ADVERTISEMENT

ಭಾವಿನಾ: ಪ್ಯಾರಾಲಿಂಪಿಕ್ಸ್‌ನ ಬೆಳ್ಳಿ ಬೆಳಕು

ಪದಕ ಗೆದ್ದ ಭಾರತದ ಮೊದಲ ಅಂಗವಿಕಲ ಮಹಿಳಾ ಕ್ರೀಡಾಪಟು; ಯಿಂಗ್ ಜೌಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 9:43 IST
Last Updated 29 ಆಗಸ್ಟ್ 2021, 9:43 IST
ಭಾವಿನಾ ಬೆನ್ ಅವರ ತಾಯಿ ನಿರಂಜನಾ ಬೆನ್ (ಮಧ್ಯ) ಗ್ರಾಮಸ್ಥರೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಭಾವಿನಾ ಬೆನ್ ಅವರ ತಾಯಿ ನಿರಂಜನಾ ಬೆನ್ (ಮಧ್ಯ) ಗ್ರಾಮಸ್ಥರೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಟೋಕಿಯೊ:ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಭಾವಿನಾ ಬೆನ್ ಪಟೇಲ್ ಅವರ ಕನಸು ಕೈಗೂಡಲಿಲ್ಲ. ಆದರೆ ಟೇಬಲ್ ಟೆನಿಸ್‌ನಲ್ಲಿ ಬೆಳ್ಳಿ ಪದಕ ಗಳಿಸಿ ಇತಿಹಾಸ ಬರೆದರು. ಈ ಬಾರಿಯ ಕೂಟದಲ್ಲಿ ಭಾರತದ ಪದಕದ ಅಭಿಯಾನವನ್ನು ಆರಂಭಿಸಿದರು.

2011ರಲ್ಲಿ ಪಿಟಿಟಿ ಥಾಯ್ಲೆಂಡ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ ಮತ್ತು 2013ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗಳಿಸಿದ್ದರು.

ಭಾನುವಾರ ನಡೆದ ಕ್ಲಾಸ್–4 ವಿಭಾಗದ ಫೈನಲ್ ಹಣಾಹಣಿಯಲ್ಲಿ ಭಾವಿನಾ ಬೆನ್ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಚೀನಾದ ಯಿಂಗ್ ಜೌ ಎದುರು7-11, 5-11, 6-11ರಲ್ಲಿ ಸೋತರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳಾ ಕ್ರೀಡಾಪಟು ಎನಿಸಿಕೊಂಡರು. ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ADVERTISEMENT

ಭಾರತ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ, ದೀಪಾ ಮಲಿಕ್ ಕಳೆದ ಬಾರಿ ರಿಯೊ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಗೆದ್ದು ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಶ್ರೇಯಸ್ಸು ತಮ್ಮದಾಗಿಸಿಕೊಂಡಿದ್ದರು.

ಲಂಡನ್‌ ಮತ್ತು ಬೀಜಿಂಗ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿರುವ ಯಿಂಗ್ ಜೌ ಕೇವಲ 19 ನಿಮಿಷಗಳಲ್ಲಿ ಭಾವಿನಾ ಅವರನ್ನು ಮಣಿಸಿದರು.

‘ಪದಕ ಗೆಲ್ಲಲು ಸಾಧ್ಯವಾದದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಜೊತೆಗೆ, ಚಿನ್ನ ಗೆಲ್ಲಲು ಆಗಲಿಲ್ಲ ಎಂಬ ಬೇಸರವೂ ಇದೆ. ಮುಂದಿನ ಬಾರಿ ಯಿಂಗ್ ಜೌ ಎದುರು ಸೆಣಸುವಾಗ ಇನ್ನಷ್ಟು ಬಲಶಾಲಿಯಾಗಿ ಕಣಕ್ಕೆ ಇಳಿಯಲಿದ್ದೇನೆ’ ಎಂದು ಭಾವಿನಾ ಹೇಳಿದರು. ಗುಂಪು ಹಂತದ ಮೊದಲ ಹಣಾಹಣಿಯಲ್ಲೂ ಭಾವಿನಾ ಅವರು ಯಿಂಗ್ ಎದುರು ಸೋತಿದ್ದರು.

