ADVERTISEMENT

ಲೈಂಗಿಕ ದೌರ್ಜನ್ಯ: ಎಫ್‌ಬಿಐ ವಿರುದ್ಧ ಹರಿಹಾಯ್ದ ಬೈಲ್ಸ್

ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಸೆನೆಟ್ ಸಮಿತಿ ಮುಂದೆ ಹೇಳಿಕೆ ನೀಡಿದ ಜಿಮ್ನಾಸ್ಟಿಕ್ಸ್ ತಾರೆಯರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:20 IST
Last Updated 16 ಸೆಪ್ಟೆಂಬರ್ 2021, 19:20 IST

ವಾಷಿಂಗ್ಟನ್ (ಎಎಫ್‌ಪಿ): ಒಲಿಂಪಿಕ್ಸ್‌ನಲ್ಲಿ ಕೊರಳ ತುಂಬಾ ಚಿನ್ನದ ಪದಕಗಳನ್ನು ಧರಿಸಿ ನಗುಬೀರುವ ಅಮೆರಿಕದ ಜಿಮ್ನಾಸ್ಟ್ ಸಿಮೊನ್ ಬೈಲ್ಸ್‌ ಬುಧವಾರ ಮಾತ್ರ ಕ್ರುದ್ಧರಾಗಿದ್ದರು, ದುಃಖದಿಂದ ಕಣ್ಣೀರ ಕೋಡಿ ಹರಿಸಿದರು.

ಈ ಹಿಂದೆ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.

ತಮ್ಮ ತಂಡದ ವೈದ್ಯ ಲ್ಯಾರಿ ನಾಸರ್ ಮಾಡಿದ ದೌರ್ಜನ್ಯಗಳ ಕುರಿತು ತಾವು ದೂರು ಕೊಟ್ಟಾಗ ಎಫ್‌ಬಿಐ ಅಧಿಕಾರಿಗಳು ಮತ್ತು ಅಮೆರಿಕ ಜಿಮ್ನಾಸ್ಟಿಕ್ಸ್ ಫೆಡರೇಷನ್ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಧೋರಣೆಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು. ಅವರೊಂದಿಗೆ ಇದ್ದ ಮೂವರು ಜಿಮ್ನಾಸ್ಟ್‌ಗಳೂ ತಮ್ಮ ಮೇಲಿನ ದೌರ್ಜನ್ಯದ ಘಟನೆಗಳನ್ನು ಬಹಿರಂಗಪಡಿಸಿದರು.

ADVERTISEMENT

58 ವರ್ಷದ ಲ್ಯಾರಿ ನಾಸರ್‌ಗೆ2018ರಲ್ಲಿಯೇ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜೈಲಿಗೆ ತಳ್ಳಲಾಗಿದೆ.

ಅಮೆರಿಕ ಜಿಮ್ನಾಸ್ಟಿಕ್ಸ್ ಮತ್ತು ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (ಎಂಎಸ್‌ಯು) ವೈದ್ಯನಾಗಿದ್ದ ಲ್ಯಾರಿ ಮೇಲೆ 70ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದ. 2015ರಲ್ಲಿಯೇ ಅಮೆರಿಕ ಜಿಮ್ನಾಸ್ಟಿಕ್ಸ್‌ ಎಫ್‌ಬಿಐಗೆ ದೂರು ನೀಡಿತ್ತು. ಆದರೂ ನಾಸರ್ ತನ್ನ ಹುದ್ದೆಯಲ್ಲಿ ಮುಂದುವರಿದಿದ್ದ. 2016ರಲ್ಲಿ ಸುದ್ದಿಪತ್ರಿಕೆಯೊಂದು ಆತನ ಕರ್ಮಕಾಂಡಗಳ ಲೇಖನ ಪ್ರಕಟಿಸಿದಾಗ ಎಫ್‌ಬಿಐ ಗಂಭೀರ ಕ್ರಮಕ್ಕೆ ಮುಂದಾಯಿತು.

