ADVERTISEMENT

ಸಂಪಾದಕೀಯ: ಲಾಕ್‌ಡೌನ್‌ ಭಾಗಶಃ ತೆರವು- ಇದು ಮತ್ತಷ್ಟು ಎಚ್ಚರದ ಸಮಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 19:30 IST
Last Updated 14 ಜೂನ್ 2021, 19:30 IST
Sampadakiya_15-6-2021.jpg
Sampadakiya_15-6-2021.jpg   

ಕೊರೊನಾ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಅನ್ನು ರಾಜ್ಯ ಸರ್ಕಾರವು 20 ಜಿಲ್ಲೆಗಳಲ್ಲಿ ಸಡಿಲಿಸಿದೆ. ಸಾಮಾಜಿಕ ಹಾಗೂ ಆರ್ಥಿಕ ಚಟು ವಟಿಕೆಗಳು ಮರಳಿ ಹಳಿಗೆ ಬರುವ ದೃಷ್ಟಿಯಿಂದ ನಿರ್ಬಂಧಗಳ ತೆರವು ಅಗತ್ಯವಾಗಿದ್ದರೂ ಮಾರ್ಗಸೂಚಿಯಲ್ಲಿನ ಕೆಲವು ಅಂಶಗಳು ವಿರೋಧಾಭಾಸಗಳಿಂದ ಕೂಡಿವೆ.

ಸೋಂಕಿನ ಸರಣಿಯನ್ನು ತುಂಡರಿಸುವುದಕ್ಕಾಗಿ ಹೇರಿದ್ದ ನಿರ್ಬಂಧಗಳನ್ನು ಆರ್ಥಿಕ ಪುನಶ್ಚೇತನದ ಉದ್ದೇಶಕ್ಕಾಗಿ ಭಾಗಶಃ ತೆರವುಗೊಳಿಸಲಾಗಿದೆ. ಆದರೆ, ಮಾರ್ಗಸೂಚಿಯ ಕೆಲವು ಅಂಶಗಳು ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿಲ್ಲ. ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಸೀಮಿತವಾಗಿದ್ದ ಅಗತ್ಯ ವಸ್ತುಗಳ ಮಾರಾಟದ ಅವಧಿಯನ್ನು ಮಧ್ಯಾಹ್ನ 2 ಗಂಟೆಯವರೆಗೂ ವಿಸ್ತರಿಸಲಾಗಿದೆ. ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಕೈಗಾರಿಕೆಗಳು ಹಾಗೂ ಶೇ 30ರಷ್ಟು ನೌಕರರೊಂದಿಗೆ ಸಿದ್ಧ ಉಡುಪು ಕಾರ್ಖಾನೆಗಳು ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿರುವ ಸರ್ಕಾರವೇ, ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸದಿರುವ ಮೂಲಕ ಕೈಗಾರಿಕೆಗಳ ಕಾರ್ಯಚಟು ವಟಿಕೆಗಳಿಗೆ ತೊಡಕು ಉಂಟುಮಾಡಿದೆ. ಬಸ್‌ಗಳೇ ಇಲ್ಲದಿದ್ದ ಮೇಲೆ ಕಾರ್ಮಿಕರು ತಾವು ಕೆಲಸ ಮಾಡುವ ಸ್ಥಳಗಳಿಗೆ ಹೋಗುವುದು ಹಾಗೂ ಅಲ್ಲಿಂದ ಮನೆಗೆ ಹಿಂದಿರುಗುವುದು ಸುಲಭಸಾಧ್ಯವಲ್ಲ.

ADVERTISEMENT

ಬೆಂಗಳೂರಿನಂಥ ನಗರಗಳಲ್ಲಿ ಸಣ್ಣ ಕೈಗಾರಿಕೆಗಳು ಮತ್ತು ಗಾರ್ಮೆಂಟ್‌ಗಳ ಬಹುತೇಕ ನೌಕರರು ಸಾರ್ವಜನಿಕ ಸಾರಿಗೆ ಅವಲಂಬಿಸಿರುವುದನ್ನು ಸರ್ಕಾರ ಮರೆತಂತಿದೆ ಅಥವಾ ಟ್ಯಾಕ್ಸಿ ಹಾಗೂ ಆಟೊಗಳಲ್ಲಿ ಓಡಾಡುವ ಸಾಮರ್ಥ್ಯ ಕಾರ್ಮಿಕರ ಲ್ಲಿದೆ ಎಂದು ಭಾವಿಸಿರುವಂತಿದೆ. ಮಾರ್ಗಸೂಚಿಯಲ್ಲಿರುವ ಇಂತಹ ಗೊಂದಲಗಳು ಉದ್ದೇಶಿತ ಪ್ರಯೋಜನಗಳು ಪೂರ್ಣಪ್ರಮಾಣದಲ್ಲಿ ದಕ್ಕದಂತೆ ಮಾಡಿವೆ.ಕಳೆದ ವಾರ ರಫ್ತು ಆಧಾರಿತ ಘಟಕಗಳಿಗೆ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿ ದ್ದರೂ ಈವರೆಗೂ ಅನೇಕ ಉದ್ಯಮಗಳು ಬಾಗಿಲು ತೆರೆದಿಲ್ಲ. ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳುವುದು ಕಷ್ಟವಾಗಿರುವ ಸಂದರ್ಭದಲ್ಲಿ ಬಾಗಿಲು ತೆಗೆ ಯುವುದರಿಂದ ಕಾರ್ಖಾನೆಗಳಿಗೆ ಪ್ರಯೋಜನವಿಲ್ಲ.

ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಹಳ್ಳಿಗಳಿಂದ ನಗರಗಳಿಗೆ ಜನ ದೊಡ್ಡ ಸಂಖ್ಯೆಯಲ್ಲಿ ಮರಳುತ್ತಿದ್ದಾರೆ. ಇದರಿಂದಾಗಿ ಸೋಂಕಿನ ಪ್ರಸರಣದ ಸಾಧ್ಯತೆ ಹೆಚ್ಚಾಗುವ ಅಪಾಯ ಇರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಗರಕ್ಕೆ ಹಿಂದಿರುಗಿದವರನ್ನು ಗಮನದಲ್ಲಿಟ್ಟುಕೊಂಡು ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಪರೀಕ್ಷೆಗಳ ಜೊತೆ ಜೊತೆಯಲ್ಲೇ ಲಸಿಕೆ ಆಂದೋಲನವನ್ನು ಮತ್ತಷ್ಟು ಚುರುಕುಗೊಳಿಸಬೇಕು. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಸಂದರ್ಭದಲ್ಲಿ ಆರೋಗ್ಯ ಸೇವಾ ವಲಯದ ಮೇಲಿನ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿಕ್ಕೆ ಸರ್ಕಾರ ಒತ್ತು ಕೊಡಬೇಕು.

ಕೊರೊನಾದ ಎರಡನೇ ಅಲೆಯನ್ನು ಎದುರಿಸುವ ಸಂದರ್ಭದಲ್ಲಿ ಉಂಟಾದ ಒತ್ತಡ ಹಾಗೂ ಗೊಂದಲ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಜನರ ಆರೋಗ್ಯದ ಜೊತೆಗೆ ಆರ್ಥಿಕ ವ್ಯವಸ್ಥೆಯ ಪುನಶ್ಚೇತನದ ಬಗ್ಗೆಯೂ ಗಮನಹರಿಸಬೇಕಾಗಿದೆ. ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನೀತಿ–ನಿಲುವುಗಳನ್ನು ರೂಪಿಸಬೇಕು. ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಬೇರೆ ಬೇರೆ ಕ್ಷೇತ್ರಗಳ ಪರಿಣತರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ಸು ಪಡೆಯಬೇಕಿದ್ದರೆ ಸರ್ಕಾರದ ಜೊತೆಗೆ ಸಾರ್ವಜನಿಕರೂ ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಲಾಕ್‌ಡೌನ್‌ ಸಡಿಲಿಕೆ ಎನ್ನುವುದು ಸಹಜ ಜೀವನಕ್ಕೆ ಮಾಡಿಕೊಟ್ಟ ಅವಕಾಶ ಎಂದು ಭಾವಿಸಿ ಸಂಭ್ರಮ–ಉತ್ಸವಗಳಲ್ಲಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಲಾಕ್‌ಡೌನ್‌ ನಿರ್ಬಂಧ ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರ್ಥಿಕ ಪುನಶ್ಚೇತನದ ಉದ್ದೇಶ ಹೊಂದಿದೆಯೇ ಹೊರತು ಮೋಜು ಮನರಂಜನೆಯನ್ನಲ್ಲ. ಈ ಕಟು ವಾಸ್ತವವನ್ನು ಮರೆಯದೆ ನಾಗರಿಕರು ಜವಾಬ್ದಾರಿಯಿಂದ ವರ್ತಿಸುವುದು ಅಗತ್ಯ. ಕೊಂಚ ಎಚ್ಚರ ತಪ್ಪಿದರೂ ಕೊರೊನಾ ಸೋಂಕಿನ ಮತ್ತೊಂದು ಅಲೆಯನ್ನು ಆಹ್ವಾನಿಸಿದಂತಾಗುತ್ತದೆ ಮತ್ತು ಆಗ ಸರ್ಕಾರವು ಮತ್ತೆ ಲಾಕ್‌ಡೌನ್‌ ಮೊರೆಹೋಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆ ಅಪಾಯಕ್ಕೆ ಎಡೆ ಮಾಡಿಕೊಡದ ವಿವೇಕವನ್ನು ಸಮಾಜ ಮತ್ತು ಸರ್ಕಾರ ಪ್ರದರ್ಶಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.