ಭಾವಿನಾ ಅವರಿಗೆ ಈಗ 34 ವರ್ಷ. ವ್ಹೀಲ್‌ಚೇರ್‌ನಲ್ಲಿ ಆಡುವ ಅವರಿಗೆ ಕಳೆದ ಬಾರಿ ದಾಖಲೆಪತ್ರಗಳಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಒಲಿಂಪಿಕ್ಸ್ ಟಿಕೆಟ್ ಕೈತಪ್ಪಿತ್ತು.

ಆರಂಭದಿಂದಲೇ ಯಿಂಗ್ ಮೇಲುಗೈ

ಪಂದ್ಯದಲ್ಲಿ ಯಿಂಗ್ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಹೀಗಾಗಿ ಭಾವಿನಾ ಅವರಿಗೆ ತಮ್ಮ ತಂತ್ರಗಳನ್ನು ಯಶಸ್ವಿಯಾಗಿ ಬಳಸಲು ಆಗಲಿಲ್ಲ. ಆರು ಬಾರಿಯ ವಿಶ್ವ ಚಾಂಪಿಯನ್ ಯಿಂಗ್ 12ನೇ ರ‍್ಯಾಂಕ್‌ನ ಭಾರತದ ಆಟಗಾರ್ತಿ ಚೆಂಡು ರಿಟರ್ನ್ ಮಾಡಲು ಆಗದಷ್ಟು ಪ್ರಬಲ ಹೊಡೆತಗಳೊಂದಿಗೆ ಮಿಂಚಿದರು. ಆರಂಭದ ಗೇಮ್‌ನಲ್ಲಿ ಇಬ್ಬರೂ 3–3ರ ಸಮಬಲ ಸಾಧಿಸಿದ್ದರು. 4–7ರ ಹಿನ್ನಡೆಯಲ್ಲಿದ್ದಾಗ ಅಮೋಘ ಸರ್ವ್‌ ಮೂಲಕ ಭಾವಿನಾ ಮಿಂಚಿದರು. ಆದರೆ ಚೀನಾ ಆಟಗಾರ್ತಿ ತಕ್ಷಣ ತಿರುಗೇಟು ನೀಡಿದರು. ಎರಡನೇ ಗೇಮ್‌ ಏಕಪಕ್ಷೀಯವಾಗಿತ್ತು. ಆರಂಭದಲ್ಲಿ 1–7ರ ಹಿನ್ನಡೆಯಲ್ಲಿದ್ದ ಭಾವಿನಾ ನಂತರ ಸತತ ಮೂರು ಪಾಯಿಂಟ್ ಗಳಿಸಿ ನಿರೀಕ್ಞೆ ಮೂಡಿಸಿದರು. ಆದರೆ ಯಿಂಗ್ ಛಲ ಬಿಡದೆ 2–0 ಮುನ್ನಡೆ ಸಾಧಿಸಿದರು.

ನಿರ್ಣಾಯಕ ಗೇಮ್‌ನಲ್ಲಿ ಭಾವಿನಾ ಪುಟಿದೇಳುವ ಲಕ್ಷಣ ತೋರಿ 5–5ರ ಸಮಬಲ ಸಾಧಿಸಿದರು. ಆದರೆ ಭರವಸೆಯಿಂದಲೇ ಆಡಿದ ಯಿಂಗ್‌ ಪಾಯಿಂಟ್‌ಗಳನ್ನು ಕಲೆ ಹಾಕುತ್ತಲೇ ಸಾಗಿದರು. ಮೋಹಕ ಬ್ಯಾಕ್‌ಹ್ಯಾಂಡ್ ಶಾಟ್ ಮೂಲಕ ಗೇಮ್ ಮತ್ತು ಪಂದ್ಯ ಗೆದ್ದು ಸಂಭ್ರಮಿಸಿದರು.

