ADVERTISEMENT

ಮಳೆನೀರು ಬಳಸುವ ಮಾದರಿ ಕುಟುಂಬ

ಬರಗಾಲದಲ್ಲೂ ಅರಳಿದ ಹೂಗಳು, ಮಾಗಿದ ಹಣ್ಣುಗಳು, ಮನೆಯೆಲ್ಲಾ ಹಸಿರು ತೋರಣ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:06 IST
Last Updated 4 ಮೇ 2017, 7:06 IST
ಮನೆಯ ಆವರಣದಲ್ಲಿ ಇರುವ ಗಿಡ, ಮರಗಳ ಬಗ್ಗೆ ಮಾಹಿತಿ ನೀಡುತ್ತಿರುವ ಕೃಷ್ಣ ಕುಟುಂಬ (ಮೇಲಿನ ಚಿತ್ರ). ಕೈಪಂಪ್‌ನಿಂದ ಮಳೆನೀರು ಬಳಸಿಕೊಳ್ಳುತ್ತಿರುವುದು (ಬಲ ಚಿತ್ರ)
ಮನೆಯ ಆವರಣದಲ್ಲಿ ಇರುವ ಗಿಡ, ಮರಗಳ ಬಗ್ಗೆ ಮಾಹಿತಿ ನೀಡುತ್ತಿರುವ ಕೃಷ್ಣ ಕುಟುಂಬ (ಮೇಲಿನ ಚಿತ್ರ). ಕೈಪಂಪ್‌ನಿಂದ ಮಳೆನೀರು ಬಳಸಿಕೊಳ್ಳುತ್ತಿರುವುದು (ಬಲ ಚಿತ್ರ)   

ಮಳವಳ್ಳಿ: ಸತತ ಬರದಿಂದ ಕುಡಿಯುವ ನೀರಿಗೂ ತಾತ್ವಾರ ಪಡುವ ಸ್ಥಿತಿ ಎಲ್ಲೆಡೆ ಇದೆ. ಆದರೆ, ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು, ನೀರಿನ ಸಮಸ್ಯೆಯಿಲ್ಲದೆ ಹೇಗೆ ಬದುಕಬಹುದು ಎಂಬುದಕ್ಕೆ ತಾಲ್ಲೂಕಿನ ಮಾಗನೂರು ಗ್ರಾಮದ ಈ ಕುಟುಂಬವೇ ಉದಾಹರಣೆ.

ಮಾಗನೂರು ಗ್ರಾಮದಲ್ಲಿ ವಾಸವಿರುವ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ.ವಿ.ಕೃಷ್ಣ ಅವರ ಕುಟುಂಬ ನೀರಿಗೆ ಪರದಾಡುವ ಗೋಜಿಗೆ ಹೋಗಿಲ್ಲ. ಏಕೆಂದರೆ, ಮಳೆನೀರು ಸಂಗ್ರಹ ಮಾಡಿ ಕೊಂಡಿದ್ದಾರೆ ಅವರು. ಕನಿಷ್ಠ ಎರಡು ವರ್ಷಕ್ಕೆ ಸಾಲುವಷ್ಟು ನೀರು ಸಂಗ್ರಹ ವಾಗಿದೆ ಎಂದರೆ ನಂಬಲೇಬೇಕು.

ಗ್ರಾಮದಲ್ಲಿ 10 ಗುಂಟೆ ಸ್ಥಳವಿದ್ದು, ಅದರಲ್ಲಿ  ಮನೆ ನಿರ್ಮಿಸಿ, ಮಳೆನೀರ ಸಂಗ್ರಹಿಸಿ, ಅದೇ ನೀರನ್ನು ನಿತ್ಯದ ಕೆಲಸ ಹಾಗೂ ತೋಟಕ್ಕೂ ಬಳಸುತ್ತಿದ್ದಾರೆ.
ಸಿಮೆಂಟ್‌ ಮನೆ ಮುಂದೆ ಗೋಪುರಾಕಾರದಲ್ಲಿ ಚಾವಣಿ ಹಾಕಿಸಿ ಮಳೆ ನೀರು ವ್ಯರ್ಥವಾಗದಂತೆ ಮಾಡಿದ್ದಾರೆ.

ಮಳೆ ಬಿದ್ದಾಗ ನೀರೆಲ್ಲಾ ಒಂದು ತೊಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ಅಲ್ಲಿಂದ ಸುಮಾರು 8 ಅಡಿ ಅಗಲ, 12 ಅಡಿ ಉದ್ದ ,10 ಅಡಿ ಆಳದ ಸುಮಾರು 24 ಸಾವಿರ ಲೀಟರ್ ನೀರು ಸಂಗ್ರಹವಾಗುವ ಸಂಪ್‌ಗೆ ತುಂಬುತ್ತದೆ. ಈ ಸಂಪ್‌ನಿಂದ ಒಂದು ಕೈಪಂಪ್‌ ಮೂಲಕ ನೀರು ತೆಗೆದುಕೊಂಡು ಬಳಸಿಕೊಳ್ಳುವುದು ಇವರ ಜಾಣ್ಮೆ.



