ADVERTISEMENT

ಕಾಡಿನ ಕೆರೆ: ವನ್ಯಪ್ರಾಣಿಗಳಿಗೆ ಆಸರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:40 IST
Last Updated 21 ಮಾರ್ಚ್ 2018, 19:40 IST
ಯಲ್ಲಾಪುರ ಅರಣ್ಯ ವಿಭಾಗದ ಕಾಡಿನ ಕೆರೆ
ಯಲ್ಲಾಪುರ ಅರಣ್ಯ ವಿಭಾಗದ ಕಾಡಿನ ಕೆರೆ   

ಶಿರಸಿ: ಯಲ್ಲಾಪುರ ಅರಣ್ಯದಲ್ಲಿರುವ ಪ್ರಾಣಿಗಳು ಜೀವಜಲ ಅರಸಿ, ಕಿಲೊಮೀಟರ್‌ಗಟ್ಟಲೆ ಅಲೆದಾಡಬೇಕಾಗಿಲ್ಲ. ಕಾಡಿನ ಕೆರೆಗಳಲ್ಲಿರುವ ಸಮೃದ್ಧಿ ಜಲವನ್ನು ಕುಡಿದು, ಬಾಯಾರಿಕೆ ನೀಗಿಸಿಕೊಳ್ಳಬಹುದು !

ವನ್ಯಜೀವಿ ಸಂರಕ್ಷಣೆ ಯೋಜನೆಯಡಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ರೂಪಿಸಿದ್ದ ಕಾರ್ಯಕ್ರಮದಲ್ಲಿ, ಯಲ್ಲಾಪುರ ಅರಣ್ಯ ವಿಭಾಗವು ಕಳೆದ ಬೇಸಿಗೆಯಲ್ಲಿ ಕಾಡಿನಲ್ಲಿರುವ ಸುಮಾರು 70 ಕೆರೆಗಳ ಹೂಳೆತ್ತಿ, ಅಭಿವೃದ್ಧಿಪಡಿಸಿದೆ. ಪರಿಣಾಮವಾಗಿ ಈ ಬಾರಿ ಬೇಸಿಗೆಯಲ್ಲಿ 45ಕ್ಕೂ ಹೆಚ್ಚು ಕೆರೆಗಳಲ್ಲಿ ನೀರಿದೆ. ಹುಲಿ, ಚಿರತೆ, ಆನೆ, ಜಿಂಕೆ, ಕಾಡುಕೋಣ ಮೊದಲಾದ ವನ್ಯ ಪ್ರಾಣಿಗಳು ಕೆರೆಗೆ ಬಂದು ನೀರು ಕುಡಿದು ಹೋಗುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

‘ಕಾಡು ಪ್ರಾಣಿಗಳು, ಅವು ಇರುವ ಪ್ರದೇಶದಲ್ಲಿಯೇ ನೀರಿಗಾಗಿ ಕಾಯುತ್ತ ನೆಲೆ ನಿಲ್ಲುವುದಿಲ್ಲ. ನೀರು, ಆಹಾರ ಹುಡುಕುತ್ತ ಬಹು ದೂರ ಸಾಗುತ್ತವೆ. ಅವುಗಳ ಸರಹದ್ದಿನಲ್ಲಿ, ಆಹಾರ ದೊರೆತರೆ ಅಲ್ಲಿಯೇ ಉಳಿದುಕೊಳ್ಳುತ್ತವೆ. ಯಲ್ಲಾಪುರ ವಿಭಾಗದಲ್ಲಿ ಕಾಡಿನ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದರಿಂದ, ಹಲವಾರು ಪ್ರಾಣಿಗಳು ನೀರು ಕುಡಿಯಲು ಬರುವುದು ಕಾಣಸಿಗುತ್ತಿದೆ. ಅರಣ್ಯ ಪ್ರದೇಶದ ಸುಮಾರು 30 ಕಡೆಗಳಲ್ಲಿ ಕ್ಯಾಮರಾ ಟ್ರ್ಯಾಪ್ ಹಾಕಲಾಗಿದೆ. ಇದರಲ್ಲಿ ವನ್ಯಪ್ರಾಣಿಗಳ ಚಲನವಲನ, ಅವು ಕೆರೆಗಳ ಕಡೆಗೆ ಹೋಗುವ ದೃಶ್ಯ ಸೆರೆಯಾಗಿದೆ’ ಎನ್ನುತ್ತಾರೆ ಅರಣ್ಯ ವಿಭಾಗದ ಡಿಸಿಎಫ್ ಯತೀಶಕುಮಾರ.

ADVERTISEMENT

‘ನಮ್ಮ ಅರಣ್ಯ ವಿಭಾಗದಲ್ಲಿ ಐದು ಗುಂಟೆಯಿಂದ 3 ಎಕರೆವರೆಗಿನ ಕೆರೆಗಳು ಇವೆ. ಇವುಗಳ ಹೂಳೆತ್ತಿದ್ದರಿಂದ ಹೆಚ್ಚಿನ ಕೆರೆಗಳಲ್ಲಿ ಮಾರ್ಚ್ ತಿಂಗಳು ಕಳೆಯುತ್ತ ಬಂದರೂ ನೀರು ಇದೆ. ವನ್ಯ ಜೀವಿ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ನನಗೆ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಪ್ರೇರಣೆಯಾಯಿತು’ ಎಂದರು.

* ಯಲ್ಲಾಪುರ ಅರಣ್ಯದಲ್ಲಿರುವ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರು ಇರುವುದರಿಂದ ವನ್ಯ ಪ್ರಾಣಿಗಳ ಸಂಚಾರ ಹೆಚ್ಚಾಗಿದೆ.
– ಯತೀಶ ಕುಮಾರ, ಡಿಸಿಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.