ಬೆಂಗಳೂರು: ಹೊರಮಾವು ಅಗರ ಕೆರೆ ಉಳಿವಿಗಾಗಿ ಶಾಸಕ ಭೈರತಿ ಬಸವರಾಜು ಅವರ ನೇತೃತ್ವದಲ್ಲಿ ಹೊರಮಾವು ವಾರ್ಡ್‌ನ ನಿವಾಸಿಗಳು ಭಾನುವಾರ ಕಾಲ್ನಡಿಗೆ ಜಾಥಾ ನಡೆಸಿದರು.
ಇಲ್ಲಿನ ಅಪಾರ್ಟ್‌ಮೆಂಟ್ ನಿವಾಸಿಗಳು ಭಿತ್ತಿಪತ್ರಗಳನ್ನು ಹಿಡಿದು ಕೆರೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದರು.
ಭೈರತಿ ಬಸವರಾಜು ಮಾತನಾಡಿ, ‘₹3ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ. ನಡಿಗೆ ಪಥ, ವಿದ್ಯುತ್ ದೀಪ ಸೇರಿದಂತೆ ಕೆರೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲಾಗುತ್ತದೆ’ ಎಂದರು.
‘ಹೊರಮಾವು ಅಗರ ಕೆರೆ ಉಳಿವಿಗಾಗಿ ಈ ಭಾಗದ ಪ್ರತಿಯೊಬ್ಬ ನಾಗರಿಕನೂ ಮುಂದಾಗಬೇಕು. ಪರಿಸರ ಉಳಿವಿಗೆ ನಿವಾಸಿಗಳು ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.
‘15 ವರ್ಷಗಳ ಹಿಂದೆ ಕೆರೆಯಲ್ಲಿ ಶುದ್ಧ ನೀರಿತ್ತು. ಈ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ಕ್ರಮೇಣ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈಗ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರನ್ನು ಕೆರೆಗೆ ಬಿಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹೊರಮಾವು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ‘ಕಲುಷಿತಗೊಂಡಿರುವ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಕೆರೆ ದಂಡೆಯ ಮೇಲೆ ಕಸವನ್ನು ಸುರಿಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.