ಲ್ಯಾರಿಯಿಂದ ದೌರ್ಜನ್ಯಕ್ಕೊಳಗಾಗದ ಪ್ರಮುಖರಲ್ಲಿ ಬೈಲ್ಸ್‌ ಕೂಡ ಒಬ್ಬರು. ಅವರೊಂದಿಗೆ ಇನ್ನೂ ಮೂವರು ಜಿಮ್ನಾಸ್ಟ್‌ಗಳಾದ ಮೆಕೈಲಾ ಮೆರೊನಿ, ಅಲೈ ರೈಸಮನ್ ಮತ್ತು ಮ್ಯಾಗಿ ನಿಕೋಲ್ಸ್‌ ಕೂಡ ತಮ್ಮ ಹೇಳಿಕೆಗಳನ್ನು ದಾಖಲಿಸಿದರು. ಅವರು ಕೂಡ ಎಫ್‌ಬಿಐ ಕಾರ್ಯವೈಖರಿಯನ್ನು ಖಂಡಿಸಿದರು.

‘ನಾವು ದೂರುಗಳನ್ನು ಕೊಟ್ಟಾಗ ಯಾವುದೇ ಉತ್ತರಗಳನ್ನು ಪಡೆಯುವಲ್ಲಿ ನಾವು ಸಫಲರಾಗಿರಲಿಲ್ಲ. ಆದರೆ ಒಂದಂತೂ ಸ್ಪಷ್ಟವಾಗಿದ್ದು ಏನೆಂದರೆ, ನಾನು ಲ್ಯಾರಿಯನ್ನು ಖಂಡಿಸುವಷ್ಟೇ, ಇಡೀ ವ್ಯವಸ್ಥೆಯನ್ನೂ ದೂಷಿಸುತ್ತೇನೆ. ಅವನ ವಿಕೃತ ಕಾರ್ಯಗಳಿಗೆ ಕಡಿವಾಣ ಹಾಕದ ವ್ಯವಸ್ಥೆಗೆ ಧಿಕ್ಕಾರವಿದೆ‘ ಎಂದು 24 ವರ್ಷದ ಬೈಲ್ಸ್‌ ಆಕ್ರೋಶ ವ್ಯಕ್ತಪಡಿಸಿದರು.

‘ಎಫ್‌ಬಿಐ, ಯುಎಸ್‌ಎಜಿ ಅಥವಾ ಯುಎಸ್‌ಒಪಿಸಿ ನಮ್ಮ ಅಹವಾಲುಗಳಿಗೆ ಸ್ಪಂದಿಸಲಿಲ್ಲ. ಅವರು ಅಗತ್ಯವಾದ ಕ್ರಮಕೈಗೊಳ್ಳದ ಕಾರಣದಿಂದಾಗಿಯೇ ನಾವು ಬಹಳಷ್ಟು ಯಾತನೆ ಅನುಭವಿಸಬೇಕಾಯಿತು’ ಎಂದು ಬೈಲ್ಸ್ ಕಣ್ಣೀರು ಹಾಕಿದರು. ಬೈಲ್ಸ್‌ ಒಲಿಂಪಿಕ್ ಕೂಟಗಳಲ್ಲಿ ಏಳು ಪದಕಗಳನ್ನು ಗೆದ್ದಿರುವ ಜಿಮ್ನಾಸ್ಟ್.

ಇದೇ ಸಂದರ್ಭದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ 2012ರ ಲಂಡನ್ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಮರೊನಿ, ‘ಫೆಡರಲ್ ಬ್ಯುರೊ ಆಫ್ ಇನ್ವೆಸ್ಟಿಗೇಷನ್ ಏಜೆಂಟ್‌ ಒಬ್ಬರಿಗೆ 2015ರಲ್ಲಿ ದೂರವಾಣಿ ಮೂಲಕ ಮೂರು ತಾಸುಗಳ ಕಾಲ ಮಾತನಾಡಿ ದೂರು ಕೊಟ್ಟಿದ್ದೆ. ಆದರೆ ಆಗ ಪ್ರಕರಣ ದಾಖಲಾಗಲಿಲ್ಲ. 17 ತಿಂಗಳುಗಳ ನಂತರ ದಾಖಲಾಯಿತು. ಅದರಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿತ್ತು’ ಎಂದು ದೂರಿದರು.

