ADVERTISEMENT

ಚುರುಮುರಿ: ರಕ್ಷಣೆ ರೂಲ್ಸ್‌

ಸುಮಂಗಲಾ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
ಚುರುಮುರಿ
ಚುರುಮುರಿ   

ಬೆಕ್ಕಣ್ಣ ಬಿಟ್ಟೂಬಿಡದೆ ತಾಲಿಬಾನೀಯರ ಸುದ್ದಿಯನ್ನು ಟೀವಿಯಲ್ಲಿ ನೋಡುತ್ತಿತ್ತು. ಯಾವ್ಯಾವುದೋ ಚಾನೆಲ್ ತಿರುಗಿಸಿ ಮುರುಗಿಸಿ ನೋಡುತ್ತಿತ್ತು, ಏನೋ ಟಿಪ್ಪಣಿ ಮಾಡಿಕೊಳ್ಳುತ್ತಿತ್ತು. ಮಧ್ಯೆ ಮಧ್ಯೆ ‘ಅಷ್ಟೆಲ್ಲ ಲಿಪ್‌ಸ್ಟಿಕ್ ಹಚ್ಚಿಕೋಬಾರದು, ವಳ್ಳೇದಲ್ಲ’, ‘ಸಂಜಿಮುಂದ ಹಂಗೆಲ್ಲ ಅಡ್ಡಾಡಬಾರದು’ ಎಂದೆಲ್ಲ ಮಾತಿನ ವಗ್ಗರಣೆ ಬೇರೆ ಹಾಕುತ್ತಿತ್ತು. ನಾನು ಇಣುಕಲು ಹೋದರೆ ಟಿಪ್ಪಣಿಯನ್ನು ಮುಚ್ಚಿಟ್ಟು
ಕೊಂಡಿತು. ‘ಮತ್ತೇನು ಹೊಸ ಕಾರುಬಾರು ಶುರು ಮಾಡಿದ್ಯಲೇ’ ಎಂದೆ ಕಕ್ಕಾಬಿಕ್ಕಿಯಾಗಿ.

‘ಏನಿಲ್ಲೇಳು... ತಾಲಿಬಾನೀಯರು ಹೆಣ್ಣುಮಕ್ಕಳಿಗೆ ಏನೇನು ಕಟ್ಟುಪಾಡು ವಿಧಿಸ್ಯಾರ, ಅದ್ರಾಗೆ ನಮಗ ಯಾವುವು ಪ್ರಸ್ತುತ ಅನ್ನಿಸ್ತಾವು, ಹಂಥಾವನ್ನೆಲ್ಲ ಪಟ್ಟಿ ಮಾಡಿಕೊಡಂತ ಆರಗ ಅಂಕಲ್ ಹೇಳ್ಯಾರ. ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಾಕೆ ನಾವು ಅಗದಿ ಭಯಂಕರ ಟೊಂಕ ಕಟ್ಟಿ ನಿಂತೀವಿ ಅಂತ ಅಂಕಲ್ ಹೇಳ್ಯಾರ. ಅದಕ್ಕ ಹೆಣ್ಣುಮಕ್ಕಳು ಹೆಂತಾ ಬಟ್ಟಿ ಹಾಕ್ಕೋಬೇಕು, ಎಷ್ಟ್ ಹೊತ್ತಿನ ಮ್ಯಾಗೆ ಬೀದಿವಳಗ ಕಾಲಿಡಬಾರದು, ಯಾರ ಜೋಡಿ ಹೊರಗ ಹೋಗಬಕು, ಯಾರ ಜೋಡಿ ಎಷ್ಟ್ ಮಾತನಾಡಬಕು ಎಲ್ಲಾದಕ್ಕೂ ಪಕ್ಕಾ ರೂಲ್ಸ್ ಮಾಡತಾರಂತ. ಅದಕ್ಕ ತಾಲಿಬಾನೀಯರ ಕಟ್ಟುಪಾಡುಗಳನ್ನು ನೋಡಿ ಪಟ್ಟಿ ಮಾಡಾಕ ಹತ್ತೀನಿ. ಇದ್ನೆಲ್ಲ ಛಲೋತ್ನಾಗೆ ಮಾಡಿಕೊಟ್ಟರೆ, ಯಾವುದಾರ ನಿಗಮಕ್ಕೋ, ಮಂಡಳಿಗೋ ನನ್ನ ಅಧ್ಯಕ್ಷ ಮಾಡ್ತಾರ’ ಬೆಕ್ಕಣ್ಣ ಭಲೇ ಹುಕಿಯಿಂದ ವಿವರಿಸಿತು.

‘ಮಂಗ್ಯಾನಂಥವನೇ... ಬರೀ ತಾಲಿಬಾನೀ ಯರ ರೂಲ್ಸ್ ಪಟ್ಟಿ ಯಾಕಷ್ಟೇ ಮಾಡ್ತೀ, ಮತ್ತ ನಿಮ್ಮ ಮನುಮಾಮಾ ಏನು ಹೇಳ್ಯಾನ ಅದನ್ನು ನೋಡಂಗಿಲ್ಲೇನು. ಮೊದ್ಲು ಗಂಡುಮಕ್ಕಳು ಏನ್ ಮಾಡಬಾರದು, ಹೆಂಗಿರಬಕು ಅಂತ ಪಟ್ಟಿ ಮಾಡಲೇ...’ ಎಂದು ಬೈದೆ.

ADVERTISEMENT

‘ಈಗ ಹೊಸಾ ರೂಲ್ಸ್, ನಿಷೇಧಗಳು ಏನು ಅದಾವು ಅವನ್ನು ನೋಡಿ, ಕಲಿಯೂದಷ್ಟೇ ಉಳಿದೈತಿ. ಗಂಡುಮಕ್ಕಳ ಬಗ್ಗೆ ಎದಕ್ಕ ಚಿಂತೆ ಮಾಡೂದು... ಹೆಂಗಿದ್ರೂ, ಏನೇ ಮಾಡಿದ್ರೂ ಅವ್ರು ಗಂಡುಮಕ್ಕಳು!’ ಎಂದು ಮತ್ತೊಂದು ವಿತಂಡವಾದ ಹೂಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.