ADVERTISEMENT

ಹಿಂದಿಗಿಂತಲೂ ಅಧಿಕ ಅಕ್ರಮ

ಫಟಾಫಟ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 20:11 IST
Last Updated 29 ನವೆಂಬರ್ 2019, 20:11 IST
ಸಂಜೀವ್ ಕುಮಾರ್‌
ಸಂಜೀವ್ ಕುಮಾರ್‌   

ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ಸಂದರ್ಶನ

ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಅಬ್ಬರದ ಈ ಚುನಾವಣೆಯ ನಿರ್ವಹಣೆ ಸವಾಲು ಎನಿಸಿದೆಯೇ?

ಸವಾಲು ನಿಜ, ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಅದನ್ನು ನಿಭಾಯಿಸಲು ಚುನಾವಣಾ ಆಯೋಗ ಸಮರ್ಥವಾಗಿದೆ ಮತ್ತು ದಕ್ಷವಾಗಿದೆ.

ADVERTISEMENT

ದಕ್ಷ ಎನ್ನುತ್ತೀರಿ, ಆದರೆ ಚುನಾವಣಾ ಅಕ್ರಮಗಳ ಸಂಖ್ಯೆ ಬೆಚ್ಚಿ ಬೀಳಿಸುವಷ್ಟು ಹೆಚ್ಚುತ್ತಲೇ ಇದೆಯಲ್ಲ?

ಇದೇ ನನಗೆ ಅಚ್ಚರಿ ತಂದಿರುವುದು. ಈ ಚುನಾವಣೆಯಲ್ಲಿ ವಶಪಡಿಸಿಕೊಂಡಿರುವ ನಗದು ಮತ್ತಿತರ ವಸ್ತುಗಳ ಪ್ರಮಾಣ ಗಾಬರಿ ಬೀಳಿಸುತ್ತದೆ. ಇದು, 2013ರಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಹಣಕ್ಕಿಂತಲೂ ಅಧಿಕ. ಆರು ವರ್ಷಗಳ ಹಿಂದೆ ವಶಪಡಿಸಿಕೊಂಡ ಅಕ್ರಮ ನಗದು ಒಟ್ಟು ₹ 5 ಕೋಟಿ. ಈ ಚುನಾವಣೆಯಲ್ಲಿ ಸುಮಾರು ₹ 3 ಕೋಟಿಯಷ್ಟು ನಗದು ಸಹಿತ ಸುಮಾರು
₹ 8 ಕೋಟಿ ಮೌಲ್ಯದ ಮದ್ಯ, ವಾಹನ, ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತದಾನಕ್ಕೆ ಇನ್ನೂ 5 ದಿನ ಬಾಕಿ ಇದೆ. ಇನ್ನಷ್ಟು ದುಡ್ಡು, ಮದ್ಯ ಸಿಗಬಹುದು (2018ರ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಅಕ್ರಮ ಹಣದ ಮೊತ್ತ ₹ 41.48 ಕೋಟಿ).

ಹಲವು ಕ್ಷೇತ್ರಗಳಲ್ಲಿ ಚಿನ್ನದ ಉಂಗುರಗಳನ್ನು ಹಂಚಲಾಗುತ್ತಿದೆ ಎಂಬ ಆರೋಪವಿದೆ...?

ಇದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿದ್ದಾರೆ. ಅಂತಹ ಹಂಚಿಕೆ ನಡೆಯುತ್ತಿಲ್ಲ ಎಂದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸೂಕ್ಷ್ಮ ನಿಗಾ ಇರಿಸಲಾಗಿದೆ. ಈ ಸಂಬಂಧದ ತನಿಖಾ ವರದಿ ಡಿ. 4ರಂದು ಸಲ್ಲಿಕೆಯಾಗಲಿದೆ.

ಕೆಲವು ದೊಡ್ಡ ವ್ಯಕ್ತಿಗಳು ಕಾನೂನನ್ನು ಉಲ್ಲಂಘಿಸುತ್ತಲೇ ಇರುತ್ತಾರಲ್ಲ?

ಕಾನೂನು ಎಲ್ಲರಿಗೂ ಒಂದೇ. ಜಾತಿ ಹೆಸರಿನಲ್ಲಿ ಮತ ಕೇಳಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧವೇ ದೂರು ಬಂದಿತ್ತು. ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಗೃಹ ಸಚಿವರ ಕಾರು ನಿಲ್ಲಿಸದೇ ಹೋದ ಪ್ರಕರಣದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಅದೇ ರೀತಿ ಹಲ್ಲೆ ನಡೆಸಿದ ಪ್ರಕರಣಗಳಲ್ಲೂ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ.

ಬರಬರುತ್ತ ಚುನಾವಣೆಯ ಪಾವಿತ್ರ್ಯ ಕೆಡುತ್ತಿದೆ ಅನಿಸುತ್ತಿದೆಯೇ?

ದಾಖಲೆಗಳೇ ಅದನ್ನು ಹೇಳುತ್ತಿವೆಯಲ್ಲ? ನ್ಯಾಯಸಮ್ಮತ ಚುನಾವಣೆ ನಡೆಸುವುದೇ ಆಯೋಗದ ಧ್ಯೇಯ‌. ಅದಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ.

ಎಂ.ಜಿ.ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.