ADVERTISEMENT

ಆನೆ ಬಂದು ನಿಂತಿರುವಾಗ...

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:22 IST
Last Updated 15 ಸೆಪ್ಟೆಂಬರ್ 2021, 20:22 IST

‘ಹಿಂದಿ ಏಕತಾ ದಿವಸ’ ಆಚರಣೆಯಿಂದ ಹಿಂದಿ ಹೇರಿಕೆ ಆಗುತ್ತದೆ ಎಂಬ ಕಾರಣಕ್ಕೆ ಕನ್ನಡ ಸಂಘಟನೆಗಳು ತೀವ್ರ ಪ್ರತಿಭಟನೆ ಮಾಡುತ್ತಿವೆ. ಯಾವುದು ಹೇರಿಕೆ, ಯಾವುದು ಹೇರಿಕೆ ಅಲ್ಲ ಎಂದು ಅರಿಯದಷ್ಟು ಕನ್ನಡಿಗ ಹಿಂದುಳಿದಿರುವುದು ನನ್ನ ಮನೋವ್ಯಥೆಯಾಗಿದೆ. ಪ್ರಾತಃಕಾಲದಿಂದ ಸಂಧ್ಯಾಕಾಲದ ದಿನಂಪ್ರತಿ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಅನ್ಯ ಸಂಸ್ಕೃತಿಯೇ ಪ್ರತಿಯೊಬ್ಬ ಕನ್ನಡಿಗನ ಮನೆ ಮನ ಮುಟ್ಟುತ್ತಿದೆಯಲ್ಲ! ಇದು ಹೇರಿಕೆಯಲ್ಲವೇ? ಕಲ್ಯಾಣಮಂಟಪದಲ್ಲಿ ಕುಳಿತು ಉಣ್ಣುವ ಅದೆಷ್ಟು ಮಕ್ಕಳ ಬಾಯಲ್ಲಿ ‘ಅನ್ನ’ ಎಂಬ ಪದ ಬರುತ್ತದೆ? ತಂದೆ ತಾಯಂದಿರನ್ನು ಕನ್ನಡದ ಬಹುತೇಕ ಮಕ್ಕಳು ‘ಅಪ್ಪ, ಅಮ್ಮ’ ಎಂದು ಕರೆಯುತ್ತಾರೆಯೇ?

ಭಾರತದ ಪ್ರಧಾನಿ ಗದ್ದುಗೆ ಏರಿದ ಕನ್ನಡಿಗ ಎಚ್‌.ಡಿ.ದೇವೇಗೌಡರು ಹಿಂದಿ ಬಾರದ ಕಾರಣಕ್ಕೆ ಮೂದಲಿಕೆಗೆ ಒಳಗಾದಂತೆ ಮತ್ತೆಷ್ಟು ಕನ್ನಡಿಗರು ಅಪಮಾನಿತರಾಗಬೇಕು? ಒಕ್ಕೂಟ ವ್ಯವಸ್ಥೆಯಲ್ಲಿ ಹೆಚ್ಚು ರಾಜ್ಯಗಳು ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಿವೆಯೆಂದರೆ, ಅದು ಆ ಭಾಷೆಗಿರುವ ಶಕ್ತಿ ಎಂಬುದನ್ನು ಗಮನಿಸಬೇಕಾಗಿದೆ. ಪರಿಸ್ಥಿತಿ ಹೀಗಿರುವಲ್ಲಿ, ಒಂದು ದಿನದ ಹಿಂದಿ ಆಚರಣೆ ಹೇರಿಕೆಯಾಗಿ ಹೇಗೆ ಕಾಣುತ್ತದೆ? ಬಾಗಿಲಲ್ಲಿ ಈಗಾಗಲೇ ಆನೆ ಬಂದು ನಿಂತಿರುವಾಗ ಬಾಲಕ್ಕೆ ಕೊಸರಾಡಿದರೆ ಅದು ಪ್ರಾಯೋಗಿಕ ಅಲ್ಲ. ಕನ್ನಡ ನಿತ್ಯ ಉಸಿರಾಡುವ ಹಾಗೆ ಅರಿವು, ಅಧ್ಯಯನ, ಅರ್ಹತೆ ಆಧಾರದ ಮೇಲೆ ಪ್ರಯೋಗ ಆಗಬೇಕು.

– ಆರ್.ವೆಂಕಟರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.