12ನೇ ತಿಂಗಳಲ್ಲಿ ಕಾಡಿದ ಪೊಲಿಯೊ

ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಸುಂಧಿಯಾ ಗ್ರಾಮದಲ್ಲಿ ಜನಿಸಿದ ಭಾವಿನಾ 12 ತಿಂಗಳ ಮಗುವಾಗಿದ್ದಾಗ ಪೋಲಿಯೊ ಇರುವುದು ಪತ್ತೆಯಾಗಿತ್ತು. 13 ವರ್ಷಗಳ ಹಿಂದ ಕ್ರೀಡಾ ಜೀವನ ಆರಂಭಿಸಿದ ಅವರು ಅಹಮದಾಬಾದ್‌ನ ವಸ್ತ್ರಾಪುರ್ ಪ್ರದೇಶದಲ್ಲಿರುವ ಅಂಧರ ಸಂಸ್ಥೆಯಲ್ಲಿ ಟೇಬಲ್ ಟೆನಿಸ್ ಆಡಲು ಶುರು ಮಾಡಿದರು. ವಸ್ತ್ರಾಪುರದಲ್ಲಿರುವ ಅಂಗವಿಕಲರ ಶಿಕ್ಷಣ ಸಂಸ್ಥೆಯಲ್ಲಿ ಭಾವಿನಾ ಅವರು ಐಟಿಐ ವಿದ್ಯಾರ್ಥಿಯಾಗಿದ್ದರು. ಅಂಧ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ಕಂಡು ಅವರು ಕ್ರೀಡಾಪಟು ಆಗಲು ನಿರ್ಧರಿಸಿದ್ದರು.

ಅಹಮದಾಬಾದ್‌ ರೋಟರಿ ಕ್ಲಬ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಭಾವಿನಾ ಅಲ್ಲಿದ್ದಾಗಲೇ ಮೊದಲ ಪದಕ ಗೆದ್ದುಕೊಂಡಿದ್ದರು. ಗುಜರಾತ್‌ನ ಜೂನಿಯರ್ ಕ್ರಿಕೆಟ್ ತಂಡದಲ್ಲಿ ಆಡಿದ್ದ ನಿಕುಂಜ್ ಪಟೇಲ್‌ ಅವರನ್ನು ವಿವಾಹವಾದ ನಂತರ ಅಹಮದಾಬಾದ್‌ನಲ್ಲೇ ನೆಲೆಸಿದರು. 2011ರಲ್ಲಿ ಪಿಟಿಟಿ ಥಾಯ್ಲೆಂಡ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ನಂತರ ಅವರು ವಿಶ್ವ ಕ್ರಮಾಂಕದಲ್ಲಿ ಎರಡನೇ ರ್‍ಯಾಂಕಿಂಗ್‌ ಗಳಿಸಿದ್ದರು. 2013ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗಳಿಸಿದ್ದರು.

ಮನೆಯೊಳಗೇ ತಮ್ಮನ್ನು ತಾವು ಬಂಧಿಯಾಗಿಸಿಕೊಂಡಿರುವ ಮಹಿಳೆಯರೆಲ್ಲರೂ ತಮ್ಮ ಶಕ್ತಿ–ಸಾಮರ್ಥ್ಯವನ್ನು ಅರಿತು ಸಾಧನೆ ಮಾಡಲು ಮುಂದಾಗಬೇಕು. ಹಾಗೆ ಮಾಡಲು ಮನಸ್ಸು ಮಾಡದೇ ಇದ್ದರೆ ನನಗೆ ಈಗ ಈ ಪದಕ ಒಲಿಯುತ್ತಿರಲಿಲ್ಲ.

ಭಾವಿನಾ ಬೆನ್‌ ಪಟೇಲ್ ಬೆಳ್ಳಿ ಪದಕ ವಿಜೇತ ಅಥ್ಲೀಟ್‌

ಗುಜರಾತ್ ಸರ್ಕಾರದಿಂದ ₹ 3 ಕೋಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಒಳಗೊಂಡಂತೆ ಪ್ರಮುಖರು ಭಾವಿನಾ ಅವರನ್ನು ಅಭಿನಂದಿಸಿದ್ದಾರೆ. ಫೈನಲ್ ಪಂದ್ಯದ ನಂತರ ಮೋದಿ ಅವರು ಕರೆ ಮಾಡಿ ಭಾವಿನಾ ಅವರೊಂದಿಗೆ ಮಾತನಾಡಿದ್ದಾರೆ. ಪದಕ ವಿಜೇತೆಗೆ ₹ 3 ಕೋಟಿ ನೀಡುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.