‘ನಾನು ಆಗಿನ್ನೂ ಬಾಲಕಿ. ಲ್ಯಾರಿ ಅಸಭ್ಯವಾಗಿ ವರ್ತಿಸುತ್ತಿದ್ದ. ಬಾಲಕಿಯರ ಮೇಲೆ ಆತನ ದೌರ್ಜನ್ಯದ ಕುರಿತು ಸಾಕ್ಷಿಗಳನ್ನು ಒದಗಿಸಿದ್ದರೂ ಎಫ್‌ಬಿಐ ಕ್ರಮ ಕೈಗೊಂಡಿರಲಿಲ್ಲ’ ಎಂದು 25 ವರ್ಷದ ಮರೊನಿ ಅಸಮಾಧಾನ ವ್ಯಕ್ತಪಡಿಸಿದರು.

‘2015ರಲ್ಲಿ ನಾನು ಲ್ಯಾರಿ ವಿರುದ್ಧ ದೂರು ದಾಖಲಿಸಿದ ನಂತರವೂ ಕ್ರಮ ಜರುಗಿಸಲಿಲ್ಲ. ಆದರಿಂದಾಗಿ ಮತ್ತಷ್ಟು ಹೆಣ್ಣುಮಕ್ಕಳು ಆತನ ದೌರ್ಜನ್ಯಕ್ಕೆ ತುತ್ತಾಗಬೇಕಾಯಿತು. ಅಮೆರಿಕ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯು ನಮಗೆ ದ್ರೋಹ ಬಗೆಯಿತು’ ಎಂದು 2015ರ ವಿಶ್ವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಮ್ಯಾಗಿ ನಿಕೋಲ್ಸ್‌ ದೂರಿದರು.

2012 ಮತ್ತು 2016ರಲ್ಲಿ ಅಮೆರಿಕ ಒಲಿಂಪಿಕ್ ತಂಡಗಳ ನಾಯಕಿಯಾಗಿದ್ದ ರೈಸ್‌ಮನ್ ಕೂಡ ಈ ಸಂದರ್ಭದಲ್ಲಿ ಹೇಳಿಕೆ ದಾಖಲಿಸಿದರು.

‘ಆತನ ಮೇಲೆ ಕ್ರಮ ಕೈಗೊಳ್ಳುವುದನ್ನು ವಿಳಂಬ ಮಾಡಿದ್ದು, ಮುಗ್ಧ ಮಕ್ಕಳ ಮೇಲೆ ದೌರ್ಜನ್ಯ ಎಸಗಲು ವಿಕೃತಕಾಮಿಯೊಬ್ಬನಿಗೆ ಬೆಳ್ಳಿತಟ್ಟೆಯ ಔತಣಕೂಟ ನೀಡಿದಂತಾಯಿತು‘ ಎಂದು ರೈಸ್‌ಮನ್ ಹೇಳಿದರು.

ಇದೇ ಸಂದರ್ಭದಲ್ಲಿ ಸೆನೆಟ್ ಮುಂದೆ ಹಾಜರಾಗಿದ್ದ ಎಫ್‌ಬಿಐ ನಿರ್ದೇಶಕ ಕ್ರಿಸ್ಟೊಫರ್ ವೆರಿ, ‘ನಿಮ್ಮನ್ನೆಲ್ಲ ಪದೇ ಪದೇ ಅವಮಾನಿಸಿದ ಎಫ್‌ಬಿಐ ವ್ಯವಸ್ಥೆಯ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಲ್ಯಾರಿ ತನ್ನ ಪೈಶಾಚಿಕ ಕೃತ್ಯಗಳನ್ನು ಮಾಡಲು ಸಾಧ್ಯವಾಯಿತು. 2015ರಲ್ಲಿಯೇ ಗಂಭೀರ ಕ್ರಮಕೈಗೊಂಡು ಮಟ್ಟ ಹಾಕಿದ್ದರೆ ನಂತರದ ವರ್ಷಗಳಲ್ಲಿ ಮುಗ್ಧರನ್ನು ಕಾಪಾಡಬಹುದಿತ್ತು’ ಎಂದರು.

ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಯನ್ನು ಆಗಲೇ ವಜಾ ಮಾಡಲಾಗಿತ್ತು ಎಂದೂ ಕ್ರಿಸ್ಟೋಫರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.