಧಿಕಾರಿಗಳಿಗೆ ಖುಷಿ ನೀಡಿತು. ಪ್ರಚಾರಕ್ಕಾಗಿ ಸಭೆಯಲ್ಲಿ ನಾಟಕೀಯ ಪ್ರಶ್ನಾವಳಿ ಎಸೆದು ಭಾರೀ ಗದ್ದಲ, ಕೋಲಾಹಲ ಸೃಷ್ಟಿಸುವ ಜಿಲ್ಲಾ ಪಂಚಾಯಿತಿ ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು ಮಾತ್ರ ಪತ್ರಕರ್ತರಿಲ್ಲದ್ದರಿಂದ ಸಪ್ಪೆಮೋರೆ ಹಾಕಿಕೊಂಡೇ ಸಭೆಯಲ್ಲಿ ಕುಳಿತಿದ್ದರು! 

– ಕೆ.ಎಸ್‌.ಸುನಿಲ್, ಪ್ರಕಾಶ ಕುಗ್ವೆ, ಮಲ್ಲೇಶ್ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.