‘ಮಳೆ ನೀರು ನಮ್ಮ ಜೀವನ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ. ಸಂಗ್ರಹವಾದ ನೀರನ್ನು ಮಿತವಾಗಿ ಬಳಸಿದರೆ ಯಾವುದೇ ತೊಂದರೆ ಇಲ್ಲ’ ಎನ್ನುತ್ತಾರೆ ಎಂ.ವಿ.ಕೃಷ್ಣ ಹಾಗೂ ಪತ್ನಿ ಕಿರಣ.

ಬಹಳಷ್ಟು ಜನ ವೈಭೋಗದ ಮನೆ ಕಟ್ಟಿಕೊಳ್ಳುತ್ತಾರೆ. ಅದರ ಜೊತೆಗೇ  ಮೂಲಭೂತವಾಗಿ ಅಗತ್ಯವುಳ್ಳ ನೀರಿನ ಸಂಗ್ರಹಕ್ಕೂ ಆದ್ಯತೆ ಕೊಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗಳಿಗೆ ನೀರೆ ದೊರೆಯುವುದಿಲ್ಲ. ಸರ್ಕಾರಗಳು ಕೂಡ ಬೋರ್‌ವೆಲ್‌ ಕೊರೆದು ಅಂತರ್ಜಲಕ್ಕೆ ಕೈಹಾಕುವ ಬದಲು ಮಳೆ ನೀರು ಸಂಗ್ರಹಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುವುದು ಅವರ ಕಾಳಜಿ.

ಮನೆಯ ಆವರಣದಲ್ಲಿ ತೆಂಗಿನಮರ, ವಿವಿಧ ರೀತಿಯ ದಾಸವಳ, ಪರಂಗಿ, ಜೇನುಬಾಳೆ, ತರಕಾರಿಬಾಳೆ, ನುಗ್ಗೆಸೊಪ್ಪು, ನಕ್ಷತ್ರ ನೇರಳೆ, ಕಮದ್ರಾಕ್ಷಿ, ಚಕ್ರಮುನಿ, ಬಿಂಬುಳಿ, ತೊಂಡೆಕಾಯಿ, ಗೇರುಹಣ್ಣು, ಹಿಪ್ಪಲಿ, ಬಾದಾಮಿ, ಕರಿಮೆಣಸು, ಆಸ್ಟ್ರೀಯನಿಂಬೆ, ಇರಳಿಕಾಯಿ, ಬದನೆ, ಹೆಬ್ಬಲಸು, ದೊಡ್ಡಪತ್ರೆ ಸೇರಿದಂತೆ ನೂರಕ್ಕೂ ಹೆಚ್ಚಿನ ಗಿಡಮರಗಳನ್ನು ಬೆಳೆಸಿ ಪೋಷಿಸಿದ್ದಾರೆ. ಇದರಿಂದ ಪರಿಸರಕ್ಕೂ ಕೊಡುಗೆ, ಪಕ್ಷಿ ಸಂಕುಲಗಳು ಸಹ ನೆಲೆ ಮಾಡಿಕೊಂಡಿವೆ. ಸೋಲಾರ್‌ ಅಳವಡಿಸಿಕೊಳ್ಳುವ ಮೂಲಕ ಅವರ ಇಡೀ ಮನೆಯನ್ನು ಪರಿಸರ ಪ್ರಿಯ ಮಾಡಿದ್ದಾರೆ.

ಕೃಷ್ಣ ಉಪನ್ಯಾಸಕ ವೃತ್ತಿಯ ಜೊತೆಗೆ ಸಾಮಾಜಿಕ ಹೋರಾಟ, ಸಾಹಿತ್ಯ, ಫೋಟೊಗ್ರಫಿಯಲ್ಲೂ ಕೃಷ್ಣ ಆಸಕ್ತಿ ಹೆಚ್ಚು. ಅವರ ಹಲವು ಪಕ್ಷಿಚಿತ್ರಗಳು ಪ್ರದರ್ಶನ ಕಂಡಿವೆ. ‘ವಡಬಾಳು’ ಎಂಬ ಕಥಾ ಸಂಕಲನ ಮಹಾರಾಷ್ಟ್ರದ 6ನೇ ತರಗತಿಯ ಪಠ್ಯದಲ್ಲಿ ಅಳವಡಿಕೆ ಯಾಗಿದೆ. ಪರಿಸರ ಪ್ರೇಮದ ಜತೆಗೇ ಕಲಾಕೃಷಿಯೂ ಅವರ ಹವ್ಯಾಸ.
ಎನ್‌.ಪುಟ್ಟಸ್ವಾಮಾರಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT